ರಾಷ್ಟ್ರೀಯ

ಅತ್ಯಾಧುನಿಕ ಮೊಬೈಲ್‌-ಗ್ಯಾಜೆಟ್‌ ಆಸೆಗೆ ವೇಶ್ಯಾವಾಟಿಕೆಗೆ ಇಳಿದ 13ರ ಬಾಲಕಿ

Pinterest LinkedIn Tumblr

guj-gal

ವಡೋದರಾ: ಹದಿಹರೆಯದವರ ಗ್ಯಾಜೆಟ್‌ ಗೀಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಆದರೆ, ಗುಜರಾತಿನ ಅಪ್ರಾಪ್ತ ವಯಸ್ಸಿನ ಬಾಲಕಿ ಗ್ಯಾಜೆಟ್‌ ಆಸೆಗೆ ವರ್ಷದ ಹಿಂದೆಯೇ ವೇಶ್ಯಾವಾಟಿಕೆಗೆ ಇಳಿದ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಧುನಿಕ ಮೊಬೈಲ್‌ ಹಾಗೂ ಗ್ಯಾಜೆಟ್‌ಗಳನ್ನು ಕೊಳ್ಳುವ ಹಂಬಲದಿಂದ ವೇಶ್ಯಾ ವೃತ್ತಿ ಹಿಡಿದೆ ಎಂದು 13 ವರ್ಷದ ಬಾಲಕಿ ತಿಳಿಸಿದಾಗ ಆಕೆಯ ತಾಯಿ ಹಾಗೂ ಆಪ್ತ ಸಮಾಲೋಚಕಿಗೆ ದಿಗ್ಭ್ರಮೆಯಾಗಿತ್ತು. ಆದರೆ, ತನ್ನ ನಡೆ ತಪ್ಪೆಂದು ಒಪ್ಪಿಕೊಳ್ಳಲು ಬಾಲಕಿ ಸಿದ್ಧವಿರಲಿಲ್ಲ. ಆಕೆಯ ಬಳಿ ಹಲವು ಅತ್ಯಾಥುನಿಕ ಗ್ಯಾಜೆಟ್‌, ಮೊಬೈಲ್‌ ಫೋನ್‌ಗಳು ಪತ್ತೆಯಾಗಿವೆ.

ಸುಭಾನ್‌ಪುರದಲ್ಲಿ ಬಾಲಕಿಯ ತಾಯಿ ಕಿರಾಣಿ ಅಂಗಡಿ ನಡೆಸುತ್ತಿದ್ದು, ಮಗಳು ಈ ವಿಷಯ ಬಾಯಿ ಬಿಡುವವರೆಗೂ ಅವರಿಗೆ ವಿಷಯ ತಿಳಿದಿರಲಿಲ್ಲ. ಗರ್ಭಿಣಿ ಆಗಿರಬಹುದೆಂಬ ಅನುಮಾನ ಮೂಡಿದ ಬಳಿಕ ಬಾಲಕಿ, ತಾಯಿಯ ಬಳಿ ವಿಷಯ ತಿಳಿಸಿದ್ದಳು.

‘ವೇಶ್ಯಾವಾಟಿಕೆ ಅಕ್ರಮ, ಅನೈತಿಕ ಎಂದು ಮಗಳಿಗೆ ಬುದ್ಧಿವಾದ ಹೇಳಿದರೂ,ಅದನ್ನು ಒಪ್ಪುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಆಗ ಅವರು ನಮಗೆ ಕರೆ ಮಾಡಿ ಸಹಾಯ ಕೋರಿದರು,’ ಎಂದು ಅಭಯಂನ ಆಪ್ತ ಸಮಾಲೋಚಕರು ಹೇಳಿದ್ದಾರೆ.

ದತ್ತು ಪುತ್ರಿ:

ಆನಂದ್‌ ಮೂಲದ ದಂಪತಿ ಬಾಲಕಿಯನ್ನು ದತ್ತು ಪಡೆದ ನಂತರ ವಡೋದರಾಗೆ ಸ್ಥಳಾಂತರಗೊಂಡಿದ್ದರು. ತಂದೆ ಸಾವಿನ ನಂತರ ತಾಯಿ ಮತ್ತು ಮಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಕುಟುಂಬ ನಿರ್ವಹಣೆಗಾಗಿ ತಾಯಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಕಾರಣ, ಮಗಳ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಸಮಾಲೋಚಕರು ತಿಳಿಸಿದ್ದಾರೆ.

ಫೋನ್‌ ಮೂಲಕ ಬಾಲಕಿ ಸ್ವತಂತ್ರವಾಗಿ ದಂಧೆ ನಡೆಸುತ್ತಿದ್ದಳು. ತಾಯಿ ಇಲ್ಲದ ಸಂದರ್ಭದಲ್ಲಿ ಮನೆಯನ್ನು ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಳು. ಸ್ನೇಹಿತರ ಬಳಿ ಇದ್ದ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಕೊಳ್ಳಲು ಹಣ ಇಲ್ಲದ ಕಾರಣ ಈ ಕೆಲಸಕ್ಕೆ ಇಳಿದಿದ್ದಾಗಿ ಆಪ್ತಸಮಾಲೋಚಕರಿಗೆ ಬಾಲಕಿ ತಿಳಿಸಿದ್ದಾಳೆ.

‘ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದ ಬಾಲಕಿಗೆ ಆಕೆಯ ವರ್ತನೆ ಸರಿಯಲ್ಲ ಎಂದು ಮನದಟ್ಟು ಮಾಡಿಸಲು ಸಾಕಷ್ಟು ಸಮಯ ಹಿಡಿಯಿತು. ಕೆಟ್ಟ ಸ್ನೇಹಿತರ ಸಹವಾಸದಿಂದ ಆಕೆ ದಾರಿ ತಪ್ಪಿದ್ದಳು. ಬಾಲಕಿಯ ಆಪ್ತ ಸ್ನೇಹಿತರಿಗೆ ಈ ವಿಷಯ ತಿಳಿದಿತ್ತು,’ ಎಂದು ಸಮಾಲೋಚಕರು ಹೇಳಿದ್ದಾರೆ.

Write A Comment