ಅಂತರಾಷ್ಟ್ರೀಯ

ನೇಪಾಳ ಭೂಕಂಪ : ಸಂಕಷ್ಟದಲ್ಲಿ ಭಾರತದ ಬಾಲಕಿಯರ ಫುಟ್‌ಬಾಲ್ ತಂಡ

Pinterest LinkedIn Tumblr

India-Footbaal-Teadm

ನವದೆಹಲಿ, ಏ.26: ಭೀಕರ ಭೂಕಂಪನದಿಂದ ತತ್ತರಿಸಿರುವ ನೇಪಾಳದಲ್ಲಿ ಭಾರತದಿಂದ ತೆರಳಿದ್ದ 14 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಕಠ್ಮಂಡುವಿನ ಹೊರಭಾಗದಲ್ಲಿರುವ ಹೊಟೇಲ್ ವ್ಯೂವ್ ಬಿರ್‌ಕುಟಿ ಎಂಬಲ್ಲಿ ಬಾಲಕಿಯರ ತಂಡ ತಂಗಿದೆ. ಎಲ್ಲ ಆಟಗಾರರು ಸುರಕ್ಷಿತವಾಗಿದ್ದಾರೆಂದು ಭಾರತೀಯ ಹೈಕಮಿಷನರ್ ಕಚೇರಿ ಸ್ಪಷ್ಟಪಡಿಸಿದೆ.

ಆದರೆ, ದೂರವಾಣಿ ಸಂಪರ್ಕಕ್ಕೆ ಯಾರೊಬ್ಬರೂ ಸಿಗದಿರುವುದು ಪೋಷಕರಲ್ಲಿ ಆತಂಕ ಉಂಟುಮಾಡಿದೆ. ಇಂದು ಭಾರತದ ಬಾಲಕಿಯರ ತಂಡ ಅಭ್ಯಾಸ ಪಂದ್ಯದಲ್ಲಿ ಇರಾಕ್ ತಂಡದ ಎದುರು ಆಡಬೇಕಿತ್ತು. ಆದರೆ, ನಿನ್ನೆ ಇದ್ದಕ್ಕಿದ್ದಂತೆ ನೇಪಾಳದಲ್ಲಿ ಉಂಟಾದ ಭೂಕಂಪ ಎಲ್ಲವನ್ನೂ ಅಯೋಮಯ ಮಾಡಿದೆ.

ಎಲ್ಲ ಆಟಗಾರರು ಸುರಕ್ಷಿತವಾಗಿದ್ದಾರೆ. ಪೋಷಕರು ಇಲ್ಲವೆ ಸಂಬಂಧಿಗಳು ಆತಂಕಪಡಬೇಕಾದ ಅಗತ್ಯವಿಲ್ಲ. ನಾವು ತಂಗಿರುವ ಹೊಟೇಲ್ ಸುರಕ್ಷಿತವಾಗಿದೆ. ಆದರೆ, ಪರಿಸ್ಥಿತಿ ಮಾತ್ರ ಊಹೆಗೂ ಮೀರದ ರೀತಿಯಲ್ಲಿ ಇದೆ ಎಂದು ತರಬೇತುದಾರರಾದ ಮೇಮಲ್ ರಾಖಿ ಕಠ್ಮಂಡುವಿನಿಂದ ಟ್ವಿಟ್ ಮಾಡಿದ್ದಾರೆ. ಪ್ರತಿಯೊಬ್ಬ ಆಟಗಾರರನ್ನೂ ಸುರಕ್ಷಿತವಾಗಿಟ್ಟುಕೊಳ್ಳಲಾಗಿದೆ. ಆದರೆ, 14 ವರ್ಷದೊಳಗಿನ ಆಟಗಾರರಾಗಿರುವುದರಿಂದ ಇಲ್ಲಿನ ಪರಿಸ್ಥಿತಿ ನೋಡಿ ಭಯಭೀತರಾಗಿದ್ದಾರೆ. ಕಣ್ಣೆದುರೇ ಕಟ್ಟಡಗಳು, ದೇವಸ್ಥಾನಗಳು, ಮಂದಿರಗಳು ಉರುಳಿ ಬಿದ್ದಿವೆ. ಎಲ್ಲಿ ನೋಡಿದರೂ ಹೆಣದ ರಾಶಿಗಳೇ ಕಾಣುತ್ತಿದ್ದು, ಗಾಯಾಳುಗಳು ರಕ್ಷಣೆಗಾಗಿ ಗೋಗರೆಯುತ್ತಿದ್ದಾರೆ. ಇದನ್ನು ಕಂಡು ಆಟಗಾರರು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಹೇಳಿದ್ದಾರೆ.

ನಮಗೆ ಹೊಟೇಲ್‌ನಲ್ಲಿ ಉಳಿಯಲು ಭಯ ಉಂಟಾಗಿದ್ದರಿಂದ ಬೀದಿಯಲ್ಲೇ ಉಳಿದುಕೊಂಡಿದ್ದೇವೆ. ಹೊಟೇಲ್‌ನವರು ನಮಗೆ ಯಾವುದೇ ರೀತಿಯ ಸಹಾಯ ನೀಡಲಿಲ್ಲ. ಇಲ್ಲಿ ಕುಡಿಯುವ ನೀರು, ತಿಂಡಿ, ಊಟ ಏನೂ ಸಿಗುತ್ತಿಲ್ಲ. ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ದೂರವಾಣಿ ಸಂಪರ್ಕ ಕಡಿತಗೊಂಡಿರುವುದರಿಂದ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ವಿಷಾದಿಸಿದ್ದಾರೆ. ಈಗಾಗಲೇ ಭಾರತದ ರಾಯಭಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ನಮ್ಮನ್ನು ಕಠ್ಮಂಡುವಿನಿಂದ ಇಲ್ಲಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ. ಭಾರತದಿಂದ ವಾಯು ವಿಮಾನ ಬರುತ್ತಿದ್ದಂತೆ ಸ್ವದೇಶಕ್ಕೆ ಮರಳಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ, ಕಠ್ಮಂಡು ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿರುವುದರಿಂದ ಆಟಗಾರರಲ್ಲಿ ಆತಂಕ ಮನೆ ಮಾಡಿದೆ.

Write A Comment