ಸಿಡ್ನಿ/ನವದೆಹಲಿ: ಸಿಡ್ನಿಯ ಹೊರವಲಯದಲ್ಲಿ ಶನಿವಾರ ರಾತ್ರಿ ಬರ್ಬರವಾಗಿ ಹತ್ಯೆಯಾದ ಬೆಂಗಳೂರು ಮೂಲದ ಐ.ಟಿ ಉದ್ಯೋಗಿ ಪ್ರಭಾ ಅರುಣ್‌ಕುಮಾರ್ ಹತ್ಯೆಗೆ ಜನಾಂಗೀಯ ದ್ವೇಷ ಕಾರಣವಲ್ಲ ಎಂದು ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ.
ಜನಾಂಗೀಯ ದ್ವೇಷದ ಕಾರಣದಿಂದ ಈ ಕೊಲೆ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಿಡ್ನಿಯಲ್ಲಿ ಭಾರತದ ಕಾನ್ಸಲ್ ಜನರಲ್ ಆಗಿರುವ ಸಂಜಯ್ ಸುಧೀರ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಕೊಲೆ ಜನಾಂಗೀಯ ಕಾರಣಕ್ಕೆ ನಡೆದಿದೆ ಎಂಬ ಕುರುಹು ಕಾಣುತ್ತಿಲ್ಲ ಎಂದಿದ್ದಾರೆ.
ವಿಶೇಷ ತನಿಖಾ ತಂಡ: ಪ್ರಭಾ ಕೊಲೆ ಪ್ರಕರಣದ ತನಿಖೆ ಈಗಾಗಲೇ ಆರಂಭವಾಗಿದ್ದು ಅತ್ಯಂತ ದಕ್ಷ ಮತ್ತು ಅನುಭವಿ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಆ ಬಗ್ಗೆ ತಮಗೆ ಸಂಪೂರ್ಣ ತೃಪ್ತಿ ಇದೆ ಎಂದು ಸುಧೀರ್ ಸ್ಥಳೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ತನಿಖೆಗೆ ಚಾಲನೆ ನೀಡಿದೆ. ಹಂತಕರ ಪತ್ತೆ
ಬೈಕ್ ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೂರು ತಿಂಗಳ ಕಾಲ ಕೋಮಾದಲ್ಲಿದ್ದರು. ಚಿಕಿತ್ಸೆ ಬಳಿಕ ಗುಣವಾಗಿದ್ದರು ಎಂದು ಸಂಬಂಧಿಕರಾದ ತ್ರಿಜೇಶ್ ತಿಳಿಸಿದ್ದಾರೆ.
‘ಅಪಘಾತದಲ್ಲಿ ಪಾರಾಗಿದ್ದ ನನ್ನ ಅತ್ತೆ ಅನಿರೀಕ್ಷಿತವಾಗಿ ಕೊಲೆಯಾಗಿದ್ದಾರೆ. ಈ ಆಘಾತದಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.
ಕೆಲಸವನ್ನು ವಿಶೇಷ ಬೇಹುಗಾರರ ತಂಡಕ್ಕೆ ವಹಿಸಲಾಗಿದ್ದು ಶೀಘ್ರವೇ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ನ್ಯೂ ಸೌತ್ ವೇಲ್ಸ್ ಪ್ರಧಾನಿ ಮೈಕ್ ಬೇರ್ಡ್ ಭಾರತಕ್ಕೆ ಭರವಸೆ ನೀಡಿದ್ದಾರೆ.
ಕಾನ್ಸಲ್ ಜನರಲ್ ಸಂಜಯ್ ಸುಧೀರ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ ಬೇರ್ಡ್ ಘಟನೆ ಕುರಿತು ದೀರ್ಘವಾಗಿ ಚರ್ಚಿಸಿದ್ದಾರೆ.
ಹಂತಕರ ಪತ್ತೆಗೆ ಸಾರ್ವಜನಿಕರ ನೆರವು ಕೋರಿ ಆಸ್ಟ್ರೇಲಿಯಾ ಪೊಲೀಸರು ಪರ್ರಮಟ್ಟಾ ನಿಲ್ದಾಣದಿಂದ ಪ್ರಭಾ ಹೊರನಡೆಯುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದಾರೆ.
ಪತಿ ಆಸ್ಟ್ರೇಲಿಯಾಕ್ಕೆ
ಏತನ್ಮಧ್ಯೆ ಪ್ರಭಾ ಶವವನ್ನು ಗುರುತಿಸಲು ಅವರ ಪತಿ ಅರುಣ್ ಕುಮಾರ್ ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ಧಾವಿಸಿದ್ದಾರೆ.
ಕಾನ್ಸಲ್ ಜನರಲ್ ಸುಧೀರ್ ಹಾಗೂ ಪ್ರಭಾ ಕೆಲಸ ಮಾಡುತ್ತಿದ್ದ ಮೈಂಡ್ಟ್ರೀ ಕಂಪೆನಿ ಪ್ರತಿನಿಧಿಗಳ ಜತೆ ಅರುಣ್ ಕುಮಾರ್ ನ್ಯೂ ಸೌತ್ ವೇಲ್ಸ್ ಪೊಲೀಸರನ್ನು ಭೇಟಿ ಮಾಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅಕ್ಬರುದ್ದೀನ್ ತಿಳಿಸಿದ್ದಾರೆ.
ಸುಷ್ಮಾ ದಿಗ್ಭ್ರಮೆ
ಘಟನೆಯ ಬಗ್ಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ‘ಸಿಡ್ನಿ ಕಾನ್ಸಲೇಟ್ ಜನರಲ್ ಜತೆ ತಾವು ನಿರಂತರ ಸಂಪರ್ಕದಲ್ಲಿದ್ದು, ತನಿಖೆಗೆ ಅಗತ್ಯವಾದ ಎಲ್ಲ ರೀತಿಯ ನೆರವು ಮತ್ತು ಸಹಕಾರವನ್ನು ಭಾರತ ನೀಡಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿರುವ ಅರುಣ್ ಕುಮಾರ್ ಜತೆ ತಾವು ದೂರವಾಣಿಯಲ್ಲಿ ಮಾತನಾಡಿದ್ದು, ಭಾರತೀಯ ಕಾನ್ಸಲೇಟ್ ಕಚೇರಿ ನೀಡಿದ ನೆರವನ್ನು ಅವರು ಸ್ಮರಿಸಿದ್ದಾರೆ ಎಂದು ಸುಷ್ಮಾ ಹೇಳಿದ್ದಾರೆ.
ನಮ್ಮ ಜವಾಬ್ದಾರಿ
ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯ ಈ ಘಟನೆಯಿಂದ ಆತಂಕಕ್ಕೆ ಒಳಗಾಗಬಾರದು. ಅವರ ಸುರಕ್ಷತೆ ನಮ್ಮ ಜವಾಬ್ದಾರಿ. ಅವರಿಗೆ ಎಲ್ಲ ರೀತಿಯ ರಕ್ಷಣೆ ನೀಡಲಾಗುವುದು.
– ಮೈಕ್ ಬೇರ್ಡ್, ನ್ಯೂ ಸೌತ್ ವೇಲ್ಸ್ ಪ್ರಧಾನಿ
ಆ ಕರಾಳ ಶನಿವಾರ…
* ಎರಡು ಪಾಳಿಯಲ್ಲಿ ಕೆಲಸ ಮಾಡಿ ಆಸ್ಟ್ರೇಲಿಯಾದ ಕಾಲಮಾನ ಶನಿವಾರ ರಾತ್ರಿ 9.00 ಗಂಟೆಗೆ ಕಚೇರಿಯಿಂದ ಪರ್ರಮಟ್ಟಾ ರೈಲು ನಿಲ್ದಾಣಕ್ಕೆ ಬಂದಿಳಿದ ಪ್ರಭಾ
* ರೈಲು ಇಳಿಯುತ್ತಲೇ ಬೆಂಗಳೂರಿನಲ್ಲಿದ್ದ ಪತಿಗೆ ಮೊಬೈಲ್ನಿಂದ ಕರೆ
* ಮೊಬೈಲ್‌ನಲ್ಲಿ ಮಾತನಾಡುತ್ತ ಅರ್ಗೈಲ್ ಸ್ಟ್ರೀಟ್ ಮೂಲಕ ವೆಸ್ಟ್ಮೀಡ್ನತ್ತ ತೆರಳುವಾಗ ಅಪರಿಚಿತ ವ್ಯಕ್ತಿಯಿಂದ ದಾಳಿ
* ‘ಯಾರೋ ಅಪರಿಚಿತರು ನನಗೆ ಚೂರಿಯಿಂದ ಇರಿದರು’ ಎಂದು ಪ್ರಭಾ ಕಿರುಚಿದ್ದನ್ನು ಕೇಳಿಸಿಕೊಂಡ ಪತಿ ಅರುಣ್ ಕುಮಾರ್. ನಂತರ ಪ್ರಭಾ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು.
* ಹರಿತವಾದ ಚಾಕುವಿನಿಂದ ದಾಳಿ ನಡೆಸಿ ಹಲವು ಬಾರಿ ಇರಿತ. ಸಮೀಪದ ಆಸ್ಪತ್ರೆಗೆ ದಾಖಲು. ರಾತ್ರಿ 12.45ಕ್ಕೆ ಕೊನೆಯುಸಿರು
ಮೊಬೈಲ್, ಪರ್ಸ್ ಸುರಕ್ಷಿತ
ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಕೊಲೆಯಾದ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾ ಅರುಣ್‌ಕುಮಾರ್ (41) ಅವರ ಮೊಬೈಲ್, ಪರ್ಸ್ ಹಾಗೂ ಆಭರಣಗಳನ್ನು ದುಷ್ಕರ್ಮಿ ದೋಚಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಇದರೊಂದಿಗೆ ಕೊಲೆಯ ಕಾರಣ ಮತ್ತಷ್ಟು ನಿಗೂಢವಾಗಿದೆ.
‘ವಿಷಯ ತಿಳಿದು ಆಸ್ಟ್ರೇಲಿಯಾಗೆ ಧಾವಿಸಿದ ಅಣ್ಣ ಅರುಣ್‌ಕುಮಾರ್‌ಗೆ ಸೋಮವಾರ ಕರೆ ಮಾಡಿ ಮಾತನಾಡಿದೆ. ಸ್ಥಳೀಯ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡರು ಎಂದು ಅಣ್ಣ ಹೇಳಿದ’ ಎಂದು ಅವರ ಸೋದರ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಭಾ ಅವರ ಮೊಬೈಲ್, ಪರ್ಸ್ ಹಾಗೂ ಆಭರಣಗಳು ಘಟನಾ ಸ್ಥಳದಲ್ಲೇ ಇದ್ದವು ಎಂದು ಪೊಲೀಸರು ಅಣ್ಣನಿಗೆ ತಿಳಿಸಿದ್ದಾರೆ. ಹೀಗಾಗಿ ಕೊಲೆಗೆ ಕಾರಣ ಈವರೆಗೂ ಗೊತ್ತಾಗಿಲ್ಲ’ ಎಂದು ಹೇಳಿದರು.
ಕೊಲೆ ನಡೆದಿರುವ ಸ್ಥಳದಲ್ಲಿ ಮಾದಕ ವ್ಯಸನಿಗಳು ಆಗಾಗ್ಗೆ ದಾರಿಹೋಕರನ್ನು ಅಡ್ಡಗಟ್ಟಿ ಹಣ, ಮೊಬೈಲ್, ಚಿನ್ನಾಭರಣ ದೋಚುತ್ತಿರುತ್ತಾರೆ ಎಂದು ಅರುಣ್‌ಕುಮಾರ್ ಅವರಿಗೆ ಪೊಲೀಸರು ತಿಳಿಸಿದ್ದಾರೆ.
ಗುರುವಾರ ನಗರಕ್ಕೆ: ಗುರುವಾರದ (ಮಾರ್ಚ್ 12) ವೇಳೆಗೆ ಶವವನ್ನು ನಗರಕ್ಕೆ ತರುವ ಸಾಧ್ಯತೆ ಇದೆ ಎಂದು ಅರುಣ್‌ಕುಮಾರ್ ಅವರ ಅಕ್ಕನ ಗಂಡ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಎಸ್.ವಿ. ಜಯಚಂದ್ರ ಹೇಳಿದ್ದಾರೆ.
‘ಅಪಘಾತದಲ್ಲಿ ಪಾರಾಗಿದ್ದ ಪ್ರಭಾ’: ಪ್ರಭಾ ಅವರು 2005ರಲ್ಲಿ ಪ್ರಶಾಂತ್ ನಗರದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.