ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆಯೇ ಉಗ್ರರು ಅಟ್ಟಹಾಸ ಮೆರೆದಿದ್ದು, ಕಟುವಾ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಇಬ್ಬರು ಪೊಲೀಸರನ್ನು ಹತ್ಯೆಗೈದಿದ್ದಾರೆ.
ಕಟುವಾ ಜಿಲ್ಲೆಯ ರಾಜ್ ಭಾಗ್ ಪೊಲೀಸ್ ಠಾಣೆ ಮೇಲೆ ಸುಮಾರು 3-4 ಉಗ್ರರ ಗುಂಪು ದಾಳಿ ಮಾಡಿದ್ದು, ಪೊಲೀಸರ ಮೇಲೆ ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಉಗ್ರರು ಇಬ್ಬರು ಪೊಲೀಸರನ್ನು ಹತ್ಯೆಗೈದಿದ್ದು, ಪೊಲೀಸ್ ಠಾಣೆಯಲ್ಲಿರುವ ಪೊಲೀಸರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಸುಮಾರು 6ಗಂಟೆಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 15 ಕಿ.ಮೀ ದೂರದಲ್ಲಿರುವ ರಾಜ್ ಭಾಗ್ ಪೊಲೀಸ್ ಠಾಣೆಗೆ ಸೈನಿಕ ಸಮವಸ್ತ್ರದಲ್ಲಿ ಬಂದಿದ್ದ ಉಗ್ರರು ನೋಡನೋಡುತ್ತಿದ್ದಂತೆಯೇ ಪೊಲೀಸರ ಮೇಲೆ ಗುಂಡಿನ ಮಳೆಗರೆದಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ದೌಡಾಯಿಸಿದ್ದು, ಕಳೆದ ಒಂದೂವರೆ ಗಂಟೆಯಿಂದ ಘಟನಾ ಸ್ಥಳದಲ್ಲಿ ಸೈನಿಕರು ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ.
ಪ್ರಸ್ತುತ ಉಗ್ರರ ದಾಳಿಯಿಂದಾಗಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಜಮ್ಮುವಿನ ರಾಷ್ಟ್ರೀಯ ಹೆದ್ದಾರಿ-(ಎನ್ ಹೆಚ್ 1) ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಯಾವುದೇ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಉಗ್ರರ ಈ ಕುಕೃತ್ಯಕ್ಕೆ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸೈಯ್ಯದ್ ಅವರು ಪ್ರಮಾಣ ವಚನ ಸ್ವೀಕಾರ ಮಾಡುವಾಗ ಪ್ರತ್ಯೇಕತಾವಾದಿಗಳನ್ನು ಹೊಗಳಿ ಅಟ್ಟಕ್ಕೆ ಏರಿಸಿದ್ದರು. ಉಗ್ರರು ಮತ್ತು ಕಾಶ್ಮೀರ ಪ್ರತ್ಯೇಕತಾ ವಾದಿಗಳ ಸಹಕಾರದಿಂದಾಗಿ ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆದಿದೆ ಎಂದು ಹೇಳಿದ್ದರು. ಇದೀಗ ಉಗ್ರರು ನಡೆಸಿರುವ ಈ ದುಷ್ಕೃತ್ಯಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ..?