ನವದೆಹಲಿ: ದೆಹಲಿಯ ಮಾಜಿ ಶಾಸಕ ಭರತ್ ಸಿಂಗ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಭಾನುವಾರ ತಡರಾತ್ರಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಭರತ್ ಸಿಂಗ್ ಅವರ ಮೇಲೆ ಕಾರಿನಲ್ಲಿ ಬಂದ 8 ಮಂದಿಯ ದುಷ್ಕರ್ಮಿಗಳ ತಂಡ ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಭರತ್ ಸಿಂಗ್ ದೆಹಲಿಯ ನಜಾಫ್ ಗಡ ಕ್ಷೇತ್ರ ಮಾಜಿ ಶಾಸಕರಾಗಿದ್ದು, ನಿನ್ನೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಅವರು ತಮ್ಮ ಬೆಂಬಲಿಗರೊಂದಿಗೆ ನಜಾಫಗಡ್-ಬಹದುರ್ಗಾ ರಸ್ತೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇತ್ತ ಭರತ್ ಸಿಂಗ್ ಅವರು ಕಾರಿನಲ್ಲಿ ಇಳಿಯುತ್ತಿದ್ದಂತೆಯೇ ಅತ್ತ ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಾ ಬಂದಿದ್ದ 8 ಮಂದಿ ಗುಂಡಿನ ಸುರಿಮಳೆ ಗೈದು ಪರಾರಿಯಾಗಿದ್ದಾರೆ.
ಈ ವೇಳೆ ಭರತ್ ಸಿಂಗ್ ಮತ್ತು ಅವರ ಮೂವರ ಭಂಟರಿಗೆ ಗುಂಡೇಟು ಬಿದಿದ್ದು, ರಕ್ತದ ಮಡುವಿನಲ್ಲಿ ಬಿದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭರತ್ ಸಿಂಗ್ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಅವರ ಅಂಗರಕ್ಷಕರು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ವೈದ್ಯರು ಪ್ರಕಾರ, ಭರತ್ ಸಿಂಗ್ ಅವರ ಹೊಟ್ಟೆಗೆ 5 ಗುಂಡುಗಳ ತಗುಲಿದ್ದು, ಅವರ ತಲೆಗೆ 1 ಗುಂಡು ಹೊಕ್ಕಿದೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ವೈಯುಕ್ತಿಕ ಕಾರಣ ಎಂದು ಶಂಕಿಸಿದ್ದಾರೆ.