ರಾಷ್ಟ್ರೀಯ

370ನೇ ವಿಧಿ ಹಿಂಪಡೆಯುವ ವಿಚಾರದಲ್ಲಿ ಪ್ರತಿಭಟನೆ: ಭಾರತದಲ್ಲಿ ಪಾಕ್ ಪರ ಘೋಷಣೆ ಸಹಿಸಲಸಾಧ್ಯ: ರಾಜ್ ನಾಥ್ ಸಿಂಗ್

Pinterest LinkedIn Tumblr

Rajnath-Singh

ನವದೆಹಲಿ: ಭಾರತದಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುವುದನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ ಎಂದು ಮಂಗಳವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸಂವಿಧಾನದ ವಿಧಿ 370ನ್ನು ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರತ್ಯೇಕತಾ ವಾದಿಗಳು ನಡೆಸುತ್ತಿರುವ ಪ್ರತಿಭಟನೆ ವಿರುದ್ಧ ಕಿಡಿಕಾರಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾರತದಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ವಿಧಿ 370ಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕಣಿವೆ ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದಲ್ಲಿ ಪಾಲ್ಗೊಂಡಿದ್ದು, ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯ ನಡೆಸುವ ಅವಕಾಶ ದೊರೆತಿದೆ. ಮೊದಲು ಆ ಕಾರ್ಯ ನೆರವೇರಲು ಅವಕಾಶ ನೀಡಿ ಎಂದು ರಾಜನಾಥ್ ಸಿಂಗ್ ಹೇಳಿದರು.

ಇದೇ ವೇಳೆ ಸಂವಿಧಾನದ ವಿಧಿ 370ಕ್ಕೆ ತಿದ್ದುಪಡಿ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಪ್ರತಿಭಟನೆ ವಿರುದ್ಧ ಕಿಡಿಕಾರಿದ ಅವರು, ನಾವು ಏನು ಮಾಡಬೇಕು ಎಂದು ಅಂದುಕೊಂಡಿದ್ದೇವೆಯೋ ಅದನ್ನು ಎಲ್ಲ ಪ್ರಜೆಗಳನ್ನು ಗಣನೆಗೆ ತೆಗೆದುಕೊಂಡು ಮಾಡಿಯೇ ತೀರುತ್ತೇವೆ. ಆದರೆ ನಮ್ಮ ಮಣ್ಣಿನಲ್ಲಿ ಪಾಕಿಸ್ತಾನದ ಧ್ವಜ ಹಿಡಿದು ಆ ದೇಶದ ಪರ ಘೋಷಣೆಗಳನ್ನು ಕೂಗುವುದನ್ನು ನಾವು ಸಹಿಸುವುದಿಲ್ಲ. ಬಿಜೆಪಿ ಭಾರತದಲ್ಲಿರುವ ಎಲ್ಲರನ್ನೂ ಭಾರತೀಯರೆಂದೇ ಪರಿಗಣಿಸಿದೆ. ಅದು ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಯಾರು ಬೇಕಾದರೂ ಆಗಿರಬಹುದು ಎಲ್ಲರೂ ಭಾರತೀಯರೇ.

ಆದರೆ ಭಾರತದ ನೆಲದ ಮೇಲೆ ನಿಂತು ಪಾಕಿಸ್ತಾನದ ಪರ ಧ್ವಜ ಪ್ರದರ್ಶನ ಮಾಡುವುದು ಅಥವಾ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುವುದನ್ನು ನಾವು ಸಹಿಸುವುದಿಲ್ಲ. ಮಸರತ್ ಆಲಂ ಬಂಧನ ಪ್ರಕರಣ ಎಲ್ಲರಿಗೂ ತಿಳಿದ ವಿಚಾರವೇ ಎಂದು ಹೇಳುವ ಮೂಲಕ ಪಾಕ್ ಪರ ಘೋಷಣೆಗಳನ್ನು ಕೂಗುವ ಪ್ರತ್ಯೇಕತಾವಾದಿಗಳಿಗೆ ಆಲಂಗೆ ಬಂದ ಗತಿಯೇ ಬರುತ್ತದೆ ಎಂದು ರಾಜನಾಥ್ ಸಿಂಗ್ ಪರೋಕ್ಷ ಎಚ್ಚರಿಕೆ ನೀಡಿದರು.

ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಕಾಲೋನಿ: ಸರ್ಕಾರದೊಂದಿಗೆ ಮಾತುಕತೆ

ಇದೇ ವೇಳೆ ಕಾಶ್ನೀರದಲ್ಲಿ ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಕಾಲೋನಿ ಕಲ್ಪಿಸುವ ಕುರಿತು ಮಾತನಾಡಿದ ರಾಜನಾಥ್ ಸಿಂಗ್ ಅವರು, ಈ ಬಗ್ಗೆ ಕಾಶ್ಮೀರ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ. ನಾವು ಈಗಾಗಲೇ ಈ ಬಗ್ಗೆ ನಿಧಿಯನ್ನು ಸ್ಥಾಪಿಸಿದ್ದು, ಸರ್ಕಾರದಿಂದ ಭೂಮಿ ದೊರೆತ ಬಳಿಕ ಕಾಶ್ಮೀರಿ ಪಂಡಿತರಿಗೆ ಶಾಶ್ವತ ಕಾಲೋನಿ ನಿರ್ಮಿಸುತ್ತೇವೆ ಎಂದು ಹೇಳಿದರು.

Write A Comment