ನವದೆಹಲಿ: ಆಮ್ ಆದ್ಮಿ ಸರ್ಕಾರ ದೆಹಲಿ ಜನತೆಗೆ ಬುಧವಾರ ಭರ್ಜರಿ ಗಿಫ್ಟ್ ನೀಡಿದ್ದು, ಶೇ.50ರಷ್ಟು ವಿದ್ಯುತ್ ರಿಯಾಯಿತಿ ಹಾಗೂ 20 ಸಾವಿರ ಲೀಟರ್ ಉಚಿತ ನೀರು ನೀಡುವುದಾಗಿ ಘೋಷಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ನೂತನ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳನ್ನು ಪ್ರಕಟಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ, ವಿದ್ಯುತ್‌ಗೆ 400 ಯೂನಿಟ್‌ಗಳವರೆಗೆ ಶೇ.50ರಷ್ಟು ರಿಯಾಯಿತು ಹಾಗೂ ಪ್ರತಿ ಕುಟುಂಬಕ್ಕೆ ತಿಂಗಳಿಗೆ 20 ಸಾವಿರ ಲೀಟರ್ ನೀರು ಉಚಿತವಾಗಿ ನೀಡಲಾಗುವುದು ಎಂದರು. ಅಲ್ಲದೆ ಮಾರ್ಚ್ 1ರಿಂದಲೇ ಈ ಎರಡು ಯೋಜನೆಗಳು ಜಾರಿಗೆ ಬರಲಿವೆ ಎಂದು ತಿಳಿಸಿದರು.
ದೆಹಲಿ ನಾಗರಿಕರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಹಾಗೂ ಉಚಿತ ನೀರು ನೀಡಲು ಆಪ್ ಸರ್ಕಾರ ಮುಂದಾಗಿದ್ದು, ಇದರಿಂದ ದೆಹಲಿಯ 18 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಸಿಸೋಡಿಯಾ ಹೇಳಿದರು
ಉಚಿತ ನೀರು ಯೋಜನೆಗೆ 20 ಸುಮಾರು ಕೋಟಿ ರುಪಾಯಿ ಹಾಗೂ ವಿದ್ಯುತ್ ಸಬ್ಸಿಡಿಗೆ ಸುಮಾರು 90 ಕೋಟಿ ರುಪಾಯಿ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಸಿಸೋಡಿಯಾ ತಿಳಿಸಿದರು.
ಅಧಿಕಾರಕ್ಕೆ ಬಂದ ಕೂಡಲೇ ಉಚಿತ ನೀರು ಹಾಗೂ ಶೇ.50ರಷ್ಟು ವಿದ್ಯುತ್ ದರ ಕಡಿತಗೊಳಿಸುವುದಾಗಿ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷ ಭರವಸೆ ನೀಡಿತ್ತು.