ರಾಷ್ಟ್ರೀಯ

‘ಪರಿಹಾರ ನೀಡದಿದ್ದರೆ ರೈಲು ಸಂಚಾರವನ್ನು ಬಂದ್ ಮಾಡಿ’ : ಕೋರ್ಟೇ ಹೀಗೆ ಹೇಳಿಬಿಟ್ಟರೆ …?

Pinterest LinkedIn Tumblr

Court-1

ಸಿಮ್ಲಾ , ಏ.14- ರೈತರಿಗೆ ಇದೇ 16ರೊಳಗೆ ಪರಿಹಾರ ನೀಡದಿದ್ದರೆ ಅಂದು ಮುಂಜಾನೆಯಿಂದ ಸಂಜೆಯವರೆಗೆ ರೈಲು ಸಂಚಾರವನ್ನು ಬಂದ್ ಮಾಡಬೇಕೆಂದು ಹಿಮಾಚಲ ಪ್ರದೇಶದ ಉನಾ ಜಿಲ್ಲಾ ನ್ಯಾಯಾಧೀಶರು ವಿಚಿತ್ರವಾದ ತೀರ್ಪೊಂದನ್ನು ನೀಡಿದ್ದಾರೆ. ಉನಾ ಜಿಲ್ಲೆಯ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶ ಮುಖೇಶ್ ಬನ್ಸಾಲ್ ಕಳೆದ ಏ.9ರಂದು ಇಂತಹ ವಿವಾದಾತ್ಮಕ ತೀರ್ಪು ನೀಡಿದ್ದಾರೆ. ಏ.16ರಂದು ಕೇಂದ್ರ ರೈಲ್ವೆ ಇಲಾಖೆ ರೈತರಿಗೆ ಪರಿಹಾರ ನೀಡದಿದ್ದರೆ ಅಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ರೈಲು ಸಂಚಾರ ಸ್ಥಗಿತ ಮಾಡುವಂತೆ ಆದೇಶ ಮಾಡಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನೆಂದರೆ ಉನಾ ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಾಗಿ ಇಲಾಖೆಯು ಇಬ್ಬರು ರೈತರಿಂದ ಜಮೀನನ್ನು ಭೂ ಸ್ವಾಧೀನ ಮಾಡಿಕೊಂಡಿತ್ತು. ಮೇಲಾ ರಾಮ್ ಮತ್ತು ಮದನ್ ಲಾಲ್ ಎಂಬ ಇಬ್ಬರು ರೈತರಿಗೆ ಕ್ರಮವಾಗಿ 8.91 ಲಕ್ಷ ಹಾಗೂ 26.53 ಲಕ್ಷ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿತ್ತು.

1998ರಲ್ಲಿ ಉನಾ-ಅಂಬ್ ರೈಲ್ವೆ ನಿಲ್ದಾಣ ಕಾಮಗಾರಿಗಾಗಿ ಈ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅಂದಿನಿಂದ ಈವರೆಗೂ ರೈತರು ನ್ಯಾಯಾಲಯದ ಕಟಕಟೆ ತುಳಿದರೇ ಹೊರತು ಪರಿಹಾರ ಮಾತ್ರ ಮರೀಚಿಕೆ ಎನ್ನುವಂತಾಯಿತು. ಕೊನೆಗೆ ಈ ಇಬ್ಬರು ರೈತರು ಉನಾ ಜಿಲ್ಲಾ ನ್ಯಾಯಾಲಯಕ್ಕೆ ದೂರು ನೀಡಿ ತಮ್ಮ ಜಮೀನಿಗೆ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಏ.16ರೊಳಗೆ ರೈತರಿಗೆ ಪರಿಹಾರ ನೀಡದಿದ್ದರೆ ಡೆಲ್ಲಿ-ಉನಾ ನಡುವೆ ಸಂಚರಿಸುವ ಜನ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ತಡೆ ಹಿಡಿಯುವಂತೆ ಆದೇಶ ಮಾಡಿದ್ದಾರೆ. ನ್ಯಾಯಾಲಯ ನೀಡಿರುವ ತೀರ್ಪನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಮೂರು ತಿಂಗಳು ಗಡುವು ನೀಡಲಾಗಿದೆ. ನಾವು ಆದಷ್ಟು ಬೇಗ ರೈತರಿಗೆ ಪರಿಹಾರ ದೊರಕಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುತ್ತೇವೆ. ಇದರ ಜತೆಗೆ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದು ರಾಜ್ಯ ಅಡ್ವೊಕೇಟ್ ಜನರಲ್ ಅರುಣ್ ಕುಮಾರ್ ಸೇನಿ ಹೇಳಿದ್ದಾರೆ.

Write A Comment