ರಾಂಚಿ: ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಏನೇ ಪ್ರಯತ್ನ ನಡೆಸಿದರೂ ಈ ಪಿಡುಗು ಸಂಪೂರ್ಣವಾಗಿ ನಿಂತಿಲ್ಲ. ತನ್ನ ಇಚ್ಚೆಗೆ ವಿರುದ್ದವಾಗಿ ಪೋಷಕರು ಮದುವೆ ಮಾಡಲು ಮುಂದಾಗಿದ್ದಕ್ಕೆ ನೊಂದ 13 ವರ್ಷದ ಬಾಲಕಿಯೊಬ್ಬಳು ತನ್ನ ಶಾಲಾ ಪ್ರಾಂಶುಪಾಲರಿಗೇ ಪತ್ರ ಬರೆದು ನೆರವು ಕೋರಿದ್ದಾಳೆ.
ಜಮ್ಶೆಡ್ ಪುರದ ಗುಡಾಬಂದ ಗ್ರಾಮದ ನಿವಾಸಿಯಾಗಿರುವ ಈ ಬಾಲಕಿಯ ವಿವಾಹ ಏಪ್ರಿಲ್ 22 ರಂದು ನಿಗದಿಯಾಗಿತ್ತು. ತನ್ನ ವ್ಯಾಸಂಗವನ್ನು ಮುಂದುವರೆಸಬಯಸಿದ್ದ ಬಾಲಕಿ ಪೋಷಕರಿಗೆ ಎಷ್ಟೇ ಮನವೊಲಿಸಿದರೂ ಅವರು ಜಗ್ಗದ ಕಾರಣ ತನ್ನ ಶಾಲಾ ಪ್ರಾಂಶುಪಾಲರಿಗೆ ಪತ್ರ ಬರೆದು ತನ್ನ ವಿವಾಹ ನಿಲ್ಲಿಸುವಂತೆ ನೆರವು ಕೋರಿದ್ದಾಳೆ.
ಅಲ್ಲದೇ ಶಾಲೆಯಲ್ಲಿ ವಿದ್ಯಾರ್ಥಿನಿಯರು 18 ವರ್ಷಗಳಾಗುವ ತನಕ ವಿವಾಹವಾಗುವುದಿಲ್ಲವೆಂದು ಮಾಡಿದ್ದ ಪ್ರತಿಜ್ಞೆಯನ್ನೂ ಪತ್ರದಲ್ಲಿ ನೆನಪಿಸಿದ್ದಾಳೆ. ಈಕೆಯ ಪತ್ರಕ್ಕೆ ಸ್ಪಂದಿಸಿರುವ ಪ್ರಾಂಶುಪಾಲರು ಮಕ್ಕಳ ಕಲ್ಯಾಣಾಧಿಕಾರಿಗಳ ನೆರವು ಪಡೆದು ಏಪ್ರಿಲ್ 22 ರಂದು ನಡೆಯಬೇಕಿದ್ದ ವಿವಾಹಕ್ಕೆ ಬ್ರೇಕ್ ಹಾಕಿಸಿದ್ದಾರೆ. ತಮ್ಮ ಸಮುದಾಯದಲ್ಲಿ ವಿವಾಹವನ್ನು ಬಾಲ್ಯದಲ್ಲಿಯೇ ನೆರವೇರಿಸುವುದಾಗಿ ಬಾಲಕಿಯ ಪೋಷಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.