ರಾಷ್ಟ್ರೀಯ

ಮೆಟ್ರೊ: ಸುರಂಗ ಸಂಚಾರಕ್ಕೊಂದು ವಿಶೇಷ ತಾಲೀಮು; ಮಿನ್ಸ್ಕ್‌ ಚೌಕ– ನಗರ ರೈಲು ನಿಲ್ದಾಣದವರೆಗಿನ ಮಾರ್ಗ

Pinterest LinkedIn Tumblr

metro

ಬೆಂಗಳೂರು: ರಾಜಧಾನಿಯ ಪ್ರಪ್ರಥಮ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಗಾಡಿ ಓಡಿಸುವ ಮುನ್ನ ರೈಲಿನ ಅಳತೆಗಿಂತ ಸ್ವಲ್ಪ ದೊಡ್ಡದಾದ ‘ಸ್ಟ್ರಕ್ಚರ್‌ ಗೇಜ್‌’ ಎಂಬ ಕಬ್ಬಿಣದ ತಳ್ಳುಗಾಡಿಯನ್ನು ಹಳಿ­ಗಳ ಮೇಲೆ ಓಡಾಡಿಸುವ ಕಾರ್ಯ ಪ್ರಾರಂಭವಾಗಿದೆ.
ರೈಲಿನ ಸುಗಮ ಸಂಚಾರಕ್ಕೆ ಸುರಂಗದಲ್ಲಿ ಯಾವುದಾದರೂ ಅಡೆತಡೆಗಳಿವೆಯೇ ಎಂಬುದನ್ನು ಪತ್ತೆ ಹಚ್ಚಿ, ಸರಿಪಡಿಸುವ ಉದ್ದೇಶದಿಂದ ಈ ತಾಲೀಮು ನಡೆಸಲಾಗುತ್ತಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗೆ ನಿರ್ಮಾಣ­ಗೊಂಡಿರುವ 4.8 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಈ ತಳ್ಳುಗಾಡಿ ಹೋಗಿ ಬರಲಿದೆ.ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಸುರಂಗ­ದಲ್ಲಿ ಇಂತಹ ಒಂದು ತಾಲೀಮಿನ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಏಳುವುದು ಸಹಜ.ಇದಕ್ಕೆ ಉತ್ತರವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ ತಂತ್ರಜ್ಞರೊಬ್ಬರು ವಿವರಿಸಿದ್ದು ಹೀಗೆ; ರೈಲು ಹಳಿಗಳ ಮೇಲೆ ಸಂಚರಿಸುವಾಗ ಅದರ ಗಾಲಿಗಳು ಸ್ವಲ್ಪ ಮಟ್ಟಿಗೆ ಆಚೀಚೆ ಸರಿಯುತ್ತವೆ. ಇದನ್ನು ‘ಕೈನಮೆಟಿಕ್‌ ಎನ್ವಲಪ್‌’ ಎಂದು ಕರೆಯ­ಲಾಗುತ್ತದೆ. ಆಗ ರೈಲಿನ ಮೇಲ್ಭಾಗವು ಸುರಂಗದ ಗೋಡೆಯನ್ನು ಸ್ಪರ್ಶಿಸುವ ಸಾಧ್ಯತೆ ಇದೆ.

ತಿರುವುಗಳಲ್ಲಿ ಹಳಿಗಳು ಏರು ಪೇರಾಗಿರುತ್ತವೆ. ಉದಾಹರಣೆಗೆ ಬಲ ತಿರುವಿನಲ್ಲಿ ಎಡ ಭಾಗ ಎತ್ತರಕ್ಕಿದ್ದರೆ ಬಲ ಭಾಗ ಕೆಳಭಾಗಕ್ಕೆ ಇರುತ್ತದೆ. ಅಂತಹ ಸ್ಥಳಗಳಲ್ಲಿಯೂ ರೈಲಿನ ಮೇಲ್ಭಾಗವು ಸುರಂಗವನ್ನು ಸ್ಪರ್ಶಿಸಬಹುದು. ಇನ್ನು ಪ್ಲಾಟ್‌ಫಾರಂನ ಅಂಚಿಗೂ ಬಂದು ನಿಲ್ಲುವ ರೈಲಿಗೂ 50 ಮಿಲಿ ಮೀಟರ್‌ಗಳಷ್ಟು ಅಂತರ ಇರುತ್ತದೆ. ಅಂತಹ ಕಡೆ ಸ್ವಲ್ಪ ಪ್ರಮಾಣ­ದಲ್ಲಿ ಕಾಂಕ್ರಿಟ್‌ ಮಿಶ್ರಣ ಹೆಚ್ಚಾಗಿದ್ದರೂ ರೈಲಿನ ಸಂಚಾರಕ್ಕೆ ತಡೆಯಾಗುವ ಸಂಭವ ಇರುತ್ತದೆ. ಹೀಗೆ ಯಾವುದೇ ರೀತಿಯ ಅಡೆತಡೆಗಳನ್ನು ರೈಲು ಸಂಚಾರಕ್ಕೆ ಮೊದಲೇ ನಿವಾರಿಸಿಕೊಳ್ಳುವ ಸಲುವಾಗಿ ‘ಸ್ಟ್ರಕ್ಚರ್‌ ಗೇಜ್‌’ ತಳ್ಳುಗಾಡಿಯನ್ನು ಓಡಾಡಿಸಲಾಗುತ್ತಿದೆ.

ಪರೀಕ್ಷಾರ್ಥ ಸಂಚಾರ–- ಸುರಂಗದಲ್ಲಿ ಈಗಲೇ ಸಾಧ್ಯವಿಲ್ಲ: ಈ ತಿಂಗಳ 12ರಂದು ಮೆಟ್ರೊ ರೈಲು ಗಾಡಿಯು ಸುರಂಗದಲ್ಲಿ ಸಂಚಾರ ಆರಂಭಿಸುತ್ತದೆ. ಆದರೆ ಸುರಂಗದಲ್ಲಿ ಪರೀಕ್ಷಾರ್ಥ ಸಂಚಾರ ಎರಡು ತಿಂಗಳ ನಂತರ ಆರಂಭವಾಗಲಿದೆ.ಜೋಡಿ ಸುರಂಗದಲ್ಲಿ ಹಳಿ ಅಳವಡಿಕೆ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದರೂ ವಿದ್ಯುತ್‌ ಪೂರೈಸುವ ಮೂರನೇ ಹಳಿ (ಥರ್ಡ್‌ ರೈಲ್‌) ಅಳವಡಿಕೆ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ.

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗಿನ ಎತ್ತರಿಸಿದ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸುವ ಸಲುವಾಗಿ ಎಂ.ಜಿ. ರಸ್ತೆ ಕಡೆಯಿಂದ ಸುರಂಗ ಮಾರ್ಗದ ಮೂಲಕ ರೈಲು ಗಾಡಿಯನ್ನು ಮಾಗಡಿ ರಸ್ತೆಗೆ ತಲುಪಿಸಲಾಗುತ್ತಿದೆ. ಸುರಂಗದಲ್ಲಿ ಬ್ಯಾಟರಿ ಸಹಾಯದಿಂದ ರೈಲು ಸಂಚರಿಸಲಿದೆ. ಮೇ ತಿಂಗಳ ಮಧ್ಯ ಭಾಗದ ವೇಳೆಗೆ ಸುರಂಗ ಮಾರ್ಗದಲ್ಲಿ ವಿದ್ಯುತ್‌ ಸಂಪರ್ಕ ಏರ್ಪಟ್ಟಿರುತ್ತದೆ. ಆಗ ಸುರಂಗದಲ್ಲೂ ಪರೀಕ್ಷಾರ್ಥ ಸಂಚಾರ ನಡೆಸುವುದು ನಿಗಮದ ಚಿಂತನೆಯಾಗಿದೆ.

560 ಕೆ.ಜಿ ತೂಕದ ‘ಸ್ಟ್ರಕ್ಚರ್‌ ಗೇಜ್‌’
4 ಮೀಟರ್‌ಗಳಷ್ಟು ಎತ್ತರವಿರುವ ‘ಸ್ಟ್ರಕ್ಚರ್‌ ಗೇಜ್‌’ನ ಅಗಲ 3.4 ಮೀಟರ್‌ಗಳು. ಇದಕ್ಕಿಂತ ರೈಲು ಗಾಡಿಯ ಎತ್ತರ ಮತ್ತು ಅಗಲವು ಸುಮಾರು ತಲಾ ಒಂದು ಅಡಿಯಷ್ಟು ಕಡಿಮೆ ಇರಲಿದೆ. ರೈಲು ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಚಲಿಸುವಾಗ ಅತ್ತಿತ್ತ ವಾಲಿದರೆ ಯಾವ ಪ್ರಮಾಣದಲ್ಲಿ ಅಕ್ಕಪಕ್ಕಕ್ಕೆ ಸರಿದಾಡಬಹುದೋ ಆ ಅಳತೆಗೆ ತಕ್ಕಂತೆ ತಳ್ಳುಗಾಡಿಯ ಎತ್ತರ ಮತ್ತು ಅಗಲವನ್ನು ನಿರ್ಧರಿಸಲಾಗಿದೆ. ಈ ತಳ್ಳುಗಾಡಿಯ ತೂಕ 560 ಕೆ.ಜಿ. ಇದಕ್ಕೆ ಮೋಟಾರ್‌ ಇಲ್ಲ. ಮಾನವ ಚಾಲಿತ ಗಾಡಿಗೆ ಬ್ರೇಕ್‌ ಕೂಡ ಇದೆ.

ಜುಲೈನಲ್ಲಿ ರೈಲು ಸಂಚಾರ
ಮಾಗಡಿ ರಸ್ತೆ– ಮೈಸೂರು ರಸ್ತೆ ಮಾರ್ಗ­ದಲ್ಲಿ ಮೇ ತಿಂಗಳಾಂತ್ಯಕ್ಕೆ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಬಹುದು. ಮಿನ್ಸ್ಕ್‌ ಚೌಕದಿಂದ ನಗರ ರೈಲು ನಿಲ್ದಾಣ­ದ­ವರೆಗಿನ ಸುರಂಗದಲ್ಲಿ ಸಾರ್ವಜನಿಕರಿಗೆ ರೈಲಿ­ನಲ್ಲಿ ಓಡಾ­ಡುವ ಅವಕಾಶ ಜುಲೈ ವೇಳೆಗೆ ಒದಗಿಬರಲಿದೆ.

Write A Comment