ನವದೆಹಲಿ, ಏ.1-ಬಹುಕೋಟಿ ರೂ.ಗಳ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಸರ್ವೋಚ್ಚ ನ್ಯಾಯಾಲಯ ಇಂದು ತಡೆ ನೀಡಿದೆ. ಕಲ್ಲಿದ್ದಲು ಗಣಿ ಹಗರಣದಲ್ಲಿ\ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಅವರೂ ಭಾಗಿಯಾಗಿದ್ದು, ನ್ಯಾಯಾಲಯದೆದುರು ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿ ವಿಚಾರಣಾ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಪ್ರಶ್ನಿಸಿ ಸಿಂಗ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಒಬ್ಬ ಪ್ರಧಾನಮಂತ್ರಿ ತನ್ನ ಆಡಳಿತದ ಮೇಲೆ ಸಂಪೂರ್ಣ ಅಧಿಕಾರ ಹೊಂದಿದ್ದು, ಅವರ ನಿರ್ಧಾರಗಳನ್ನು ಕಾನೂನು ಬಾಹಿರ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಿಂಗ್‌ಪರ ವಕೀಲ ಕಪಿಲ್‌ಸಿಬಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಸರ್ವೋಚ್ಚ ನ್ಯಾಯಾಲಯ ತಡೆ ಒಡ್ಡಿದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಸಿಂಗ್ ಈಗ ನ್ಯಾಯಾಲಯದೆದುರು ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ. ಇದೇ ವೇಳೆ ಭ್ರಷ್ಟಾಚಾರ ತಡೆ ಕಾಯ್ದೆಯ ಸಾಂವಿಧಾನಿಕ ಮೌಲ್ಯ ಪ್ರಶ್ನಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಮತ್ತು ಆಂದಿನ ಕಲ್ಲಿದ್ದಲು ಖಾತೆ ಕಾರ್ಯದರ್ಶಿ ಪಿ.ಸಿ.ಪರೇಖ್ ಅವರೊಂದಿಗೆ ಮಾಜಿ ಪ್ರಧಾನಿಗೂ ಹಾಜರಾಗುವಾಗುವಂತೆ ವಿಚಾರಣಾ ನ್ಯಾಯಾಲಯ ಮಾ.11ರಂದು ಸಮನ್ಸ್ ನೀಡಿತ್ತು. ಅದನ್ನು ಪ್ರಶ್ನಿಸಿ ಸಿಂಗ್ ಮಾ.25ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.