ರಾಷ್ಟ್ರೀಯ

ಮಾತೃಭಾಷೆಯಲ್ಲಿ ಶಿಕ್ಷಣ : ಪ್ರಧಾನಿ ನರೇಂದ್ರ ಮೋದಿ ಒಲವು

Pinterest LinkedIn Tumblr

Modi-100

ಬೆಂಗಳೂರು, ಮೇ 1- ಮಾತೃಭಾಷೆಯಲ್ಲಿ ಶಿಕ್ಷಣ ಮಾಧ್ಯಮ ದೊರೆಯುವ ಬಗ್ಗೆ ಪ್ರಧಾನಿ ನರೇಂದ್ರಮೋದಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು  ಮಾತೃಭಾಷೆ ಶಿಕ್ಷಣ ಮಾಧ್ಯಮಕ್ಕೆ ಆದ್ಯತೆ ನೀಡುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಇಂದಿಲ್ಲಿ ಹೇಳಿದರು. ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರ ವರೆಗಿನ ನಮ್ಮ ಮೆಟ್ರೋ ಮಾರ್ಗ ರೀಚ್-3ಬಿ ಉದ್ಘಾಟಿಸಿ ಮಾತನಾಡಿದ ಅವರು,

ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕೆಂಬುದು ನಮ್ಮ ವೈಯಕ್ತಿಕ ಅಭಿಲಾಷೆಯಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುವುದರಿಂದ ಪ್ರಾಂತೀಯ ಸಮನ್ವಯತೆ ಸಾಧಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ವಪಕ್ಷಗಳ ನಿಯೋಗ ಭೇಟಿ ಮಾಡಿ ಚರ್ಚೆ ನಡೆಸಿರುವ ಸಂದರ್ಭದಲ್ಲಿ ಪ್ರಧಾನಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಬೆಂಗಳೂರಿನಾದ್ಯಂತ ಮೆಟ್ರೋ ರೈಲು ವಿಸ್ತರಣೆಯಾಗಬೇಕು. ಬೆಂಗಳೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ. 2016 ಮಾರ್ಚ್ 16ರೊಳಗೆ ಮೆಟ್ರೋ  ಮಾರ್ಗ ರೀಚ್-3ಬಿ ಸಂಪೂರ್ಣವಾಗಲಿದೆ ಎಂದು ಅವರು ಹೇಳಿದರು. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಮಾತೃಭಾಷಾ ಶಿಕ್ಷಣ ವಿಷಯಕ್ಕೆ ನನ್ನ ಬೆಂಬಲವೂ ಇದೆ. ಪಕ್ಷಾತೀತವಾಗಿ ಇದನ್ನು ನಾವು ಬೆಂಬಲಿಸಬೇಕು. ಕಾಂಗ್ರೆಸ್ ಸಂಸದೀಯ ನಾಯಕರಾದ ಖರ್ಗೆಯವರು ತಮ್ಮ ಪಕ್ಷದಲ್ಲಿ ಈ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡುವಂತೆ ಮಾಡಬೇಕು. ಎಲ್ಲ ಪಕ್ಷಗಳವರಲ್ಲೂ ಒಮ್ಮತದ ಅಭಿಪ್ರಾಯ ಬರಬೇಕು ಎಂದು ಹೇಳಿದ ಸದಾನಂದಗೌಡರು ಪ್ರಧಾನಿಯವರು ಈ ಸಂಬಂಧ ಸಕಾರಾತ್ಮಕವಾಗಿ ಸ್ಪಂದಿಸಿರುವುದು, ಮಾತುಕತೆ ನಡೆಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಅವರು ತಿಳಿಸಿದರು.
-ಕೃಪೆ: ಈ ಸಂಜೆ

Write A Comment