ರಾಷ್ಟ್ರೀಯ

ಸುನಂದಾ ಸಾವು ಸಹಜ ಸಾವು ಎಂದು ವರದಿ ನೀಡುವಂತೆ ವೈದ್ಯರ ಮೇಲೆ ಒತ್ತಡ; ಹೊಸ ತಿರುವು

Pinterest LinkedIn Tumblr

sunandapushkar

ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣ ದಿನ ಕಳೆದಂತೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಸುನಂದಾ ಸಾವು ಸಹಜ ಸಾವು ಎಂದು ವರದಿ ನೀಡುವಂತೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಮೇಲೆ ಒತ್ತಡವಿತ್ತು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ ಡಾ.ಆದರ್ಶ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಡಾ.ಆದರ್ಶ್ ಕುಮಾರ್ ಅವರು, ಸುನಂದಾ ಅವರದ್ದು ಸ್ವಾಭಾವಿಕ ಸಾವು ಎಂದು ವರದಿ ನೀಡುವಂತೆ ಶವ ಪರೀಕ್ಷೆ ನಡೆಸಿದ ಡಾ. ಶಶಾಂಕ್ ಪುನಿಯಾ, ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಡಾ. ಸುದೀಂದ್ರ ಗುಪ್ತಾ ತಂಡದ ಮೇಲೆ ಒತ್ತಡವಿತ್ತು ಎಂದು ಆರೋಪಿಸಿದ್ದಾರೆ.

ಆದರ್ಶ್ ಕುಮಾರ್ ಅವರು ಶವ ಪರೀಕ್ಷೆ ನಡೆಸಿದ ತಂಡದಲ್ಲಿದ್ದ ತಜ್ಞ ವೈದ್ಯರಾಗಿದ್ದು, ತಾವು ಯಾವುದೇ ಒತ್ತಡಕ್ಕೆ ಮಣಿಯದೇ, ವಸ್ತು ಸ್ಥಿತಿ ವರದಿ ನೀಡಿದ್ದೇವು ಎಂದು ಹೇಳಿದ್ದಾರೆ.

ಕಳೆದ ಡಿಸೆಂಬರ್ 29ರಂದು ಏಮ್ಸ್ ಆಸ್ಪತ್ರೆಯ ವೈದ್ಯರು ಸುನಂದಾ ಪುಷ್ಕರ್ ಅವರ ಸಾವು ಅಸಹಜ ಸಾವು ಎಂದು ಮರಣೋತ್ತರ ಪರೀಕ್ಷಾ ವರದಿ ನೀಡಿದ್ದರು. ಈ ವರದಿಯನ್ನು ಆಧರಿಸಿ ದೆಹಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

2014 ಜನವರಿ 17ರಂದು ದೆಹಲಿಯ ಖಾಸಗಿ ಹೊಟೆಲ್‌ನಲ್ಲಿ ಸುನಂದಾ ಪುಷ್ಕರ್ ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಲೋಕಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕಲಾಪದಲ್ಲಿ ಪಾಲ್ಗೊಂಡಿದ್ದ ಪತಿ ಶಶಿತರೂರ್ ಅವರೊಂದಿಗೆ ಸುನಂದ ಪುಷ್ಕರ್ ಅವರು ಖಾಸಗಿ ಹೊಟೆಲ್‌ನಲ್ಲಿ ತಂಗಿದ್ದರು. ಆದರೆ ಜನವರಿ 17ರ ರಾತ್ರಿ ವೇಳೆಗೆ ಸುನಂದಾ ಪುಷ್ಕರ್ ಅವರು ತಮ್ಮ ಕೊಠಡಿಯಲ್ಲಿಯೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.

Write A Comment