ರಾಷ್ಟ್ರೀಯ

ಕಪ್ಪು ಹಣ: ಮತ್ತಷ್ಟು ಭಾರತೀಯರ ಹೆಸರು ಬಹಿರಂಗ: ಪಟ್ಟಿಯಲ್ಲಿ ಉದ್ಯಮಿ ಯಶ್ ಬಿರ್ಲಾ ಸೇರಿದಂತೆ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರು

Pinterest LinkedIn Tumblr

yash-birla-black-money

ನವದೆಹಲಿ: ಕಪ್ಪಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಿಟ್ಜರ್ಲೆಂಡ್ ಸರ್ಕಾರ ಮತ್ತಷ್ಟು ಭಾರತೀಯ ಖಾತೆದಾರರ ಹೆಸರುಗಳನ್ನು ಬಹಿರಂಗ ಪಡಿಸಿದ್ದು, ಪಟ್ಟಿಯಲ್ಲಿ ಖ್ಯಾತ ಉದ್ಯಮಿ ಯಶ್ ಬಿರ್ಲಾ ಸೇರಿ ನಾಲ್ಕು ಪ್ರಮುಖ ಉದ್ಯಮಿಗಳ ಹೆಸರುಗಳು ಸೇರಿವೆ.

ಮಂಗಳವಾರ ಬೆಳಗ್ಗೆಯಷ್ಟೇ ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣವನ್ನು ಕೂಡಿಟ್ಟ ಐದು ಮಂದಿ ಭಾರತೀಯರು ಸೇರಿದಂತೆ ವಿದೇಶಿಗರ ಹೆಸರುಗಳನ್ನು ಸ್ವಿಟ್ಜರ್ಲೆಂಡ್ ತನ್ನ ಗೆಜೆಟ್​ನಲ್ಲಿ ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲೇ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಮತ್ತಷ್ಟು ಭಾರತೀಯರ ಹೆಸರುಗಳನ್ನು ಸ್ವಿಟ್ಜರ್ಲೆಂಡ್ ಸರ್ಕಾರ ಬಹಿರಂಗಗೊಳಿಸಿದೆ. ದೇಶದ ಪ್ರಮುಖ ಉದ್ಯಮಿ ಯಶ್ ಬಿರ್ಲಾ, ಖ್ಯಾತ ರಿಯಲ್ ಎಸ್ಟೇಟ್  ಉದ್ಯಮಿ ಪಾಂಟಿ ಚಡ್ಡಾ ಅವರ ಅಳಿಯ ಗುರ್ಜಿತ್ ಸಿಂಗ್ ಕೋಚರ್, ದೆಹಲಿ ಮೂಲದ ಮಹಿಳಾ ಉದ್ಯಮಿ ರಿತಿಕಾ ಶರ್ಮಾ ಅವರ ಹೆಸರುಗಳು ಇದೀಗ ಬಹಿರಂಗವಾಗಿದೆ.

ಇನ್ನು ಬೆಳಗ್ಗೆ ಬಹಿರಂಗಗೊಂಡ ಐವರು ಭಾರತೀಯ ಖಾತೆದಾರರ ಹೆಸರುಗಳು ಮತ್ತು ಇದೀಗ ಬಹಿರಂಗಗೊಂಡಿರುವ ನಾಲ್ಕು ಮಂದಿ ಭಾರತೀಯ ಖಾತೆದಾರರಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಸ್ವಿಸ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯು ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಉದ್ಯಮಿ ಯಶ್ ಬಿರ್ಲಾ ಮತ್ತು ದೆಹಲಿ ಮೂಲದ ಮಹಿಳಾ ಉದ್ಯಮಿ ರಿತಿಕಾ ಶರ್ಮಾ ಅವರ ಕುರತ ಖಾತೆಗಳ ಬಹುಮುಖ್ಯ ಮಾಹಿತಿಗಳನ್ನು ಸ್ವಿಸ್ ಸರ್ಕಾರ ಭಾರತದೊಂದಿಗೆ ಹಂಚಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ತೆರಿಗೆ ವಂಚಿಸಿ ಸ್ವಿಸ್ ಬ್ಯಾಂಕಿನಲ್ಲಿ ಕೋಟಿಗಟ್ಟಲೆ ಹಣ ಠೇವಣಿ ಇಟ್ಟು ತೆರಿಗೆ ವಂಚಿಸುವ ಮೂಲಕ ದೇಶದ್ರೋಹ ಮಾಡುತ್ತಿರುವವರ ಹೆಸರುಗಳನ್ನು ಬಹಿರಂಗಪಡಿಸಬೇಕೆಂದು ಭಾರತ ಸರಕಾರ ಈ ಹಿಂದಿನಿಂದಲೂ ಸ್ವಿಸ್ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿತ್ತು. ಸ್ವಿಸ್ ಬ್ಯಾಂಕ್ ಗಳಲ್ಲಿ ವಿದೇಶಿಯರಿಗಿಂತ ಭಾರತೀಯ ತೆರಿಗೆ ವಂಚಕರು ಶೇಖರಿಸಿಟ್ಟ ಹಣದ

ಮೊತ್ತವೇ ಹೆಚ್ಚು ಎಂದು ಈ ಹಿಂದೆ ಸಿಬಿಐ ಹೇಳಿತ್ತು. ವರದಿಗಳ ಪ್ರಕಾರ ಸುಮಾರು 500 ಬಿಲಿಯನ್ ಡಾಲರ್ ನಷ್ಟು ಅಕ್ರಮ ಭಾರತೀಯ ಹಣ ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯುತ್ತ ಬಿದ್ದಿದೆ ಎಂದು 2011ರಲ್ಲೇ ಸಿಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.
-ಕನ್ನಡಪ್ರಭ

Write A Comment