ಶ್ರೀನಗರ,ಮಾ.29- ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಹೊಂಚುಹಾಕಿರುವ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರರು ದೇಶದೊಳಗೆ ನುಗ್ಗಲು ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಬೀಡುಬಿಟ್ಟಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಗಡಿರೇಖೆಗೆ ಹೊಂದಿಕೊಂಡಿರುವ ಬಾಬಾಭಾಯಿ ಮಸ್ರೂರ್, ಅಭಿಯಲ್ ದೋಗ್ರಾ, ಚಾಪ್ರಾರ್, ಸುಕ್ಮಾಲ್ ಮತ್ತಿತರ ಕಡೆ 8 ರಿಂದ 10 ಉಗ್ರರ ಶಿಬಿರಗಳು ಗಡಿಯೊಳಗೆ ನುಸುಳಲು ಯತ್ನಿಸುತ್ತಿವೆ ಎಂದು ಕೇಂದ್ರ ಗೃಹ ಇಲಾಖೆಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕ್ ಮೂಲದ ಲಷ್ಕರ್-ಇ-ತೊಯ್ಬಾ ಸಂಘಟನೆಯ ಅನೇಕ ಆತ್ಮಾಹುತಿ ದಳದ ಉಗ್ರರು ದೇಶದೊಳಗೆ ನುಗ್ಗಿ ವಿಧ್ವಂಸಕ ಕೃತ್ಯ ನಡೆಸಲು ಹೊಂಚುಹಾಕಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ಪಡೆದಿರುವ ಈ ಉಗ್ರರು ಹಲವು ದಿನಗಳಿಂದ ಒಳನುಸುಳುವ ವಿಫಲ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬಹುತೇಕ ಉಗ್ರರು ಆತ್ಮಾಹುತಿ ದಳದವರಾಗಿದ್ದು, ಭಾರತದಂತಹ ಮಹಾನಗರಗಳಲ್ಲಿ ಸ್ಫೋಟ ನಡೆಸಲು ಕಾರ್ಯತಂತ್ರ ರೂಪಿಸಿದ್ದಾರೆ. ಟಿಟಿಪಿಗೆ ಸೇರಿದ 15 ಉಗ್ರರಿದ್ದರೆ, ಲಷ್ಕರ್-ಇ-ತೊಯ್ಬಾದ 45 ಉಗ್ರರು ಕ್ಯಾಂಪ್‌ಗಳಲ್ಲಿ ತಂಗಿದ್ದು, ಇವರಿಗೆ ಸ್ಥಳೀಯರ ನೆರವು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಎಲ್ಲ ಉಗ್ರರಿಗೆ ಮುಖಂಡ ಹಾಗೂ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಮಾರ್ಗದರ್ಶನ ನೀಡುತ್ತಿದ್ದು, ಭಾರತದಲ್ಲಿ ಹೇಗಾದರೂ ಮಾಡಿ ಇನ್ನೊಂದು ದೊಡ್ಡ ಮಟ್ಟದ ದುಷ್ಕೃತ್ಯ ನಡೆಸುವುದು ಇವರ ಲೆಕ್ಕಾಚಾರವಾಗಿದೆ. ಆದರೆ, ಗಡಿಯಲ್ಲಿ ಭಾರತ ಹೆಚ್ಚಿನ ಮಟ್ಟದಲ್ಲಿ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಿರುವುದರಿಂದ ಉಗ್ರರ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಎಲ್‌ಒಸಿ ಇಲ್ಲವೆ ಸಮುದ್ರ ಮಾರ್ಗದ ಮೂಲಕವೂ ಒಳನುಸುಳಲು ವಿಫಲ ಪ್ರಯತ್ನ ಮುಂದುವರಿದಿದೆ. ಈ ಹಿಂದೆ ಕರಾಚಿ ಮೂಲಕ ಗುಜರಾತ್‌ನ ಸೂರತ್ ನಗರಕ್ಕೆ ಬರಲು ಯತ್ನಿಸಿದ ವೇಳೆ ಭಾರತೀಯ ಅಧಿಕಾರಿಗಳು ಈ ದೋಣಿಯನ್ನು ಹೊಡೆದೋಡಿಸಿದ್ದರು. ಹೀಗಾಗಿ ಉಗ್ರರಿಗೆ ಸಮುದ್ರ ಮಾರ್ಗ ಬಂದ್ ಆಗಿದೆ. ಇನ್ನು ಗಡಿರೇಖೆಯ ಬಳಿಯೂ ಭಾರೀ ಪ್ರಮಾಣದ ಭದ್ರತಾ ಪಡೆಗಳು ಇರುವುದರಿಂದ ಉಗ್ರರ ಆಟ ನಡೆಯುತ್ತಿಲ್ಲ.