ನವದೆಹಲಿ, ಏ.5- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಯಶಸ್ವಿ 50 ದಿನಗಳ ಆಡಳಿತ ಪೂರ್ಣಗೊಳಿಸಿರುವ ಆಮ್ ಆದ್ಮಿ ಭ್ರಷ್ಟಾಚಾರ ನಿಯಂತ್ರಣ ಕ್ಕಾಗಿ ಸಹಾಯವಾಣಿಯೊಂದನ್ನು ಆರಂಭಿಸಿದೆ. ಸರ್ಕಾರಿ ಇಲಾಖೆ ಮತ್ತು ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಪಿಡುಗನ್ನು ತೊಡೆದುಹಾಕಲು ಮುಖ್ಯಮಂತ್ರಿ ಕೇಜ್ರಿವಾಲ್ 1031 ಎಂಬ ಸಹಾಯವಾಣಿಗೆ ಇಂದು ಚಾಲನೆ ನೀಡಿದ್ದಾರೆ. ಇದರ ಪ್ರಕಾರ, ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಮಾಡಿಕೊಡಲು ಸರ್ಕಾರಿ ಅಧಿಕಾರಿಗಳು, ಪೊಲೀಸರು ಸೇರಿದಂತೆ ಯಾರಾದರೂ ಲಂಚ ಕೇಳಿದರೆ ಈ ಸಹಾಯವಾಣಿಗೆ ದೂರು ನೀಡಬಹುದು.
ದಿನದ 24 ಗಂಟೆಯೂ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರ ದೂರು ಆಧರಿಸಿ ಅಂತಹ ಅಧಿಕಾರಿಗಳ ಮೇಲೆ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ನವದೆಹಲಿಯ ತಲ್‌ಕಟೋರಾ ಕ್ರೀಡಾಂಗಣದಲ್ಲಿ ಕೇಜ್ರಿವಾಲ್ ಸಹಾಯವಾಣಿಗೆ ಚಾಲನೆ ನೀಡಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಜನತೆಗೆ ಕೊಟ್ಟ ಭರವಸೆಯಂತೆ ನಾವು ಭ್ರಷ್ಟಾಚಾರ ನಿಯಂತ್ರಣಕ್ಕೆ ಸಹಾಯ ವಾಣಿ ಆರಂಭಿಸಿದ್ದೇವೆ. ಇದೊಂದು ಕ್ರಾಂತಿಕಾರಕ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಭರವಸೆಯಂತೆ ಸಹಾಯವಾಣಿ ತೆರೆಯಲಾಗಿದೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಇಲ್ಲವೆ ದೌರ್ಜನ್ಯ ನಡೆಸುವ ಭ್ರಷ್ಟಾಚಾರಕ್ಕೆ ಒತ್ತಡ ಹಾಕಿದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಸಹಾಯವಾಣಿಯು 247 ಕಾರ್ಯನಿರ್ವಹಣೆ ಮಾಡಲಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಾರ್ವಜನಿಕರು ದೂರು ನೀಡಬಹುದು. ಇದನ್ನು ನಿರ್ವಹಣೆ ಮಾಡಲು ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ.
ಹಣ ನೀಡುವಂತೆ ಅಧಿಕಾರಿಗಳು ಒತ್ತಡ ಹಾಕಿದರೆ ಅಂತಹವರ ಆಡಿಯೋ ಮತ್ತು ವಿಡಿಯೋ ದಾಖಲಿಸಿಕೊಂಡು ದೂರು ನೀಡಬೇಕು. 48 ಗಂಟೆಯೊಳಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಜರುಗಿಸುವರು. ಸಾರ್ವಜನಿಕರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸರ್ಕಾರ 8 ಕೋಟಿಯಿಂದ 15 ಕೋಟಿಗೆ ಅನುದಾನ ಹೆಚ್ಚಳ ಮಾಡಿದ್ದು, 40 ಇನ್ಸ್‌ಪೆಕ್ಟರ್ ದರ್ಜೆ ಅಧಿಕಾರಿಗಳನ್ನು ನೇಮಕ ಮಾಡಿದೆ. ಕಳೆದ ಬಾರಿ ನಾವು ಆರಂಭಿ ಸಿದ್ದ ಸಹಾಯವಾಣಿಗೆ ಮೊದಲ ದಿನವೇ 10 ಸಾವಿರ ಕರೆಗಳು ಬಂದಿದ್ದವು. ಹೀಗಾಗಿಯೇ ಈ ಸಹಾಯವಾಣಿ ಆರಂಭಿಸಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.