ರಾಷ್ಟ್ರೀಯ

ಬೈನಾ ಕನ್ನಡಿಗರು ಜೂ.20ರವರೆಗೆ ನಿರಾಳ

Pinterest LinkedIn Tumblr

Little-Respite-for-Baina-kannadigas

ಪಣಜಿ: ಬೈನಾ ಕನ್ನಡಿಗರು ಒಂದೂವರೆ ತಿಂಗಳು ನಿರಾಳ. ಬೈನಾ ಬೀಚ್‍ನಲ್ಲಿರುವ 205 ಮನೆಗಳ ತೆರವಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಂಬೈ ಉಚ್ಚ ನ್ಯಾಯಾಲಯದ ಗೋವಾ ಖಂಡಪೀಠವು ಜೂನ್ 20 ಕ್ಕೆ ಮುಂದೂಡಿದ್ದು, ಅಲ್ಲಿವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದೆ.

ಸರ್ಕಾರದ ಪರ ವಕೀಲ ಮನೀಷ ಸಾಲಕರ್ ಅವರು ನ್ಯಾಯಾಲಯದಲ್ಲಿ ಬುಧವಾರ ವಾದ ಮಂಡಿಸಿ, ಬೈನಾ ಬೀಚ್‍ನಲ್ಲಿರುವ ಮನೆಗಳೆಲ್ಲ ಅಕ್ರಮವಾಗಿ ನಿರ್ಮಿಸಿದ ಮನೆಗಳು. ಬೈನಾ ಬೀಚ್ ಪರಿಸರವು ಸಿಆರ್‍ಝೆಡ್‍ನಲ್ಲಿ ಬರುತ್ತದೆ ಮತ್ತು ಇದು ಅಸುರಕ್ಷಿತ ಪ್ರದೇಶವಾಗಿರುವುದರಿಂದ ಬೈನಾ ಬೀಚ್‍ನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಅಪಾಯವಾಗುವ ಸಾಧ್ಯತೆ ಇದೆ. ಇದರಿಂದಾಗಿ ಇಲ್ಲಿನ ಮನೆಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಬೈನಾ ರೆಸಿಡೆನ್ಸ್ ವೆಲ್ ಫೇರ್ ಅಸೋಸಿಯೇಶನ್ ವತಿಯಿಂದ ಜಿಲ್ಮನ್ ಪೆರೆರಾ ವಾದ ಮಂಡಿಸಿ, ಬೈನಾದಲ್ಲಿ ಕಳೆದ 40 ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡಿಗರು ವಾಸಿಸುತ್ತಿದ್ದಾರೆ. ಇಲ್ಲಿನ ಬಹುತೇಕ ಮನೆಗಳಿಗೆ ಮನೆ ನಂಬರ್ ನೀಡಲಾಗಿದೆ, ಗೋವಾ ರಾಜ್ಯದ ಮತದಾನದ ಹಕ್ಕು ಮತ್ತು ಇತರ ಎಲ್ಲ ದಾಖಲಾತಿಯನ್ನೂ ಈ ಕುಟುಂಬಗಳು ಹೊಂದಿವೆ.ಇದ್ದಕ್ಕಿದ್ದಂತೆಯೆ ಬೈನಾ ಬೀಚ್‍ನಲ್ಲಿರುವ ಮನೆಗಳನ್ನು ತೆರವುಗೊಳಿಸುವುದು ಸರಿಯಲ್ಲ ಎಂದರು.

ವಾದ ಮತ್ತು ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜೂನ್ 20 ಕ್ಕೆ ಮುಂದೂಡಿದ್ದು, ಅಲ್ಲಿವರೆಗೂ ಬೈನಾದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಪಷ್ಟ ಸೂಚನೆಯನ್ನೂ ನೀಡಿದ್ದಾರೆ.

Write A Comment