ರಾಷ್ಟ್ರೀಯ

ಡೆಬಿಟ್-ಕ್ರೆಡಿಟ್ ಕಾರ್ಡ್ ಉಜ್ಜಿರಿ, ತೆರಿಗೆ ಉಳಿಸಿರಿ

Pinterest LinkedIn Tumblr

card

ನವದೆಹಲಿ: ದೇಶದೊಳಗೆ ಕಾಳಧನದ ಹರಿವಿನ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳ ಮೂಲಕ ಹಣ ಪಾವತಿ ಮಾಡುವವರಿಗೆ ಆದಾಯ ತೆರಿಗೆ ವಿನಾಯಿತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಹಣಕಾಸು ಸಚಿವಾಲಯ ಸರ್ಕಾರದ ಮುಂದಿಟ್ಟಿರುವ ಈ ಪ್ರಸ್ತಾಪಕ್ಕೆ ಒಪ್ಪಿಗೆ ದೊರೆತರೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‍ಗಳ ಮೂಲಕ ಪೆಟ್ರೋಲ್, ಗ್ಯಾಸ್ ಹಾಗೂ ರೈಲ್ವೆ ಟಿಕೆಟ್ ಗಾಗಿ ಮಾಡುವ ಪಾವತಿ ಮೇಲೆ ವರ್ಗಾವಣೆ ಶುಲ್ಕ ರದ್ದಾಗಲಿದೆ. ಹಣ ರಹಿತ ಆರ್ಥಿಕತೆ ಉತ್ತೇಜಿಸಲು ಹಾಗೂ ತೆರಿಗೆಗಳ್ಳತನ ನಿಗ್ರಹ ಉದ್ದೇಶವನ್ನಿಟ್ಟುಕೊಂಡು ಹಣಕಾಸು ಸಚಿವಾಲಯ ಈ ಪ್ರಸ್ತಾಪ ಮುಂದಿಟ್ಟಿದ್ದು, 1 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳ ಖರೀದಿಯನ್ನು ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕವೇ ನಡೆಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಅಂಗಡಿ ಮಾಲೀಕರಿಗೂ…: ಗ್ರಾಹಕರಿಗೆ ಮಾತ್ರವಲ್ಲ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕವೇ ಗ್ರಾಹಕರಿಂದ ಹಣ ವಸೂಲಿ ಮಾಡಿದರೆ ಅಂಥ ಅಂಗಡಿಗಳ ಮಾಲೀಕರಿಗೂ ಕೆಲವೊಂದು ತೆರಿಗೆ ವಿನಾಯ್ತಿ ನೀಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ. ಶೇ. 50ರಷ್ಟು ವ್ಯವಹಾರವನ್ನು ಪ್ಲಾಸ್ಟಿಕ್ ಹಣದ ಮೂಲಕವೇ ನಡೆಸುವ ಅಂಗಡಿಗಳಿಗೆ ಈ ಸೌಲಭ್ಯ ಸಿಗಲಿದೆ. ಮೌಲ್ಯವರ್ದಿತ ತೆರಿಗೆಯಲ್ಲಿ ಶೇ.1ರಿಂದ 2ರಷ್ಟು ವಿನಾಯ್ತಿ ನೀಡುವ ಕುರಿತು ಸರ್ಕಾರ ಯೋಚಿಸುತ್ತಿದೆ. ಈ ಸಂಬಂಧ ಜೂ.29ರೊಳಗೆ ಸಾರ್ವಜನಿಕರಿಂದ ಅಭಿಪ್ರಾಯ ಕೇಳಿದೆ. ಸರ್ಕಾರದ ಅಧಿಕೃತ ವೆಬ್‍ಸೈಟ್ WWW. mygov.in ನಲ್ಲಿ ಅಭಿಪ್ರಾಯ ಸಲ್ಲಿಸಬಹುದಾಗಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್‍ನಲ್ಲಿ ಕ್ರೆಡಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಹಣಕಾಸು ವ್ಯವಹಾರ ನಡೆಸುವವರಿಗೆ ಹೆಚ್ಚಿನ ವಿನಾಯ್ತಿಗಳನ್ನು ಕಲ್ಪಿಸುವ ಪ್ರಸ್ತಾಪ ಮಾಡಿದ್ದರು.

ಎರಡು ತಿಂಗಳ ಅವಧಿಯ ವಿಶೇಷ ಗವಾಕ್ಷಿ: ವಿದೇಶದಲ್ಲಿ ತೆರಿಗೆ ತಪ್ಪಿಸಿ ಹಣ ಅಥವಾ ಆಸ್ತಿ ಮಾಡಿಟ್ಟವರಿಗೆ ಈ ಕುರಿತು ಸ್ವಯಂ ಮಾಹಿತಿ ಬಹಿರಂಗಪಡಿಸಲು ಎರಡು ತಿಂಗಳ ಅವಧಿಯವರೆಗೆ ವಿಶೇಷ ಗವಾಕ್ಷಿಯನ್ನು ತೆರೆಯಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ.

ಈ ಎರಡು ತಿಂಗಳ ಅವಧಿಯಲ್ಲಿ ವಿದೇಶದಲ್ಲಿ ಹಣ ಇಟ್ಟವರು ಸ್ವಪ್ರೇರಣೆಯಿಂದ ತಮ್ಮ ಆಸ್ತಿ ವಿವರವನ್ನು ಘೋಷಿಸಬೇಕು. ಇಲ್ಲವಾದರೆ ಕಠಿಣ ಕ್ರಮ ಎದುರಿಸಲು ಸಿದ್ಧರಾಗಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

Write A Comment