ಸುಮಾ 17 ವರ್ಷವಿರುವಾಗಲೇ ಅವಳ ತಂದೆ ತೀರಿಕೊಂಡರು. ಇಬ್ಬರು ಅಣ್ಣಂದಿರಿದ್ದರೂ ಜವಾಬ್ದಾರಿ ತೆಗೆದುಕೊಳ್ಳಲು ಯಾರೂ ತಯಾರಿರಲಿಲ್ಲ. ಹೀಗೆ ಆಕೆಗೆ 32 ವರ್ಷವಾಯಿತು. ಕೊನೆಗೆ ನೆಂಟರಿಷ್ಟರೆಲ್ಲಾ ತಾವಾಗಿಯೇ ವರವನ್ನು ನೋಡಲು ಶುರುಮಾಡಿದರು.
40 ವರ್ಷದ ಸಾಂಪ್ರದಾಯಿಕ ಒಟ್ಟು ಕುಟುಂಬದ ಮನೆತನದ ಹುಡುಗನನ್ನು ನೋಡಿ ಮದುವೆ ಮಾಡಿದರು. ಮದುವೆಯಾದ ವರ್ಷದಲ್ಲೇ ಅವಳು ತನ್ನ ತಾಯಿಯನ್ನು ಕಳೆದುಕೊಂಡಳು. ಮತ್ತೊಂದು ವರ್ಷದಲ್ಲಿ ಅವಳು ಗರ್ಭವತಿಯಾದಳು. ಆದರೆ ಸಂಪ್ರದಾಯದ ಹೆಸರಿನಲ್ಲಿ ಇವಳ ಶೋಷಣೆ ನೆಡೆಯುತ್ತಲೇ ಇತ್ತು.
ಹೀಗೆ ಅರೆಬರೆ ಹೊಟ್ಟೆಯಲ್ಲಿ, ಅಸಮಾಧಾನಕರವಾದ ಮನಸ್ಥಿತಿಯಲ್ಲಿ 9 ತಿಂಗಳು ಕಳೆದು ಒಂದು ಗಂಡು ಮಗುವಿಗೆ ಜನ್ಮನೀಡಿದಳು. ಆ ಮಗುವು ದುರ್ಬಲವಾಗಿದ್ದು ಹುಟ್ಟಿದಾಗಲೇ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ 2 ದಿನ ಇರಿಸಿ ಅವರಿಗೆ ಮಗುವನ್ನು ಕೊಡಲಾಯಿತು.
ಪ್ರತಿಮಳಿಗೆ ತಾಯಿಯಿಲ್ಲದ ಕಾರಣ ತವರಿಗೆ ಹೋಗಲಾಗದೆ ಗಂಡನ ಮನೆಯಲ್ಲಿಯೇ ಬಾಣಂತನವನ್ನು ಮಾಡಿಕೊಳ್ಳಬೇಕಾಯಿತು. ಬಾಣಂತಿ ಹೆಚ್ಚು ತಿನ್ನ ಬಾರದೆಂದು ಅವಳಿಗೆ ಊಟವನ್ನು ಸರಿಯಾಗಿ ಕೊಡುತ್ತಿರಲಿಲ್ಲ, ಮಗುವಿಗೆ ಹೊಸ ಬಟ್ಟೆ ಹಾಕಬಾರದೆಂದು ಹಳೆ ಬಟ್ಟೆಯನ್ನು ಹಾಕುತ್ತಿದ್ದರೂ, ಪ್ರತಿಮಳಿಗೆ ನೀರು ಕೂಡ ಕೊಡುತ್ತಿರಲಿಲ್ಲ.
ತನಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವನಾದ ಗಂಡ, ತಂದೆ ತಾಯಿ ಇಲ್ಲದಿರುವಿಕೆ, ಅಣ್ಣಂದಿರ ನಿರ್ಲಕ್ಷ್ಯ, ಅತ್ತೆಯ ಕಾಟ, ಮಗುವಿನ ಅನಾರೋಗ್ಯ ಇವೆಲ್ಲವೂ ಅವಳನ್ನು ಮಾನಸಿಕವಾಗಿ ಕುಗ್ಗಿಸಿತು. ಮಗುವನ್ನು ನಿರ್ಲಕ್ಷಿಸಿದಳು. ಸರಿಯಾಗಿ ಹಾಲುಣಿಸದ ಕಾರಣ, ಮಗುವನ್ನು ತನ್ನ ಜೊತೆಗಿಟ್ಟುಕೊಳ್ಳದ ಕಾರಣ, ಸಂಪ್ರದಾಯದ ಪ್ರಕಾರ ಮಗುವಿಗೆ ಜೇನುಣಿಸುವುದರಿಂದ, ಹಳೆಯ ಬಟ್ಟೆ ಹಾಕುವುದರಿಂದ ಮಗುವಿಗೆ ಸೋಂಕಾಗಿ ಶ್ವಾಸ ಕೋಶದ ತೊಂದರೆ ಹೆಚ್ಚಿತು.
ಅದರಿಂದ ಎಚ್ಚೆತ್ತು ಮಕ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗುವ ವೇಳೆಗೆ ಬಹಳ ತಡವಾಗಿದ್ದು ಮಗು ತೀರಿಕೊಂಡಿತು. ಇದೇ ಕೊರಗಿನಲ್ಲಿ ಪ್ರತಿಮ ಖಿನ್ನತೆಗೆ ಗುರಿಯಾಗಿ ಅದಕ್ಕಾಗಿ ಔಷಧಿ ಮಾಡಬೇಕಾಯಿತು. ಸಮೀಕ್ಷೆಗಳ ಪ್ರಕಾರ ಇಂಥ ದುರಂತಗಳನ್ನು ಪ್ರಥಮ ಹಂತದಲ್ಲಿಯೇ ಸರಿಮಾಡಬಹುದಾಗಿರುತ್ತದೆ.
ಮಗುವನ್ನು ವೈದ್ಯರ ಬಳಿ ತರುವಾಗಲೇ ಬಹಳ ತಡವಾಗಿದ್ದು ವೈದ್ಯರ ಕೈಮೀರಿ ಹೋಗುವ ಪರಿಸ್ಥಿತಿ ಇರುತ್ತದೆ. ಮಗುವಿರುವ ಕುಟುಂಬಕ್ಕೆ ಮುಂಚೆಯೇ ಸರಿಯಾದ ಮಾಹಿತಿ ಒದಗಿಸುವುದರಿಂದ, ಸರಿಯಾದ ಸಮಯದಲ್ಲಿ ಲಸಿಕೆಗಳನ್ನು ಹಾಕುವುದರಿಂದ, ಮಕ್ಕಳ ವೈದ್ಯರಿಗೆ ಸಕಾಲದಲ್ಲಿ ತೋರಿಸುವುದರಿಂದ 70% ಮಕ್ಕಳ ಸಾವನ್ನು ನಿಯಂತ್ರಿಸಬಹುದಾಗಿರುತ್ತದೆ.
ಮಗುವಿನ ಆರೋಗ್ಯವನ್ನು ಕಾಯ್ದುಕೊಳ್ಳಲು ತಾಯಿ ಮತ್ತು ಮನೆಯವರು ಅದನ್ನು ದೇಹಕ್ಕೆ ಹತ್ತಿರದಲ್ಲಿ ಎತ್ತಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದಕ್ಕೆ ‘ಕಾಂಗರು ರೀತಿ’ ಎನ್ನುತ್ತಾರೆ. ಇದರಿಂದ ಮಗುವು ಬೆಚ್ಚಗಿದ್ದು, ಅದರ ರೋಗ ಕ್ಷಮತೆ ಶಕ್ತಿಯು ಹೆಚ್ಚುತ್ತದೆ. ತಾಯಿಯ ಹಾಲನ್ನು 6 ತಿಂಗಳವರೆಗೆ ಕೊಡುವುದು ಒಳಿತು. ಇದರಿಂದ ಮಗುವಿಗೆ ಸಾಕಷ್ಟು ರೋಗ ಕ್ಷಮತೆ ಶಕ್ತಿ ತಾಯಿಯಿಂದ ದೊರೆಯುತ್ತದೆ.
ಮಕ್ಕಳಿಗೆ ಎದೆ ಹಾಲು ಹೆಚ್ಚಾದಾಗ, ಸರಿಯಾಗಿ ಜೀರ್ಣವಾಗದಾಗ, ಹಾಲು ಕುಡಿಸಿದ ನಂತರ ತೇಗಿಸದಿದ್ದಾಗ ಮಗುವು ವಾಂತಿ ಮಾಡಿಕೊಳ್ಳುವುದು ಸಹಜ. ಆದ್ದರಿಂದ ಮಕ್ಕಳನ್ನು ಪಕ್ಕಕ್ಕೆ ತಿರುಗಿಸಿ ಮಲಗಿಸಿದರೆ ವಾಂತಿಯು ಶ್ವಾಸಕೋಶಕ್ಕೆ ಹೋಗದೆ ಹೊರ ಹೋಗುವುದರಿಂದ ಮಗುವಿಗೆ ಯಾವುದೇ ತೊಂದರೆ ಆಗುವುದಿಲ್ಲ.
ಮಕ್ಕಳ ವಿಷಯದಲ್ಲಿರುವ ಸಾಮಾನ್ಯವಾದ ತಪ್ಪುತಿಳುವಳಿಕೆಗಳಿವು:
ಮಗುವನ್ನು ಬಿಗಿಯಾಗಿ ಕಾಲುಗಳನ್ನು ಬಿಗಿಯಾಗಿ ಕಟ್ಟದಿದ್ದಲ್ಲಿ ಕಾಲು ಸೊಟ್ಟವಾಗುವುದೇ?
ಮಗುವಿನ ಕಾಲುಗಳು ಆಡಿಸಲು ಅವಕಾಶಗಳಿದ್ದರೆ ಮಕ್ಕಳ ಬೆಳವಣಿಗೆ ಹೆಚ್ಚುತ್ತದೆ. ಆದ್ದರಿಂದ ಕಾಲುಗಳನ್ನು ಬೆಚ್ಚಗಿಟ್ಟು ಆಡಿಸಲು ಅವಕಾಶವಿದ್ದರೆ ಉತ್ತಮ.
1 ವರ್ಷದವರೆಗೆ ಮಗುವಿಗೆ ಹಾಲು ಬಿಟ್ಟು ಬೇರೆ ಆಹಾರ ಕೊಡುವುದು ಬೇಡವೇ?
ಹಾಲಿನಲ್ಲಿ ತಾಯಿಯ ಗುಣಗಳು ಮತ್ತು ರೋಗನಿರೋಧಕ ಶಕ್ತಿಯಿದ್ದರೂ ಸಹ ಅದರಲ್ಲಿ ಕಬ್ಬಿಣಾಂಶ, ವಿಟಮಿನ್ ಸಿ ಇರುವುದಿಲ್ಲ ಆದ್ದರಿಂದ 6 ತಿಂಗಳ ವರೆಗೆ ಪೂರ್ಣ ಪ್ರಮಾಣದಲ್ಲಿ ಹಾಲುಣಿಸಿ ನಂತರ ದವಸ, ಧಾನ್ಯ, ಹಣ್ಣು, ತರಕಾರಿಗಳನ್ನು ಕೊಡುವುದು ಒಳಿತು. ಇಲ್ಲವಾದರೆ ಮಗುವು ರಕ್ತ ಹೀನತೆಯಿಂದ ಬಳಲುವ ಸಾಧ್ಯತೆ ಇರುತ್ತದೆ.
ಮಗುವಿಗೆ ಅತೀ ದಪ್ಪದ ಹೊದಿಕೆ ಹೊದಿಸುವುದರಿಂದ ಜ್ವರ ಬರುವುದಿಲ್ಲವೆನ್ನುವುದು ಸರಿಯೇ?
ದೊಡ್ಡವರಿಗೆ ಸೆಕೆಯಾಗುವಂತೆಯೇ ಮಕ್ಕಳಿಗೂ ಸೆಕೆಯಾಗುತ್ತದೆ, ತಣ್ಣಗಿರುವಾಗ ಚಳಿಯಾಗುತ್ತದೆ. ವ್ಯತ್ಯಾಸವೆಂದರೆ ಮಕ್ಕಳಿಗೆ ತಡೆದುಕೊಳ್ಳವ ಸಾಮರ್ಥ್ಯವಿರುವುದಿಲ್ಲ. ಆದ್ದರಿಂದ ಹೆಚ್ಚು ಬೆಚ್ಚಗಾದರೂ ಕೂಡ ಮಕ್ಕಳಿಗೆ ಮೈ ಬಿಸಿಯಾಗಿ ಜ್ವರ ಬರುವ ಸಾಧ್ಯತೆ ಇರುತ್ತದೆ. ಯಾವ ಕಾಲಕ್ಕೆ ಎಷ್ಟು ಬೇಕೋ ಅಷ್ಟೇ ಬೆಚ್ಚಗಿಡಬೇಕು. ಶಾಖ ಹೆಚ್ಚಿ ಜ್ವರ ಬಂದ ನಂತರವೂ ಇನ್ನು ಬೆಚ್ಚಗೆ ಮಾಡಿದರೆ ಮಗುವಿಗೆ ಫಿಟ್ಸ್ ಬರುವ ಸಾಧ್ಯತೆ ಇರುತ್ತದೆ.
ಮಗುವು ಬಹಳ ಸಲ ಮಲವಿಸರ್ಜಿಸಿದರೆ ತಾಯಿಯ ಹಾಲುಣಿಸುವುದನ್ನು ನಿಲ್ಲಿಸಬೇಕೇ?
5-6 ಸಲ ಮಲವಿಸರ್ಜಿಸಿದರೆ ಮತ್ತು ಸ್ವಲ್ಪ ಸ್ವಲ್ಪ ವಿಸರ್ಜಿಸಿದರೆ ಏನೂ ತೊಂದರೆ ಇರುವುದಿಲ್ಲ. ಎದೆ ಹಾಲುಣಿಸುವುದನ್ನು ಬಿಡಬಾರದು.
ತಾಯಿಯ ಮೊದಲ ಹಾಲುಣಿಸಬಹುದೇ?
ತಾಯಿಯ ಹಾಲು ಬಹಳ ಸತ್ವಯುತವಾಗಿದ್ದು ಅದನ್ನು ಆದಷ್ಟು ಬೇಗ ಮಗುವಿಗೆ ಕೊಡುವುದು ಉತ್ತಮ. ಅದು ಹಳದಿ ಬಣ್ಣಕ್ಕಿದ್ದು ತೆಳುವಾಗಿರುತ್ತದೆ. ಇದು ಮಗುವಿನ ರೋಗಕ್ಷಮತೆವನ್ನು ವೃದ್ಧಿಸುತ್ತದೆ. ಒಂದು ತಿಂಗಳವರೆಗೆ ತಾಯಿ ಮಗುವನ್ನು ಕೋಣೆಯಿಂದ ಹೊರ ಬಿಡದೇ ಇರುವುದು ಸರಿಯೇ? ಮಗು ಮತ್ತು ತಾಯಿ ಆ ಸಮಯದಲ್ಲಿ ದುರ್ಬಲರಾಗಿದ್ದು ಸೋಂಕಿಗೆ ಈಡಾಗಬಹುದು. ಆದ್ದರಿಂದ ತಾಯಿ ಮಗು ಸುರಕ್ಷಿತವಾಗಿ, ಸ್ವಚ್ಛವಾದ ತಾಜಾ ಪರಿಸರದಲ್ಲಿರುವುದು ಒಳಿತು. ಎಳೆಬಿಸಿಲಿನ ಅಗತ್ಯ ಎಳೇಮಗುವಿಗೂ ಅಮ್ಮನಿಗೂ ಅತ್ಯಗತ್ಯ.
ಮಗುವು ಸೀನಿದರೆ, ಕೆಮ್ಮಿದರೆ ಗಂಭೀರ ಸಮಸ್ಯಯೇ?
ಮಗುವು ಉಸಿರಾಟದ ನಳಿಕೆಯನ್ನು ಶುದ್ಧಗೊಳಿಸಿಕೊಳ್ಳಲು ಸೀನುವುದು ಕೆಮ್ಮುತ್ತದೆ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿರುವುದಿಲ್ಲ. ಆದರೆ ಕೆಮ್ಮು ಉಸಿರಾಟದ ತೊಂದರೆಯೊಂದಿಗೆ, ಶಬ್ಧದೊಂದಿಗೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಹಾಲುಣಿಸುವ ತಾಯಿ ಕಡಿಮೆ ಆಹಾರ ಮತ್ತು ನೀರನ್ನು ಸೇವಿಸಬೇಕೆನ್ನುತ್ತಾರೆ ಹೌದೇ?
ಹಾಲುಣಿಸುವ ತಾಯಿಗೆ ಸಾಮಾನ್ಯರಿಗಿಂತ ಹೆಚ್ಚು ಪೌಷ್ಟಿಕ ಆಹಾರದ ಅವಶ್ಯಕತೆ ಇರುತ್ತದೆ. ಹೆಚ್ಚು ನೀರಿನ ಅವಶ್ಯಕತೆಯೂ ಇರುತ್ತದೆ. ಬಾಣಂತಿಯರಲ್ಲಿ ನೀರು ಕಡಿಮೆ ಕುಡಿಯುವುದರಿಂದ, ತರಕಾರಿ ಕಡಿಮೆ ತಿನ್ನುವುದರಿಂದ ಮಲಬದ್ದತೆ, ಮೂಲವ್ಯಾಧಿ, ಮಲದ್ವಾರದಲ್ಲಿ ಗಾಯಗಳಾಗುವ ಸಂಭವವಿರುತ್ತದೆ. ಇದನ್ನು ನಿವಾರಿಸಿಕೊಳ್ಳಲು ತಾರಕಾರಿ, ನೀರಿನ ಅವಶ್ಯಕತೆ ಇರುತ್ತದೆ.
ಮಗುವಿಗೆ ಹಳೆಯ ಬಟ್ಟೆ ಹಾಕಬೇಕೆನ್ನುತ್ತಾರೆ ನಿಜವೇ?
ಮಗುವಿನ ಚರ್ಮವು ಬಹಳ ಸೂಕ್ಷ್ಮವಿರುವುದರಿಂದ ಹೊಸ ಬಟ್ಟೆಯು ಚರ್ಮವನ್ನು ಗಾಯಮಾಡಬಹುದಾಗಿರುತ್ತದೆ ಆ ಒಂದು ವಿಚಾರಕ್ಕಾಗಿ ಮೆತ್ತಗಿನ ಹಳೆಯ ಬಟ್ಟೆಯನ್ನು ಹಾಕಲು ಹೇಳಿರುತ್ತಾರೆ. ಹೊಸ ಬಟ್ಟೆಯನ್ನು ಹಲವು ಸಲ ಒಗೆದು ಒಣಗಿಸಿ ಗಂಜಿತೆಗೆದು ಹಾಕಿ. ಆದರೆ ಹಳೆ ಬಟ್ಟೆ ಎಂದು ಕೊಳೆ ಬಟ್ಟೆಯನ್ನು ಹಾಕಿದರೆ ಮಗುವಿನ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ.
ಎಣ್ಣೆ ಅಭ್ಯಂಗ ಮಾಡಬಾರದು ಎನ್ನುತ್ತಾರೆ ಹೌದೇ?
ಒಳ್ಳೆಯ ಎಣ್ಣೆಯನ್ನು ಬಳಸಿ ನಿಧಾನವಾಗಿ ಪ್ರತಿ ನಿತ್ಯ ಅಭ್ಯಂಗಮಾಡುವುದರಿಂದ ರಕ್ತ ಸಂಚಾರವು ಹೆಚ್ಚುತ್ತದೆ, ಮೂಳೆಗಳಿಗೆ ಬಲವನ್ನು ನೀಡುತ್ತದೆ, ಚರ್ಮವನ್ನು ಒಣಗದಂತೆ ಕಾಪಾಡುತ್ತದೆ. ಅಭ್ಯಂಗದ ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುವುದರಿಂದ ಮಗುವು ಚೆನ್ನಾಗಿ ನಿದ್ದೆಮಾಡುತ್ತದೆ.