ರಾಷ್ಟ್ರೀಯ

ಇಪ್ಪತ್ತು ಮಂದಿ ಕಾಡುಗಳ್ಳರ ಎನ್‌ಕೌಂಟರ್ ಪ್ರಕರಣಕ್ಕೆ ಹೊಸ ತಿರುವು: ಪೂರ್ವ ನಿಯೋಜಿತ ಕೃತ್ಯ ಎಂಬ ಅನುಮಾನ

Pinterest LinkedIn Tumblr

250x175-andhra-encounter-1

ಹೈದರಾಬಾದ್, ಏ.9- ಎರಡು ದಿನಗಳ ಹಿಂದೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಬಳಿ ರಕ್ತಚಂದನ  ಕಳ್ಳರ ಮೇಲೆ ನಡೆದ ಎನ್‌ಕೌಂಟರ್ ಪೂರ್ವ ನಿಯೋಜಿತ ಕೃತ್ಯ ಎಂಬ ಅನುಮಾನ ಕೇಳಿಬರುತ್ತಿದೆ. ಏಕೆಂದರೆ, ಸಾಕ್ಷಿಗಳ ಹೇಳಿಕೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ಮೃತದೇಹಗಳನ್ನು ಹೊಕ್ಕಿರುವ ಗುಂಡುಗಳು ತೀರ ಸಮೀಪದಿಂದ ಹೊಡೆಯಲಾಗಿದೆ ಎಂಬುದು ದೃಢಪಟ್ಟಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳ್ಳರ ಜತೆ ತೆರಳಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಶೇಖರ್ ಎಂಬುವರು ಮಾಡಿರುವ ಆರೋಪ ಎನ್‌ಕೌಂಟರ್ ನಕಲಿ ಎಂಬುದನ್ನು ದೃಢೀಕರಿಸುತ್ತದೆ.

ತಮಿಳುನಾಡಿನ ತಿರುವಣ್ಣಮಲೈ ಜಿಲ್ಲೆಯ ವೆಟ್ಟಗಿರಿಪಾಳ್ಯಂ  ಸಮೀಪದ ಅರ್ನಿ ಗ್ರಾಮದ ಶೇಖರ್ ಹೇಳಿರುವಂತೆ ಆಂಧ್ರ ಪ್ರದೇಶ ಪೊಲೀಸರು  ಮತ್ತು ವಿಶೇಷ ಕಾರ್ಯಾಚರಣೆ ಪಡೆ ನಡೆಸಿರುವುದು ನಕಲಿ ಎನ್‌ಕೌಂಟರ್. 20 ಮಂದಿಯಲ್ಲಿ ಏಳು ಮಂದಿಯನ್ನು ಬಸ್ಸಿನಲ್ಲಿ ಕೂರಿಸಿಕೊಂಡು ದಟ್ಟಾರಣ್ಯ ಪ್ರದೇಶದಲ್ಲಿ ಗುಂಡು ಹೊಡೆದು ಸಾಯಿಸಿದ್ದಾರೆಂದು ದೂರಿದ್ದಾನೆ.
ಈತನ ಹೇಳಿಕೆಯನ್ನು ಪುಷ್ಟೀಕರಿಸುವಂತೆ ಮರಣೋತ್ತರ ಪರೀಕ್ಷೆ ನಡೆಸಿರುವ ತಜ್ಞ ವೈದ್ಯರ ತಂಡ 20 ಮೃತದೇಹಗಳಿಗೆ ಹೊಕ್ಕಿರುವ ಗುಂಡು ಅತ್ಯಂತ ಸಮೀಪದಲ್ಲಿ ಹೊಡೆಯಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ನಿನ್ನೆ ಬೆಳಿಗ್ಗೆ 8 ಗಂಟೆಯಿಂದ ಸಂಜೆವರೆಗೆ ತಿರುಪತಿ ಸಮೀಪದ ಶ್ರೀ ವೆಂಕಟೇಶ್ವರ ರುಯ್ಯಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.

ಅಂಗಾಂಗಗಳು ಛಿದ್ರ :

ಮರಣೋತ್ತರ ಪರೀಕ್ಷೆ ನಡೆಸಿರುವ ತಜ್ಞ ವೈದ್ಯರೊಬ್ಬರು ಹೇಳಿರುವಂತೆ 20 ದೇಹಗಳಿಗೆ ಹೊಕ್ಕಿರುವ ಗುಂಡುಗಳು ತೀರ ಹತ್ತಿರದಿಂದಲೇ ಹಾರಿಸಲಾಗಿದೆ. ಇದರ ಪರಿಣಾಮ ದೇಹದಲ್ಲಿನ ಅಂಗಾಂಗಗಳು ಛಿದ್ರಛಿದ್ರವಾಗಿವೆ ಎಂದು ಹೇಳಿದ್ದಾರೆ.  ಯಾವುದೇ ಒಬ್ಬ ವ್ಯಕ್ತಿಯ ದೇಹಕ್ಕೆ ಗುಂಡು ಸುಮಾರು ದೂರದಿಂದ  ಒಳಹೊಕ್ಕರೆ ಅಂಗಾಂಗಗಳು ತುಸು ಪ್ರಮಾಣದಲ್ಲಿ ನಿಷ್ಕ್ರಿಯಗೊಳ್ಳುತ್ತವೆ. ಆದರೆ, ರಕ್ತಚಂದನ ಕಳ್ಳರಿಗೆ ಹೊಡೆದಿರುವ ಗುಂಡುಗಳು ಹತ್ತಿರದಿಂದ ಹಾರಿಸಲಾಗಿದೆ. ಇದರಿಂದ ಎದೆ, ಕಿಡ್ನಿ, ಜಠರ, ನಾಳ ಸೇರಿದಂತೆ ಬಹುತೇಕ ದೇಹದ ಭಾಗಗಳು ಛಿದ್ರಛಿದ್ರಗೊಂಡಿವೆ ಎಂದು ತಿಳಿಸಿದ್ದಾರೆ.  ಐದು ಮಂದಿ ತಜ್ಞರ ತಂಡ ಹಾಗೂ ಹತ್ತು ಮಂದಿ ಇತರೆ ವೈದ್ಯರು, ಕಂದಾಯಾಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದೇಹಗಳನ್ನು ಹಸ್ತಾಂತರ ಮಾಡಲಾಗಿದೆ.

ಶೇಖರ್ ಹೇಳಿದ್ದೇನು ..?

ಇನ್ನು ಕಳ್ಳರ ಜತೆ ರಕ್ತಚಂದನ ಕದಿಯಲು ಹೋಗಿದ್ದ ಶೇಖರ್ ಹೇಳುವಂತೆ ನಾವು ಮುಂಜಾನೆ ಚಿತ್ತೂರು ಸಮೀಪದ ಶೇಷಾಚಲಂ ದಟ್ಟಾರಣ್ಯಕ್ಕೆ ಇನ್ನೇನು ಪ್ರವೇಶ ಮಾಡಬೇಕು ಎಂದಿದ್ದೆವು. ಅಷ್ಟರೊಳಗೆ ನೂರಕ್ಕೂ ಹೆಚ್ಚುಮಂದಿಯಿದ್ದ ಶಸ್ತ್ರ ಸಜ್ಜಿತ ಪೊಲೀಸರು ನಮ್ಮ ಬಸ್ಸನ್ನು ತಡೆದರು. ಬಳಿಕ ಇದರಲ್ಲಿದ್ದ 20 ಮಂದಿಯನ್ನು ಬಸ್‌ನಿಂದ ಕೆಳಗಿಳಿಸಿ ಏಳು ಮಂದಿಯನ್ನು ಪ್ರತ್ಯೇಕ ಬಸ್‌ನಲ್ಲಿ ಕರೆದೊಯ್ದರು. ನನಗೆ ಅನುಮಾನ ಬಂದಿದ್ದರಿಂದ ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಕತ್ತಲಲ್ಲಿ ಪರಾರಿಯಾದೆ. ಏಳು ಮಂದಿಯನ್ನು ಒಂದು ಬಸ್‌ನಲ್ಲಿ ಹಾಗೂ 13 ಮಂದಿಯನ್ನು ಇನ್ನೊಂದು ಬಸ್‌ನಲ್ಲಿ ಪೊಲೀಸರು ಹತ್ತಿಸಿಕೊಂಡು ಹೋದರು. ಶೇಷಾಚಲಂ ಕಡೆ ಒಂದು ಬಸ್ ಹೊರಟರೆ, ಮತ್ತೊಂದು ಬಸ್ ಬೇರೊಂದು ಕಡೆ ಹೊರಟಿತು. ಕೆಲವೇ ಕ್ಷಣಗಳಲ್ಲಿ ಪೊಲೀಸರು ಇವರನ್ನು ದುರುದ್ದೇಶಪೂರ್ವಕವಾಗಿಯೇ ಗುಂಡಿಟ್ಟು ಕೊಲೆ ಮಾಡಿದ್ದಾರೆಂದು ದೂರಿದ್ದಾರೆ.

Write A Comment