ಹೈದರಾಬಾದ್, ಏ.2-ನೂತನ ರಾಜ್ಯ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ನಡೆಸಿದ ಹಠಾತ್ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟು, ಮೂವರು ಪೊಲೀಸರೂ ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಪೊಲೀಸರು ಮಾಮೂಲಿಯಂತೆ ನಲ್ಗೊಂಡ ಜಿಲ್ಲೆಯ ಸೂರ್ಯಪೇಟ ತನಿಖಾ ಠಾನೆ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. ವೃತ್ತ ನಿರೀಕ್ಷಕ (ಸಿಐ) ಮೇಘಲಯ್ಯ ಅವರು ತಮ್ಮ ಸಿಬ್ಬಂದಿಯೊಂದಿಗೆ ಸೂರ್ಯಮ್‌ಪೇಟ ಬಸ್ ನಿಲ್ದಾಣದ ಬಳಿಯ
ಚೆಕ್‌ಪೋಸ್ಟ್‌ನಲ್ಲಿ ಬೆಳಗಿನ ಜಾವ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಬಸ್‌ನಲ್ಲಿದ್ದ ಪ್ರಯಾಣಿಕರನ್ನೆಲ್ಲ ಪರಿಶೀಲಿಸಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಕೆಳಗಿಸಿಕೊಂಡು ಅವರನ್ನು ಪ್ರಶ್ನಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಅವರಲ್ಲೊಬ್ಬ ಪೊಲೀಸರತ್ತ ಯದ್ವಾತದ್ವಾ ಗುಂಡು ಹಾರಿಸಿದ. ಆಗ ಲಿಂಗಯ್ಯ ಎಂಬ ಪೇದಿ ಹಾಗೂ ಮಹೇಶ್ ಎಂಬ ಹೋಮ್‌ಗಾರ್ಡ್ ಸ್ಥಳದಲ್ಲೇ ಸಾವನ್ನಪ್ಪಿದರು. ವೃತ್ತ ನಿರೀಕ್ಷಕ ಮೇಘಲಯ್ಯ ಹಾಗೂ ಇಬ್ಬರು ಪೇದೆಗಳು ಗಂಭೀರವಾಗಿ ಗಾಯಗೊಂಡರು ಎಂದು ಡಿವೈಎಸ್ಪಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.
ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅವರು ನಾಡ ಪಿಸ್ತೂಲು ಬಳಸಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಪ್ರತಿ ದಾಳಿ ನಡೆಸಲು ಆ ವ್ಯಕ್ತಿಗಳು ಅವಕಾಶವನ್ನೇ ನೀಡಿಲ್ಲ. ಇಷ್ಟೆಲ್ಲಾ ನಡೆದಿರುವುದು ಕೆಲವೇ ಸೆಕೆಂಡ್‌ಗಳಲ್ಲಿ ಸಿಐ ಮೇಘಲಯ್ಯ ಅವರ ದೇಹದಲ್ಲಿ ಎರಡು ಗುಂಡುಗಳು ಸೇರಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಇನ್ನಿಬ್ಬರ ಸ್ಥಿತಿಯೂ ಚಿಂತಾಜನಕವಾಗಿದ್ದು, ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಅವರನ್ನು ಪೊಲೀಸರು ಮಾತನಾಡಿಸಿದಾಗ ಅವರು ತೋರಿಸಿದ್ದ ಗುರುತಿನ ಚೀಟಿಗಳಲ್ಲಿ ಒರಿಸ್ಸಾ ರಾಜ್ಯದ ವಿಳಾಸವಿತ್ತು. ಆದರೆ ಅವು ನಕಲಿ ಇರಬಹುದು ಎಂದು ಅಬ್ದುಲ್ ರಶೀದ್ ಹೇಳಿದ್ದಾರೆ.