ರಾಷ್ಟ್ರೀಯ

ಎಷ್ಟು ಮಕ್ಕಳಿದ್ದರೆ ಒಳಿತು..?

Pinterest LinkedIn Tumblr

chil

–ಸುಮಲತಾ ಎನ್‌.
ಗಂಡ ಹೆಂಡತಿ ಇಬ್ಬರಿಗೂ ಕೆಲಸ. ಮನೆ, ಕಚೇರಿ ಎರಡರ ನಡುವೆ ಸಿಲುಕಿಕೊಂಡ ಅವರಿಗೆ ತಮ್ಮ ಮಗುವಿಗೆ ಸಮಯ ಕೊಡಲಾಗದ ಪಾಪಪ್ರಜ್ಞೆಯೂ ಕಾಡುತ್ತಿದೆ. ನೋಡಿಕೊಳ್ಳಲು ಮನೆಕೆಲಸದಾಕೆ ಇದ್ದರೂ ಮಗುವಿನೊಂದಿಗೆ ಆಡಲು  ಮನೆಯಲ್ಲಿ ಮತ್ತೊಬ್ಬರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಭಾವ ಸಣ್ಣದಾಗಿ ಕೊರೆಯಲು ಆರಂಭಿಸಿದೆ.

ಮಗಳು ಇತ್ತೀಚೆಗೆ ತುಂಬಾ ಮೌನಿಯಾಗಿದ್ದಾಳೆ. ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ, ಬೆರೆಯುವುದೂ ಇಲ್ಲ. ವರ್ತನೆಯಲ್ಲೂ ತುಂಬಾ ಬದಲಾವಣೆ. ಮನೋಚಿಕಿತ್ಸಕರನ್ನು ಭೇಟಿಯಾಗಿದ್ದಾಯಿತು. ಒಂಟಿತನ ಈ ಸಮಸ್ಯೆಯ ಮೂಲವೆಂಬ ಉತ್ತರ ಸಿಕ್ಕಿದೆ. ಚಿಕ್ಕಂದಿನಿಂದ ಒಂಟಿಯಾಗೇ ಬೆಳೆದಿದ್ದು ಈ ಮಾನಸಿಕ ಸ್ಥಿತಿಗೆ ಕಾರಣ ಎಂದರು. ಮಗಳಿಗೆ ತಮ್ಮನೋ ತಂಗಿಯೋ ಇದ್ದಿದ್ದರೆ ಇಂಥ ನಡವಳಿಕೆಗೆ ಅವಕಾಶವಿರುತ್ತಿರಲಿಲ್ಲ ಎಂದು ಅವರಿಗೆ ಈಗ ಅನ್ನಿಸುತ್ತಿದೆ.

‘ಸಿಂಗಲ್ ಚೈಲ್ಡ್ ಸಿಂಡ್ರೋಮ್‌’ನಂಥ  ಸಮಸ್ಯೆ ಇದಕ್ಕೆ ಒಂದು ಕಾರಣವಾದರೆ, ಬದಲಾಗಿರುವ ದೃಷ್ಟಿಕೋನವೂ ಎರಡು ಮಕ್ಕಳಿದ್ದರೆ ಚೆನ್ನ ಎಂದು ಅನ್ನಿಸುವಂತೆ ಮಾಡಿದೆ. ಬದಲಾದ ಕಾಲಘಟ್ಟದೊಂದಿಗೆ ಮದುವೆ, ಮನೆ, ಕುಟುಂಬ, ಉದ್ಯೋಗ ಎಲ್ಲ ಚೌಕಟ್ಟುಗಳೂ ಸಡಿಲಗೊಂಡಿವೆ.
ಸಂಬಂಧಗಳೇ ಭದ್ರತೆಯಾಗಿದ್ದ ಈ ಚೌಕಟ್ಟುಗಳು ಸಡಿಲಗೊಂಡು ಬೇರೆಯದ್ದೇ ರೂಪು ಪಡೆಯಿತು.

‘ಲೇಟ್ ಮ್ಯಾರೇಜ್’, ‘ಲಿವ್ ಇನ್ ಟುಗೆದರ್’, ‘ನ್ಯೂಕ್ಲಿಯರ್ ಫ್ಯಾಮಿಲಿ’ ಇವೆಲ್ಲಾ ಹಲವು ಪ್ರಯೋಜನಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಸಮಾಜಕ್ಕೆ ಒಡ್ಡಿಕೊಂಡ ಪರಿಕಲ್ಪನೆಗಳು.

ಈ ಬದಲಾವಣೆ ಹಾದಿಯಲ್ಲಿ ಮದುವೆ ನಂತರ ಲೆಕ್ಕಾಚಾರಕ್ಕೆ ಬಂದ ವಿಷಯವೇ ಮಗು. ‘ಮಕ್ಕಳಿರಲವ್ವ ಮನೆ ತುಂಬ’ ಎನ್ನುತ್ತಿದ್ದ ಕಾಲ ಸರಿದು ‘ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ’ ಎಂಬ ನಾಣ್ಣುಡಿ ರೂಢಿಗೆ ಬಂತು. ಅದೂ ಸರಿದು ‘ಒಂದೇ ಮಗು ದೇಶಕ್ಕೆ ನಗು’  ಎಂಬುದು ಬಾಯಿ ಮಾತಾಯಿತು.

ಒಂದು ಮಗುವನ್ನೇ ಅಚ್ಚುಕಟ್ಟಾಗಿ ಸಾಕಿ ಅದಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನೂ ಸಾಕೆನ್ನುವಷ್ಟು ನೀಡಿ ಮಗುವನ್ನೂ ಆರಾಮವಾಗಿರಿಸುವ, ತಾವೂ ನಿರಾತಂಕವಾಗಿರಲು ಬಯಸುವ ವರ ಸಂಖ್ಯೆಯೇ ಹೆಚ್ಚಿನ ಪಾಲಿನದಾಯಿತು.

ಒಂದೇ ಮಗು ಇದ್ದರೆ ಕೆಲಸ ಕಡಿಮೆ, ಖರ್ಚು ಕಡಿಮೆ. ಜೊತೆಗೆ ಎಲ್ಲಾ ಬೆಲೆಗಳೂ ಏರುಗತಿಯಲ್ಲಿ ಸಾಗುತ್ತಿರುವಾಗ ಒಂದು ಮಗುವಿಗೇ ಹೊಟ್ಟೆ ತುಂಬ ಊಟ ಕೊಟ್ಟರೆ ಸಾಕು ಎಂಬ ಲೆಕ್ಕಾಚಾರವೂ ಅದರಲ್ಲಿತ್ತು. ಆದರೆ ಈಗ ಮತ್ತೆ ಕಾಲ ಹಿಂದಕ್ಕೆ ಹೊರಳುತ್ತಿದೆ.

ಮಗು ಒಂಟಿಯಾಗಿ ಬೆಳೆಯುವುದಕ್ಕಿಂತ ಆಡಿ ಕೂಡಿ ಬೆಳೆದರೆ ಅದು ಎಲ್ಲ ರೀತಿಯಿಂದಲೂ ಒಳ್ಳೆಯದು, ಜೊತೆಗೆ ಅಭದ್ರ ಭಾವವೂ ಇರುವುದಿಲ್ಲ ಎನ್ನುವ ಪೋಷಕರು ಇದ್ದಾರೆ. ಈ ಕುರಿತು ಮನಃಶಾಸ್ತ್ರಜ್ಞೆ ಪ್ರೀತಿ ಶ್ಯಾನಭಾಗ ಅವರು ಹೀಗೆನ್ನುತ್ತಾರೆ.

‘ಮಕ್ಕಳ ಮಾನಸಿಕ ಸ್ಥಿತಿಗತಿ ಕುರಿತ ಒಂದು ಅಧ್ಯಯನದ ಪ್ರಕಾರ, ಮೂರು ಮಕ್ಕಳಲ್ಲಿ ಮೊದಲ ಮಗು ತುಂಬಾ ಜವಾಬ್ದಾರಿಯು ತವಾಗಿರುತ್ತದೆ, ಎರಡನೇ ಮಗು ಎಲ್ಲವನ್ನೂ ನಿಭಾಯಿಸಬಲ್ಲ ಗುಣ ಹೊಂದಿರುತ್ತದೆ ಮತ್ತು ಮೂರನೇ ಮಗುವಿನಲ್ಲಿ ನಾಯಕತ್ವ ಗುಣ ಹೆಚ್ಚಿರುತ್ತದೆ. ಇದು  ಮಗು ಬೆಳೆಯುವ ವಾತಾವರಣದೊಂದಿಗೆ ತಳಕು ಹಾಕಿಕೊಂಡಿತ್ತು. ಆದರೆ ‘ಒಂದೇ ಮಗು’ ಎನ್ನುವವರ ಸಂಖ್ಯೆ ಹೆಚ್ಚಿದ್ದರಿಂದ ಬೆಳೆಯುವ ವಾತಾವರಣವೂ ಸಹಜವಾಗೇ ಬದಲಾಯಿತು.

ಸಮಸ್ಯೆ ಇರುವುದು ಒಂದು, ಎರಡು ಮಗು ಎಂಬುದರಲ್ಲಲ್ಲ. ಅದನ್ನು ಬೆಳೆಸುವ ರೀತಿಯಲ್ಲಿ. ಒಂದೇ ಮಗು ಇದ್ದರೂ ಕೂಡು ಕುಟುಂಬದಲ್ಲಿದ್ದ ಮಗುವಿಗೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಈಗಿನ ‘ಚಿಕ್ಕ ಕುಟುಂಬ’  ‘ಡ್ಯುಯಲ್ ವರ್ಕಿಂಗ್’ ಕುಟುಂಬದಂಥ ಪರಿಕಲ್ಪನೆಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ. ಹಲವು ಕಾರಣಗಳಿಗೆ ಈ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಪೋಷಕರಿಗೂ ಅನಿವಾರ್ಯ.

ಆದರೆ ಇತ್ತೀಚೆಗೆ ಎರಡು ಮಕ್ಕಳನ್ನು ಇಚ್ಛಿಸುವವರೂ ಹೆಚ್ಚಿದ್ದಾರೆ. ಎರಡು ಮಕ್ಕಳಿದ್ದರೆ ಒಬ್ಬರಿಗೊಬ್ಬರು ಜೊತೆಯಿರುತ್ತಾರೆ. ಒಬ್ಬರನ್ನೊಬ್ಬರು ಪೋಷಿಸುವ, ಪ್ರೀತಿಸುವ ಗುಣವೂ ಬೆಳೆಯುತ್ತದೆ ಎಂಬ ಕಾರಣ ಒಂದೆಡೆಯಾದರೆ, ಮಗುವನ್ನು ಬೆಳೆಸುವ ದೃಷ್ಟಿಕೋನ ಬದಲಾಗುತ್ತಿರುವುದು ಮತ್ತೊಂದು ಕಾರಣ.

ಇನ್ನೊಂದು ಮುಖ್ಯ ಅಂಶವೆಂದರೆ, ಒಂದೇ ಮಗುವಿರುವ ಪೋಷಕರು  ಮಕ್ಕಳ ಒಂಟಿತನ ಹೋಗಲಾಡಿಸಲು  ವಿಡಿಯೊಗೇಮ್‌, ಕೇರಂ ನಂಥ ವ್ಯವಸ್ಥಿತ ಆಟಗಳಲ್ಲಿ ತೊಡಗಿಸುತ್ತಾರೆ. ಇದು ಮಕ್ಕಳ ಕಲ್ಪನಾ ಮಟ್ಟವನ್ನು ತಡೆಯುತ್ತದೆ.   ಆದ್ದರಿಂದ ಮಗು ಒಂದಿರಲಿ, ಎರಡಿರಲಿ, ಅದು ಬೆಳೆಯುವ ವಾತಾವರಣವನ್ನು ತಿಳಿಯಾಗಿಸುವುದು ಪೋಷಕರ ಜವಾಬ್ದಾರಿಯಾಗುತ್ತದೆ.

ಪ್ರೀತಿ, ಕಾಳಜಿ ಮುಖ್ಯ
ಮನೆಗೆ ಇಬ್ಬರು ಮಕ್ಕಳಿದ್ದರೆ ಚೆನ್ನ. ಇಬ್ಬರು ಮಕ್ಕಳಿದ್ದರೆ ಸಣ್ಣ ಪುಟ್ಟ ಜಗಳ ಆಡಿಕೊಂಡರೂ ಅಷ್ಟೇ ಪ್ರೀತಿ, ಕಾಳಜಿ ಅವರಲ್ಲಿ ಇರುತ್ತದೆ. ಈಗೀಗ ಮಕ್ಕಳ ಜೊತೆಗೆಂದು ಪ್ರಾಣಿಗಳನ್ನು ಸಾಕುವವರನ್ನು ನೋಡಿದ್ದೇವೆ. ಆದರೆ ಮಗು ಜೊತೆ ಇನ್ನೊಂದು ಮಗು ಇದ್ದರೇನೇ ಚೆನ್ನ. ನನ್ನ ತಂಗಿಗೆ ಇಬ್ಬರು ಮಕ್ಕಳು. ದೊಡ್ಡ ಮಗಳು ತನ್ನ ತಂಗಿಯನ್ನು ಅಮ್ಮನ ರೀತಿ ನೋಡಿಕೊಳ್ಳುತ್ತಾಳೆ. ಆಗೆಲ್ಲಾ ಅನ್ನಿಸುತ್ತದೆ ನನ್ನ ಮಗನಿಗೂ ಇನ್ನೊಬ್ಬರು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರಾದರೆ ಮಗುವಿಗೆ ಜೊತೆಗಾರರೂ ಇದ್ದಂತೆ ಆಗುತ್ತದೆ.
–ಭಾರತಿ ಸುಬ್ರಹ್ಮಣ್ಯ.

ಎಲ್ಲ ಪ್ರೀತಿ ಧಾರೆ ಎರೆಯಲು
ಒಂದೇ ಮಗು ಇದ್ದರೆ ನಮ್ಮ ಪ್ರೀತಿಯನ್ನೆಲ್ಲಾ ಒಂದೇ ಮಗುವಿಗೆ ಕೊಡಬಹುದು, ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಬಹುದು. ಜೊತೆಗೆ ಎಲ್ಲಾ ರೀತಿಯಿಂದಲೂ ಎಲ್ಲಾ ಸೌಲಭ್ಯಗಳನ್ನು ಪರಿಪೂರ್ಣವಾಗಿ ನೀಡಲು ಸಾಧ್ಯ. ಒಳ್ಳೆ ಶಿಕ್ಷಣ ನೀಡಬಹುದು. ಇಬ್ಬರು ಮಕ್ಕಳಿದ್ದರೆ     ಪಕ್ಷಪಾತಿಗಳಾಗುತ್ತೇವೆ. ಒಂದೇ ಮಗು ಇದ್ದರೆ ಹಾಗಾಗಲು ಸಾಧ್ಯವಿಲ್ಲ. ಮಗು ಒಂದೇ ಇದ್ದರೆ ಒಂಟಿತನ ಕಾಡುತ್ತದೆ ಎನ್ನುತ್ತಾರೆ. ಆದರೆ ಹಾಗಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನನ್ನ ಮಗನನ್ನೂ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ ಅವನಿಗೆ ಏಕಾಂಗಿತನ ಕಾಡದಂತೆ ನೋಡಿಕೊಳ್ಳುತ್ತೇವೆ.
–ನೇತ್ರಾವತಿ

ಮಗುವಿನ ದೃಷ್ಟಿಯಿಂದಲೂ ಯೋಚಿಸಬೇಕು
ಒಂದೇ ಮಗು ಇದ್ದರೆ ಅದರ ಲಾಲನೆ ಪಾಲನೆ ಚೆನ್ನಾಗಿ ಮಾಡಬಹುದು ಎನ್ನುವ ಮಾತು ಆಯಾ ಅಪ್ಪ- ಅಮ್ಮಂದಿರ ದೃಷ್ಟಿಯಿಂದ ಮಾತ್ರ ಒಳ್ಳೆಯದು. ಆದರೆ ಮಕ್ಕಳ ದೃಷ್ಟಿಯಿಂದಲೂ ನಾವು ನೋಡಬೇಕಲ್ಲ, ಒಬ್ಬರೇ ಇದ್ದರೆ ಅಂಥವರು ಬೇರೆಯವರ ಜೊತೆ ಬೆರೆಯುವುದು ಸ್ವಲ್ಪ ಕಷ್ಟವೇ. ಪಕ್ಕದ ಮನೆಯಲ್ಲಿ ಆಡಲು ಮಕ್ಕಳು ಇದ್ದರೂ ಮನೆಗೆ ಬಂದಾಗ ಮತ್ತೆ ಮಗುವಿಗೆ ಬೇಸರ ಕಾಡುತ್ತದೆ. ಇಂತಹ ಸಾಕಷ್ಟು ಉದಾಹರಣೆ ನೋಡಿದ ಕಾರಣಕ್ಕೆ ಇಬ್ಬರು ಮಕ್ಕಳು ಬೇಕೆಂದು ನಿರ್ಧಾರ ಮಾಡಿದೆವು. ನನ್ನ ಅಮ್ಮನೂ ಮಕ್ಕಳನ್ನು ನೋಡಿಕೊಳ್ಳಲು ಇದ್ದುದು ಇದಕ್ಕೆ ಪ್ಲಸ್‌ ಪಾಯಿಂಟ್‌ ಆಯಿತು.
–ನಂದಿತಾ ತಾಂಡೇಲ್‌

Write A Comment