ರಾಷ್ಟ್ರೀಯ

ನಾಮ ಹಾಕುವಲ್ಲಿ ಎಡವಟ್ಟು; ತಿರುಪತಿ ಅರ್ಚಕ ಅಮಾನತು

Pinterest LinkedIn Tumblr

naaamaa change1

ನವದೆಹಲಿ: ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ಕಳೆದ ವಾರಾಂತ್ಯದಲ್ಲಿ ದೇವಸ್ಥಾನದ ಮುಖ್ಯ ಅರ್ಚಕ ಎ.ವಿ. ರಮಣ ದೀಕ್ಷಿತುಲು ಅವರ ಪುತ್ರ, ಹಿರಿಯ ಅರ್ಚಕ ಎ.ವಿ. ಅರುಣ್‌ ಕುಮಾರ್‌ರನ್ನು ಅಮಾನತು ಮಾಡಿದೆ.

ತಿರುಮಲ ಮಠದ ಪರಂಪರಾಗತ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಅರ್ಚಕರು ವೆಂಕಟೇಶ್ವರ ದೇವರ ಮೂರ್ತಿಗೆ ವಡಗಲೈ ಪದ್ಧತಿಯ ನಾಮದ ಬದಲಿಗೆ ತೆಂಗಲೈ ನಾಮವನ್ನು ಹಚ್ಚಿದ್ದಾರೆ ಎಂದು ಮಠ ಆರೋಪಿಸಿದೆ. ತಿರುಮಲ ವೆಂಕಟೇಶ್ವರ ದೇವರಿಗೆ ವಡಗಲೈ ನಾಮವೇ ಹೆಗ್ಗುರುತಾಗಿದೆ.

ವಡಗಲೈ ಪದ್ಧತಿಯ ನಾಮವು ಇಂಗ್ಲಿಷ್‌ ಅಕ್ಷರ ‘ಯು’ ಆಕಾರದಲ್ಲಿದ್ದು ಮಧ್ಯದಲ್ಲಿ ಹಳದಿ ಗೆರೆ ಇರುತ್ತದೆ. ತೆಂಗಲೈ ಪದ್ಧತಿಯಲ್ಲಿ ನಾಮವು ಇಂಗ್ಲಿಷ್‌ನ ‘ವೈ’ ಆಕಾರದಲ್ಲಿದ್ದು ಮಧ್ಯದಲ್ಲಿ ಕೆಂಪು ತಿಲಕ ಇರುತ್ತದೆ.

ವೈಖನಾಸ ವೈಷ್ಣವ ಪರಂಪರೆಯ ಎರಡು ಗುಂಪುಗಳಾದ ತೆಂಗಲೈ ಮತ್ತು ವಡಗಲೈ ನಡುವೆ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಭಾರಿ ಪ್ರತಿಸ್ಪರ್ಧೆಯೇ ಇದೆ. ವೈಖನಾಸ ಪರಂಪರೆಯ ಆಯ್ದ ಅರ್ಚಕರಿಗೆ ಮಾತ್ರ ಕರ್ಪೂರ ಮತ್ತು ಕುಂಕುಮದಿಂದ ತಯಾರಿಸಲಾದ ನಾಮವನ್ನು ಹಚ್ಚುವ ಅವಕಾಶ ನೀಡಲಾಗುತ್ತದೆ.

ಇದು ಪ್ರತಿ ದಿನ ಬೆಳಿಗ್ಗೆ ನಡೆಯುತ್ತದೆ. 128 ಅಡಿ ಎತ್ತರದ ಮೂರ್ತಿಯ ನಾಮ ದೇವಸ್ಥಾನಕ್ಕೆ ಬರುವವರಿಗೆ ಸುಮಾರು ಅರ್ಧ ಫರ್ಲಾಂಗು ದೂರದಿಂದಲೇ ಕಾಣಿ ಸುತ್ತದೆ. ಅರ್ಚಕರು ಹೇಳುವ ಪ್ರಕಾರ, ನಾಮದ ಗಾತ್ರ, ಆಕಾರ ಮತ್ತು ಇತರ ವಿವರಗಳು ವೈಖನಾಸ ಆಗಮ ಶಾಸ್ತ್ರದ ಆಧಾರದಲ್ಲಿ ರೂಪಿತವಾಗಿವೆ.

ನಾಮದಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಿ ತಿರುಮಲ ಮಠದ ಮುಖ್ಯಸ್ಥರು ದೇವಸ್ಥಾನ ಮಂಡಳಿಗೆ ದೂರು ನೀಡಿದ್ದರು. ನಂತರ ಮಂಡಳಿಯು ಈ ಅರ್ಚಕರ ಮೇಲೆ ನಿಗಾ ಇರಿಸಿತ್ತು. ಮತ್ತೆಯೂ ಅವರು ತಪ್ಪನ್ನು ಪುನರಾವರ್ತಿಸಿದ್ದರಿಂದ ಅಭಿಷೇಕ ಕರ್ತವ್ಯದಿಂದ ಅವರನ್ನು ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಈ ಆರೋಪವನ್ನು ದೇವ ಸ್ಥಾನದ ಮುಖ್ಯ ಅರ್ಚಕ ಎ. ವಿ. ರಮಣ ದೀಕ್ಷಿತುಲು ನಿರಾಕರಿಸಿದ್ದಾರೆ.

Write A Comment