ರಾಷ್ಟ್ರೀಯ

ನೋಟಿಸ್ ನೀಡದೆ ಕಾನೂನು ಸಚಿವರನ್ನು ಬಂಧಿಸಿದ ದೆಹಲಿ ಪೊಲೀಸರು

Pinterest LinkedIn Tumblr

arrest

ನವದೆಹಲಿ: ನಕಲಿ ಪದವಿ ಪ್ರಮಾಣ ಪತ್ರಗಳನ್ನು ಹೊಂದಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಆಪ್ ಸರ್ಕಾರದ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ.

ಹೌದು, ಕಾನೂನು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿತೇಂದರ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದಾಗಿ ಆಪ್‌ನ ಮತ್ತೋರ್ವ ನಾಯಕ ಸಂಜಯ್ ಸಿಂಗ್ ಅವರು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಟ್ವೀಟ್‌ ವಿವರ:
ಯಾವುದೇ ಮುನ್ಸೂಚನೆಗಳಿಲ್ಲದೆ ಸಚಿವ ಜಿತೇಂದ್ರ ತೋಮರ್ ಅವರನ್ನು ಬಂಧಿಸಲಾಗಿದ್ದು, ನಿಯಮಾನುಸಾರವಾಗಿ ನೀಡಬೇಕಿದ್ದ ನೋಟಿಸ್ ಕೂಡ ನೀಡಲಾಗಿಲ್ಲ ಎಂದು ಗುಡುಗಿರುವ ಅವರು, ಕೇಂದ್ರ ಸರ್ಕಾರವು ಪರೋಕ್ಷವಾಗಿ ಪೊಲೀಸರ ಮೂಲಕ ಈ ಕೃತ್ಯಗಳನ್ನು ಎಸಗುತ್ತಿದೆ. ಅಷ್ಟೇ ಅಲ್ಲದೆ ಈ ಮೂಲಕ ಆಪ್ ಸರ್ಕಾರದ ಮೇಲೆ ಒತ್ತಡ ತಂದು ಮುಜುಗರಕ್ಕೀಡು ಮಾಡುವ ಪ್ರಯತ್ನದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ತೋಮರ್ ವಿರುದ್ಧ ಲಂಚ ನೀಡಿ ನಕಲಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಎಂಬ ಆರೋಪವಿತ್ತು. ಅಲ್ಲದೆ ಈ ಬಗ್ಗೆ ದೆಹಲಿಯಲ್ಲಿನ ಬಾರ್ ಕೌನ್ಸಿಲ್ ಕೂಡ ಸಚಿವರು ಪಡೆದಿರುವ ಎಲ್ಲಾ ಅಂಕಪಟ್ಟಿಗಳೂ ಕೂಡ ನಕಲಿ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸಚಿವರನ್ನು ಇಂದು ಬಂಧಿಸಿದ್ದಾರೆ.

ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕಿರುವುದು ನಿಯಮವಾಗಿದ್ದು, ಈ ವೇಳೆ ಸಚಿವರು ಜಾಮೀನನ್ನೂ ಪಡೆಯುವ ಅವಕಾಶ ಹೊಂದಿದ್ದಾರೆ.

ಇನ್ನು ಈ ಪ್ರಕರಣ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಚಿವರಿದಂಲೇ ನೇರವಾಗಿ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳಿದ್ದರು.

Write A Comment