ರಾಷ್ಟ್ರೀಯ

ಸಂಸತ್‌ ಕ್ಯಾಂಟೀನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಊಟ

Pinterest LinkedIn Tumblr

parlime

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮ­ವಾರ ಮಧ್ಯಾಹ್ನ ಸಂಸತ್‌ನ ಕ್ಯಾಂಟೀನ್‌ಗೆ ತೆರಳಿ ಊಟ ಮಾಡಿ­ದರು. ಅಲ್ಲಿ ಭೋಜನ ಸವಿಯುತ್ತಿದ್ದ ಸಂಸದರಿಗೆ ಅಚ್ಚರಿ ಮೂಡಿಸಿದರು.

ಸಣ್ಣ ಸಣ್ಣ ಗುಂಪುಗಳಲ್ಲಿ ಸುಮಾರು 18 ಸಂಸದರು ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಮೋದಿ ಅಲ್ಲಿಗೆ ಬಂದರು. ಸಂಸದರಿಗೆ ನಮಸ್ಕರಿಸಿ ಮೋದಿ ಅಲ್ಲಿಯೇ ಊಟಕ್ಕೆ ಕುಳಿತರು. ಕೆಲವು ಸಂಸದರು ಪ್ರಧಾನಿಗೆ ತಮ್ಮ ಪರಿಚಯ ಹೇಳಿಕೊಂಡರು.

‘ಏನಾದರೂ ವಿಶೇಷ ಆಹಾರ ಕೊಡಲೇ?’ ಎಂದು ಕ್ಯಾಂಟೀನ್‌ ನೋಡಿ­ಕೊಳ್ಳುತ್ತಿರುವ ಬಿ.ಎಲ್‌ ಪುರೋಹಿತ್‌ ಪ್ರಶ್ನಿಸಿದರು. ‘ಬೇಡ, ಸಾಮಾನ್ಯ ಸಸ್ಯಾ­ಹಾರಿ ಥಾಲಿ ಕೊಡಿ’ ಎಂದು ಪ್ರಧಾನಿ ಉತ್ತರಿಸಿದರು. ಪಾಲಕ್‌ ಸಬ್ಜಿ, ದಾಲ್‌, ರಾಜ್ಮಾ, ಸಲಾಡ್‌, ತಂದೂರಿ ರೋಟಿ ಮತ್ತು ಅನ್ನವನ್ನು ಒಳಗೊಂಡ ಊಟವನ್ನು ಪ್ರಧಾನಿಗೆ ಬಡಿಸಲಾಯಿತು.

ಮೋದಿ ಅವರು ಬಾಟಲಿ ನೀರು ಕೂಡ ಕೇಳಲಿಲ್ಲ. ಕ್ಯಾಂಟೀನ್‌ನಲ್ಲಿ ಪೂರೈ­ಸಲಾಗುವ ಸಾಮಾನ್ಯ ನೀರನ್ನೇ ಕುಡಿದರು.
‘ಊಟದ ನಂತರ ಪ್ರಧಾನಿ ನೂರು ರೂಪಾಯಿ ನೋಟು ಕೊಟ್ಟರು. ಊಟದ ಹಣ ₨ 29 ಕಳೆದು ಉಳಿಕೆ ₨71 ವಾಪಸ್‌ ಕೊಟ್ಟೆ’ ಎಂದು ಪ್ರಧಾ­ನಿಗೆ ಊಟ ಬಡಿಸಿದ ರಾಮಾ ಶಂಕರ್‌ ಹೇಳಿದ್ದಾರೆ.

ಸುಮಾರು 20–25 ನಿಮಿಷ ಅವರು ಕ್ಯಾಂಟೀನ್‌ನಲ್ಲಿದ್ದರು. ಅವ­ರೊಂ­ದಿಗೆ ಗುಜರಾತ್‌ನ ಇಬ್ಬರು ಸಂಸ­ದರು ಕುಳಿತಿದ್ದರು. ನಂತರ ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಜೊತೆಯಾದರು. ಇದೊಂದು ಚಾರಿತ್ರಿಕ ಕ್ಷಣ ಎಂಬು­ದನ್ನು ಮನಗಂಡ ಪುರೋಹಿತ್‌, ‘ಸಲಹಾ ಪುಸ್ತಕ’ದಲ್ಲಿ ಏನಾದರೂ ಬರೆಯುವಂತೆ ಪ್ರಧಾನಿ ಯವರನ್ನು ಕೋರಿದರು. ‘ಅನ್ನದಾತೋ ಸುಖೀ­ಭವ’ ಎಂದು ಬರೆದು ಪ್ರಧಾನಿ ಸಹಿ ಮಾಡಿದರು.

ಇದೇ ಮೊದಲು
ಮೂಲಗಳ ಪ್ರಕಾರ, ಸಂಸತ್‌ ಕ್ಯಾಂಟೀನ್‌ನಲ್ಲಿ ಪ್ರಧಾನಿಯೊಬ್ಬರು ಊಟ ಮಾಡಿದ್ದು ಇದೇ ಮೊದಲು. ಹಿಂದೊಮ್ಮೆ ರಾಜೀವ್ ಗಾಂಧಿ ಇಲ್ಲಿ ಊಟ ಮಾಡಿದ್ದರು. ಆದರೆ ಆಗ ಅವರು ಪ್ರಧಾನಿಯಾಗಿರಲಿಲ್ಲ.

Write A Comment