ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿಗೆ ನೆತ್ತರ ಉತ್ತರ ನೀಡಿದ ನಕ್ಸಲರು: ಗ್ರಾಮಸ್ಥನ ಹತ್ಯೆ

Pinterest LinkedIn Tumblr

modi pensieve

ರಾಯ್ಪುರ: ಮಾವೋವಾದಿಗಳ ಭದ್ರಕೋಟೆ ದಂತೇವಾಡದಲ್ಲಿ ಅಭಿವೃದ್ಧಿಯ ಮಂತ್ರ ಪಠಿಸಿದ, ಶಾಂತಿಯ ಪಾಠ ಮಾಡಿ ಹೋದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಕ್ಸಲರು ನೆತ್ತರ ಉತ್ತರ ನೀಡಿದ್ದಾರೆ.

ಮೂವತ್ತು ವರ್ಷಗಳ ಬಳಿಕ ಪ್ರಧಾನಿ ಭೇಟಿಗೆ ಸಾಕ್ಷಿ ಯಾದ ದಂತೇವಾಡಕ್ಕೆ ಹೊಂದಿಕೊಂಡ ಸುಕ್ಮಾ ಜಿಲ್ಲೆಯ 250ಕ್ಕೂ ಹೆಚ್ಚು ಗ್ರಾಮಸ್ಥರನ್ನು ನಕ್ಸಲರು ಶುಕ್ರವಾರ ರಾತ್ರಿಯೇ ಅಪಹರಿಸಿದ್ದರು. ಇತ್ತ ದಂತೇವಾಡದಲ್ಲಿ ಮೋದಿ ಅವರು ಮಾವೋವಾದಿಗಳಿಗೆ ಹಿಂಸೆ ಬಿಡಿ, ಅಭಿವೃದ್ಧಿಗೆ ಸಾಥ್ ನೀಡಿ ಎನ್ನುವ ಕರೆ ಕೊಟ್ಟು ಹೋದರೆ, ನಕ್ಸಲರು `ಜನ ಅದಾಲತ್’ ಮಾಡಿ ಅಪಹೃತರಲ್ಲೊಬ್ಬರನ್ನು ಹತ್ಯೆ ಮಾಡಿ ಸಡ್ಡು ಹೊಡೆದಿದ್ದಾರೆ.

ಮೊರೆಂಗಾ ಸುತ್ತ ಮುತ್ತ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಬೆಂಬಲ ನೀಡಬಾರದು ಎನ್ನುವ ಎಚ್ಚರಿಕೆ ಕೊಟ್ಟು ಉಳಿದ ಗ್ರಾಮಸ್ಥರನ್ನು ರಾತ್ರಿ ವೇಳೆ ಬಿಡುಗಡೆ ಮಾಡಿದ್ದಾರೆ.

ಜನ ಅದಾಲತ್ ನಡೆಸಿದ್ರು
ಮೋದಿ ಭೇಟಿ ಖಂಡಿಸಿ ಮಾವೋವಾದಿಗಳು ಎರಡು ದಿನಗಳ `ದಂಡಕಾರಣ್ಯ ಬಂದ್’ಗೂ ಕರೆ ನೀಡಿದ್ದರು. ಈ ಮೂಲಕ ತಮ್ಮ ಭದ್ರಕೋಟೆಗೆ ಕಾಲಿಡುವ ಮೋದಿ ಸಾಹಸಕ್ಕೆ ಅಡ್ಡಿ ಮಾಡಲು ಸಾಕಷ್ಟು ಪ್ರಯತ್ನಿಸಿದ್ದರು. ಇದೇ ಕಾರಣಕ್ಕೆ ದಂತೇವಾಡದಿಂದ ಕೇವಲ 70 ಕಿ.ಮೀ. ದೂರದ ಸುಕ್ಮಾ ಜಿಲ್ಲೆಯ ಮೊರೆಂಗಾ ಹಾಗೂ ಸುತ್ತಮುತ್ತಲ ಗ್ರಾಮಗಳ 250ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸುವ ಧೈರ್ಯವನ್ನು ನಕ್ಸಲರು ಪ್ರದರ್ಶಿಸಿದ್ದರು. ಮೊರೆಂಗಾ ಸಮೀಪದ ನದಿಯೊಂದಕ್ಕೆ ಅಡ್ಡ ನಿರ್ಮಿಸಲಾಗುತ್ತಿರುವ ಕಾಮಗಾರಿಯಲ್ಲಿ ಗ್ರಾಮಸ್ಥರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಈ ಸೇತುವೆ ನಿರ್ಮಾಣವಾದರೆ ಈ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಓಡಾಟ ಸರಾಗವಾಗಲಿದೆ.

ನಕ್ಸಲ್ ನಿಗ್ರಹ ಕಾರ್ಯಕ್ಕೆ ಇನ್ನಷ್ಟು ಬಲ ಸಿಗಲಿದೆ ಎನ್ನುವ ಆತಂಕ ನಕ್ಸಲರಲ್ಲಿ ಹೆಚ್ಚಾಗಿತ್ತು. ಹೀಗಾಗಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಸಲು ಅನೇಕ ಬಾರಿ ನಕ್ಸಲರು ಗ್ರಾಮಸ್ಥರ ಸಭೆಯನ್ನೂ ಕರೆದಿದ್ದರು. ಆದರೆ ಗ್ರಾಮಸ್ಥರು ಇದಕ್ಕೆ ಕ್ಯಾರೆ ಅನ್ನದಾಗ ಅವರನ್ನು ಬಂದೂಕು ತೋರಿಸಿ ಅಪಹರಿಸಿದ್ದಾರೆ. ಮೋದಿ ದಂತೇವಾಡ ಭೇಟಿ ಮುಗಿಸಿ ಕೊಲ್ಕತ್ತಾಗೆ ತೆರಳುತ್ತಿದ್ದಂತೆ ಇತ್ತ `ಜನ ಅದಾಲತ್’ ನಡೆಸಿದ ನಕ್ಸಲರು ಅಪಹೃತರಲ್ಲಿ ಒಬ್ಬನನ್ನು ಹತ್ಯೆ ಮಾಡಿದ್ದಾರೆ.

ಉಳಿದವರನ್ನು ಜೀವಬೆದರಿಕೆಯೊಡ್ಡಿ ಬಿಡುಗಡೆ ಮಾಡಿದ್ದಾರೆ. ನಕ್ಸಲರಿಂದ ಹತ್ಯೆಗೀಡಾದ ವ್ಯಕ್ತಿಯನ್ನು ಸದಾರಾಮ್ ನಾಗ್ ಎಂದು ಗುರುತಿಸಲಾಗಿದ್ದು, ಈತಗ್ರಾಮದ ಸಮೀಪ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ಒತ್ತೆಯಾಗಿಟ್ಟುಕೊಂಡಿರುವ ಗ್ರಾಮಸ್ಥರ ಬಿಡುಗಡೆಗೆ ಸ್ಥಳೀಯ ಆಡಳಿತದ ಮೂಲಕ ನಕ್ಸಲರ ಜತೆಗೆ ಮಾತು ಕತೆಗೆ ಸರ್ಕಾರ ಪ್ರಯತ್ನಿಸಿತ್ತು. ಇದಕ್ಕಾಗಿ 5 ಮಂದಿ ಸ್ಥಳೀಯರನ್ನು ಮಾತುಕತೆಗಾಗಿ ಕಳುಹಿಸಿಕೊಟ್ಟಿತ್ತು.

ಸರ್ಪಗಾವಲು: ನಕ್ಸಲರ ಅಟ್ಟಹಾಸಕ್ಕೆ ಹೆಸರುವಾಸಿಯಾಗಿರುವ ಪ್ರದೇಶಕ್ಕೆ ಮೋದಿ ಭೇಟಿ
ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿತ್ತು. ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಭಾಗವಾಗಿರುವ 10 ಸಾವಿರಕ್ಕೂ ಹೆಚ್ಚು ಅರೆಸೇನಾ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲಾಗಿತ್ತು. ವಿಶೇಷ ಭದ್ರತಾ ಗುಂಪು(ಎಸ್‍ಪಿಜಿ) ಅಧಿಕಾರಿಗಳು ರಾಜ್ಯ ಪೆÇಲೀಸರು ಹಾಗೂ ಅರೆಸೇನಾ ಅಧಿಕಾರಿಗಳ ಜತೆಗೆ ಭದ್ರತಾ ಮೇಲುಸ್ತುವಾರಿ ವಹಿಸಿದ್ದರು.

-ರಸ್ತೆ, ರೈಲ್ವೆ ಮಾರ್ಗಕ್ಕೂ ಹಾನಿ ಮಾಡಿದ್ರು!
ಮೋದಿ ಭೇಟಿ ಹಿನ್ನೆಲೆಯಲ್ಲಿ ಎರಡು ದಿನಗಳ ಬಂದ್‍ಗೆ ಕರೆ ನೀಡಿದ್ದ ಮಾವೋವಾದಿಗಳು, ಪ್ರಧಾನಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ತಡೆಯಲು ರಸ್ತೆ, ರೈಲು ಮಾರ್ಗಗಳಿಗೂ ಹಾನಿ ಉಂಟು ಮಾಡಿದ್ದರು. ಕಕಲೂರ್- ಕುಮಾರ್‍ಸಖ್ಲಾ ಗ್ರಾಮದ ನಡುವೆ ರೈಲ್ವೆ ಹಳಿಯ ಫಿಶ್‍ಪ್ಲೇಟ್‍ಗಳನ್ನು ಕಿತ್ತುಹಾಕಿದ್ದರು. ಮರಗಳನ್ನು ಉರುಳಿಸುವ, ರಸ್ತೆ ಅಗೆಯುವ ಮೂಲಕ ಸುಕ್ಮಾ ಹಾಗೂ ಬಿಜಾಪುರ್ ಜಿಲ್ಲೆಗಳ ನಡುವಿನ ಅನೇಕ ಸಂಪರ್ಕವನ್ನು ಕಡಿತಗೊಳಿಸಲೂ ಪ್ರಯತ್ನಿಸಿದ್ದರು. ಜತೆಗೆ, ಮೋದಿ ಕಾರ್ಯಕ್ರಮಕ್ಕೆ ಹೊರಟ ಅನೇಕ ಗ್ರಾಮಸ್ಥರಿಗೆ ಜೀವಬೆದರಿಕೆಯನ್ನೂ ಹಾಕಿದ್ದರು.

ಹಿಂದಿನ ಘಟನೆಯನ್ನು ನಾವಿನ್ನೂ ಮರೆತಿಲ್ಲ
ಗ್ರಾಮಸ್ಥರ ಅಪಹರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆಂತರಿಕ ಭದ್ರತೆ ಕಾಯ್ದು ಕೊಳ್ಳುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಮಾವೋವಾದಿಗಳು ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ. ಘಟನೆಯಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಕಾಂಗ್ರೆಸ್‍ನ ರ್ಯಾಲಿಯೊಂದರ ಮೇಲೆ ಯಾವ ರೀತಿ ದಾಳಿ ಮಾಡಲಾಯಿತು ಎನ್ನುವುದನ್ನು ನಾವು ಇನ್ನೂ ಮರೆತಿಲ್ಲ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

Write A Comment