ರಾಷ್ಟ್ರೀಯ

ಬಂಡುಕೋರರಿಗೆ ಎಎಪಿ ಕಠಿಣ ಎಚ್ಚರಿಕೆ

Pinterest LinkedIn Tumblr

Arwind-Kejri

ನವದೆಹಲಿ, ಮಾ.29- ಪಕ್ಷದ ವಿರುದ್ಧ ಇನ್ನು ಮುಂದೆ ಯಾರಾದರೂ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಿದರೆ ಅಂಥವರನ್ನು ಮುಲಾಜಿಲ್ಲದೆ ಹೊರಹಾಕಲಾಗುವುದು ಎಂದು ಬಂಡುಕೋರರಿಗೆ  ಎಎಪಿ ಎಚ್ಚರಿಕೆ ನೀಡಿದೆ. ನಿನ್ನೆಯಷ್ಟೆ ಬಂಡುಕೋರ ನಾಯಕರಾದ ಯೋಗಿಂದ್ರಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯು ಉಚ್ಚಾಟನೆ ಮಾಡಿತ್ತು.   ಪಕ್ಷದಲ್ಲಿ ಮತ್ತೆ ಭಿನ್ನಮತ ಹೆಚ್ಚಾಗಬಹುದು ಎಂಬುದನ್ನು ಮನಗಂಡಿರುವ ಎಎಪಿ ಪಕ್ಷದಲ್ಲಿದ್ದ ಬಂಡುಕೋರರ ಬಾಯಿಮುಚ್ಚಿಸಲು ಮುಂದಾಗಿದೆ.

ಇನ್ನು ಮುಂದೆ ಯಾರಾದರೂ ಪಕ್ಷದ ನೀತಿ-ನಿಯಮಗಳನ್ನು ಉಲ್ಲಂಘಿಸಿ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದಲೇ ಉಚ್ಚಾಟಿಸುವಂತೆ ರಾಜಕೀಯ ವ್ಯವಹಾರಗಳ ಸಮಿತಿಗೆ ಸೂಚನೆ ಕೊಡಲಾಗಿದೆ.

ಇತ್ತೀಚೆಗೆ ಪಕ್ಷದಲ್ಲಿ ಶಿಸ್ತಿಗಿಂತ ಅಶಿಸ್ತೇ ತಾಂಡವವಾಡುತ್ತಿದೆ. ಕೆಲವರು ಮಾಧ್ಯಮಗಳಿಗೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡುಕೋರರು ಪಕ್ಷದಲ್ಲಿದ್ದು ಅಶಿಸ್ತು ಉಂಟುಮಾಡುವ ಬದಲು ಅಂಥವರನ್ನು ಹೊರಹಾಕಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಂತೆ ಇನ್ನು ಮುಂದೆ ಅಶಿಸ್ತು ಉಲ್ಲಂಘಿಸುವವರ ವಿರುದ್ಧ ಪಿಎಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಅನಗತ್ಯವಾಗಿ ಗೊಂದಲದ ಹೇಳಿಕೆ ನೀಡಿ ಪಕ್ಷದಲ್ಲಿ ಅಶಿಸ್ತು ಮೂಡಿಸುವವರನ್ನು ಹೊರದಬ್ಬಲಾಗುವುದು ಎಂದು ಪಿಎಸಿ ಮುಖಂಡ ಸಂಜಯ್‌ಸಿಂಗ್ ತಿಳಿಸಿದ್ದಾರೆ. ನಾವು ಜನತೆಗೆ ಸಾಕಷ್ಟು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದೇವೆ. ಕೆಲವರು ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಅಂಥವರಿಗೆ ಕಠಿಣ ಕ್ರಮದ ಮೂಲಕವೇ ಹದ್ದುಬಸ್ತಿನಲ್ಲಿಡಲಾಗುವುದು ಎಂದು ಪಕ್ಷ ಎಚ್ಚರಿಕೆ ಕೊಟ್ಟಿದೆ.

Write A Comment