ರಾಷ್ಟ್ರೀಯ

ಅಲಂ ವಿರುದ್ಧ ಹೊಸ ಪ್ರಕರಣ: ಆರೋಪ ಸಾಬೀತಾದರೆ ವಿಚಾರಣೆ ರಹಿತ 2 ವರ್ಷ ಜೈಲು

Pinterest LinkedIn Tumblr

masarat-alam

ಶ್ರೀನಗರ: ಪ್ರತ್ಯೇಕತಾವಾದಿ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸುವ ಮೂಲಕ ಭಾರತೀಯ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರತ್ಯೇಕತಾವಾದಿ ಮಸರತ್ ಅಲಂ ವಿರುದ್ಧ ಮತ್ತೊಂದು ಹೊಸ ಪ್ರಕರಣ ದಾಖಲಾಗಿದ್ದು, ಆರೋಪ ಸಾಬೀತಾದರೆ ವಿಚಾರಣೆ ರಹಿತ 2 ವರ್ಷಗಳ ಕಾಲ ಜೈಲಿನಲ್ಲಿಯೇ ಕೊಳೆಯಬೇಕಾಗುತ್ತದೆ.

ಮಸರತ್ ಆಲಂ ವಿರುದ್ಧ ಸಾರ್ವಜನಿಕ ಸುರಕ್ಷತೆ ಕಾಯ್ದೆಯ ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ. ದೇಶದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತಂದ ಆರೋಪದ ಮೇಲೆ ಆತನ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ಆರೋಪ ಸಾಬೀತಾದರೆ ಮಸರತ್ ಆಲಂ ನನ್ನು ಪೊಲೀಸರು ಯಾವುದೇ ರೀತಿಯ ನ್ಯಾಯಾಲಯ ವಿಚಾರಣೆ ಇಲ್ಲದೇ ಬಂಧಿಸಬಹುದಾಗಿದೆ. ಅಲ್ಲದೆ ಆತನಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ಕೂಡ ಪ್ರಾಪ್ತಿಯಾಗುವ ಸಂಭವವಿದೆ.

ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಸೈಯದ್ ಅಲಿ ಶಾ ಗಿಲಾನಿ ಅವರ ಸ್ಪಾಗತಕ್ಕಾಗಿ ಆಯೋಜಿಸಿದ್ದ ರ್ಯಾಲಿ ವೇಳೆ ಮಸರತ್ ಆಲಂ ಪಾಕಿಸ್ತಾನ ಧ್ವಜದ ಹಾರಾಟ ಮಾಡಿದ್ದ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕೇಂದ್ರ ಸರ್ಕಾರ ಕಾಶ್ಮೀರ ಸರ್ಕಾರದ ಮೇಲೆ ಒತ್ತಡ ತಂದು ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಡಿತ್ತು. ಇದಕ್ಕೂ ಮೊದಲು ದೇಶದ್ರೋಹ ಮತ್ತು ಯುದ್ಧಕ್ಕೆ ಕುಮಕ್ಕು ನೀಡಿದ ಆರೋಪದ ಮೇಲೆ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರತ್ಯೇಕತಾವಾದಿ ಸಂಘಟನೆಯಾಗಿರುವ ಹುರಿಯತ್ ಕಾನ್ಫರೆನ್ಸ್‌ನ ಮುಂಚೂಣಿ ನಾಯಕನಾಗಿದ್ದ ಮಸರತ್ ಆಲಂ ಈ ಹಿಂದೆ ಜಮ್ಮುಕಾಶ್ಮೀರದಲ್ಲಿ ನಡೆದ ಗಲಭೆಗಳು ಹಾಗೂ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಕಣಿವೆ ರಾಜ್ಯದಲ್ಲಿ 2010ರ ಸಂದರ್ಭ ನಡೆದಿದ್ದ ವಿವಿಧ ಗಲಭೆಗಳು, ಭದ್ರತಾ ಪಡೆಗಳ ಮೇಲಿನ ಹಲ್ಲೆ ಮತ್ತು ಇತರ ಸಮಾಜಘಾತುಕ ಕೃತ್ಯಗಳಲ್ಲಿ ಮಸರತ್ ಪ್ರಮುಖ ಪಾತ್ರ ವಹಿಸಿದ್ದ. ಈ ಗಲಭೆಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 112 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು.

Write A Comment