ರಾಷ್ಟ್ರೀಯ

ಕಾಂಗ್ರೆಸ್ ಸಾರಥ್ಯ ಏಪ್ರಿಲ್‌ನಲ್ಲಿ ರಾಹುಲ್ ಕೈಗೆ: ಕೇಂದ್ರ ಸರಕಾರದ ವಿರುದ್ಧ ಪೂರ್ಣ ಪ್ರಮಾಣದ ಸಮರ ಸಾರಲು ಹಸ್ತ ಪಕ್ಷ ತಯಾರಿ

Pinterest LinkedIn Tumblr

rahul

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಸಾರಥ್ಯವನ್ನು ಸೋನಿಯಾ ಗಾಂಧಿ ಅವರ ಕೈಯಿಂದ ರಾಹುಲ್ ಗಾಂಧಿ ಅವರು ಇದೇ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಕೈಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪಕ್ಷದ ಉತ್ತರಾಧಿಕಾರಿ ಆಯ್ಕೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿರುವ ಮತ್ತು ಗಾಂಧಿ ಕುಟುಂಬಕ್ಕೆ ಆಪ್ತರಾದ ಇಬ್ಬರು ಉನ್ನತ ನಾಯಕರು ಈ ವಿಷಯವನ್ನು ವಿಕ ಸಹೋದರ ಪತ್ರಿಕೆ ‘ಎಕನಾಮಿಕ್ಸ್ ಟೈಮ್ಸ್’ಗೆ ತಿಳಿಸಿದ್ದಾರೆ.

ರಾಹುಲ್ ಬಡ್ತಿಗೆ ಪಕ್ಷದ ಉನ್ನತ ನಾಯಕರು ಎರಡು ಸಮಯಗಳನ್ನು ನಿಗದಿಪಡಿಸಿದ್ದಾರೆ. ಇದೇ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುವ ಎಐಸಿಸಿ ವಿಶೇಷ ಅಧಿವೇಶನದಲ್ಲಿ ರಾಹುಲ್‌ಗೆ ಪಟ್ಟ ಕಟ್ಟಲಾಗುತ್ತದೆ. ತಪ್ಪಿದರೆ ಜುಲೈ ಅಥವಾ ಆಗಸ್ಟ್‌ನಲ್ಲಿ ನಡೆಯುವ ಪಕ್ಷದ ಮಹಾಧಿವೇಶನದಲ್ಲಿ ನಾಯಕತ್ವ ಹಸ್ತಾಂತರ ನಿರ್ಧಾರ ಹೊರಬೀಳಲಿದೆ.

ಬಹಳಷ್ಟು ಚಿಂತನ-ಮಂಥನ ನಡೆಸಿದ ಬಳಿಕ ಅಳೆದೂ ತೂಗಿ ಅಧಿಕಾರ ಹಸ್ತಾಂತರದ ವೇಳಾಪಟ್ಟಿ ನಿರ್ಧರಿಸಲಾಗಿದೆ. ಮೇಲೆ ನಿರ್ಧರಿಸಿದ ಎರಡೂ ಸಮಯಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒಂದು ವರ್ಷ ಪೂರೈಸುವ ಆಜುಬಾಜಿನಲ್ಲಿರುತ್ತದೆ.

ಸಾಮಾನ್ಯವಾಗಿ ಯಾವುದೇ ಸರಕಾರ ಅಧಿಕಾರಕ್ಕೇರಿದ ಮೊದಲ ಒಂದು ವರ್ಷವನ್ನು ಮಧುಚಂದ್ರ ಕಾಲವೆಂದು ಪರಿಗಣಿಸಿ, ಪ್ರತಿಪಕ್ಷಗಳು ಆದರ ಕಾರ‌್ಯವೈಖರಿಯನ್ನು ಹೆಚ್ಚಾಗಿ ಟೀಕಿಸುವುದಿಲ್ಲ. ಹನಿಮೂನ್ ಕಾಲಾವಧಿ ಮುಗಿದ ತಕ್ಷಣ ಪ್ರತಿಪಕ್ಷಗಳು ಸರಕಾರದ ಕೆಲಸವನ್ನು ಕಟುವಾಗಿ ವಿಮರ್ಶೆಗೊಳಪಡಿಸುವುದು ವಾಡಿಕೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಹೊಸ ನಾಯಕನಿಗೆ ಪಟ್ಟ ಕಟ್ಟಿ ಆತನ ನೇತೃತ್ವದಲ್ಲಿ ಸರಕಾರದ ಕಾರ‌್ಯವೈಖರಿ ವಿರುದ್ಧ ಬೃಹತ್ ಜನಾಂದೋಲನ ನಡೆಸಬೇಕು ಎಂಬುದು ಪಕ್ಷದ ಚಿಂತನೆಯಾಗಿದೆ. ಇದೇ ಉದ್ದೇಶದಿಂದಲೇ ಪಕ್ಷದ ಬಹುತೇಕ ಹಿರಿಯ ನಾಯಕರು ರಾಹುಲ್ ಅವರಿಗೆ ಈ ವರ್ಷವೇ ಬಡ್ತಿ ನೀಡಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ನಾಯಕರು ತಿಳಿಸಿದ್ದಾರೆ.

ರಾಹುಲ್ ಸಮ್ಮತಿ ಸಂಭವ
”ಪಕ್ಷದ ಭವಿಷ್ಯದ ಕಾರ‌್ಯತಂತ್ರಗಳ ಕುರಿತಂತೆ ಉನ್ನತ ನಾಯಕರೊಂದಿಗೆ ನಡೆಸಿದ ಸಮಾಲೋಚನೆಯಲ್ಲೂ ರಾಹುಲ್‌ಗೆ ಪಟ್ಟ ಕಟ್ಟಿ, ತಮ್ಮದೇ ಆದ ತಂಡ ಕಟ್ಟಲು ಅವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಪಕ್ಷ ಅಸ್ತಿತ್ವಕ್ಕೆ ಬಂದು 130ನೇ ವರ್ಷದಲ್ಲಿ ಕಾಂಗ್ರೆಸ್ ಹೊಸ ಅಧ್ಯಕ್ಷರನ್ನು ಹೊಂದಲಿದೆ ಎಂಬ ಭರವಸೆ ನಮ್ಮೆಲ್ಲರದು,” ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಈಗಾಗಲೇ 45 ವರ್ಷ ಪೂರೈಸಿರುವ ಯುವ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಉಪಾಧ್ಯಕ್ಷರಾಗಿ ಎರಡು ವರ್ಷ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಜಾಣ್ಮೆ ಅವರಿಗೆ ಕರಗತವಾಗಿದೆ. ಸದ್ಯ ಅವರೂ ಸಹ ನಾಯಕತ್ವ ವಹಿಸುವುದಕ್ಕೆ ಸಮ್ಮತಿಸುವ ಸೂಚನೆಗಳಿವೆ ಎಂದು ಅವರು ಹೇಳಿದ್ದಾರೆ.

ರಾಹುಲ್‌ಗೆ ಪಟ್ಟಕಟ್ಟಿ ಕಾಂಗ್ರೆಸ್‌ಗೆ ಹೊಸ ಚೈತನ್ಯ ತುಂಬಬೇಕು ಎಂದು ಎಷ್ಟೇ ಅಗ್ರಹ ಕೇಳಿಬಂದಿದ್ದರೂ, ಉತ್ತರಾಧಿಕಾರಿ ಆಯ್ಕೆ ಕುರಿತಾದ ಯಾವುದೇ ಪ್ರಶ್ನೆಗೆ ಉತ್ತರಿಸಲು ಪಕ್ಷದ ನಾಯಕರು ಇದುವರೆಗೂ ನಿರಾಕರಿಸುತ್ತಲೇ ಬಂದಿದ್ದರು. ಇದೇ ಮೊದಲ ಬಾರಿಗೆ ಉನ್ನತ ನಾಯಕರಿಬ್ಬರು ಅಧಿಕಾರ ಹಸ್ತಾಂತರದ ಕುರಿತಂತೆ ಸುಳಿವು ಬಿಟ್ಟುಕೊಟ್ಟಿರುವುದು ಮಹತ್ವವಾಗಿದೆ.

ಬದಲಾವಣೆಗಿದೆ ಹಲವು ಕಾರಣ
ಪಕ್ಷದ ನಾಯಕರು ಏನೇ ಹೇಳಬಹುದು. ಆದರೆ, ಹೊಸ ನಾಯಕನಿಗೆ ಹೊಣೆ ವಹಿಸುವುದು ಕಾಂಗ್ರೆಸ್‌ಗೆ ಅನಿವಾರ‌್ಯವಾಗಿದೆ. ಕಾಂಗ್ರೆಸ್ ಅಧ್ಯಕ್ಷರಾಗಿ 17 ವರ್ಷ ಸೇವೆ ಸಲ್ಲಿಸಿರುವ 69 ವರ್ಷದ ಸೋನಿಯಾ ಗಾಂಧಿ ಅವರಿಗೆ ಮೊದಲಿನಂತೆ ಬಿಡುವಿಲ್ಲದೇ ದುಡಿಯಲು ಆರೋಗ್ಯ ಮತ್ತು ವಯಸ್ಸು ಅವಕಾಶ ನೀಡುತ್ತಿಲ್ಲ. ಯಾವುದೋ ಕಾಯಿಲೆಯಿಂದ ಬವಣೆ ಪಡುತ್ತಿರುವ ಸೋನಿಯಾ ಗಾಂಧಿ ಅವರು ಚಿಕಿತ್ಸೆಗಾಗಿ ಪದೇಪದೇ ವಿದೇಶ ಪಯಣ ಮಾಡುತ್ತಿದ್ದಾರೆ. ತಮ್ಮ ಶಕ್ತಿಗುಂದಿರುವುದನ್ನು ಮನಗಂಡಿರುವ ಅವರು ಈಗಾಗಲೇ ಪುತ್ರ ರಾಹುಲ್‌ಗೆ ಹೆಚ್ಚಿನ ಅಧಿಕಾರ ಹಸ್ತಾಂತರಿಸಿದ್ದಾರೆ.

ಅದೂ ಅಲ್ಲದೇ, ಲೋಕಸಭೆ ಚುನಾವಣೆ ಮತ್ತು ಆ ಬಳಿಕ ನಡೆದ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಸೋತು ಸೊರಗಿರುವ ಪಕ್ಷಕ್ಕೆ ನವ ಚೈತನ್ಯ ತುಂಬಲು ಹೊಸಗಾಳಿ ಬೀಸುವ ತುರ್ತು ಅಗತ್ಯವಿದೆ. ನಿರಂತರ ಸೋಲಿನಿಂದಾಗಿ ನಿರುತ್ಸಾಹಗೊಂಡಿರುವ ಪಕ್ಷದ ಕಾರ‌್ಯಕರ್ತರ ಸಮೂಹ, ಭವಿಷ್ಯದ ನಾಯಕತ್ವದ ಕುರಿತ ಗೊಂದಲದಿಂದ ಇನ್ನಷ್ಟು ಸೊರಗದಂತೆ ನೋಡಿಕೊಳ್ಳುವ ತುರ್ತಿದೆ. ಆದ್ದರಿಂದ ರಾಹುಲ್‌ಗೆ ಬಡ್ತಿ ನೀಡಿ, ಕಾರ‌್ಯಕರ್ತರ ಪಡೆಯನ್ನು ಬಿಜೆಪಿ ವಿರುದ್ಧ ಮರು ಹೋರಾಟಕ್ಕೆ ಸಜ್ಜುಗೊಳಿಸುವ ಹೊಣೆ ವಹಿಸಬೇಕು ಎಂಬ ಒಟ್ಟಾಭಿಪ್ರಾಯ ಪಕ್ಷದ ಹಿರಿಯ ನಾಯಕರದ್ದು.

ಪಕ್ಷದ ಸಂಘಟಿಸಲು ರಾಹುಲ್‌ಗೆ ಕಾಲಾವಕಾಶ
ಲೋಕಸಭೆ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳಿವೆ. ಈಗಲೇ ರಾಹುಲ್‌ಗೆ ಪಟ್ಟಕಟ್ಟಿ, ತಮ್ಮ ತಂಡ ರಚಿಸಲು ಅವಕಾಶ ಮಾಡಿಕೊಡಬೇಕು. ಸಂಸದ, ಎಐಸಿಸಿ ಪ್ರಧಾನ ಕಾರ‌್ಯದಶಿ, ಉಪಾಧ್ಯಕ್ಷ…ಹೀಗೆ ಹಂತಹಂತವಾಗಿ ನಾಯಕನಾಗಿ ಬೆಳೆಯುತ್ತಿರುವ ರಾಹುಲ್, ಇನ್ನು ನಾಲ್ಕು ವರ್ಷಗಳಲ್ಲಿ ತಮ್ಮ ತಂಡದೊಂದಿಗೆ ಪರಿಣಾಮಕಾರಿ ನಾಯಕರಾಗಿ ಬೆಳೆಯಬಲ್ಲರು ಎಂಬ ಭರವಸೆ ಪಕ್ಷದ್ದು.

ಯುವಕರಿಗೆ ಅವಕಾಶ
ಕಾಂಗ್ರೆಸ್‌ನ ಉನ್ನತ ನಾಯಕರಲ್ಲಿ ಬಹುತೇಕ ಮಂದಿ 60-70ರ ಪ್ರಾಯದ ಅಂಚಿನಲ್ಲಿದ್ದಾರೆ. ದೇಶದ ಯುವ ಮತದಾರರ ಮೇಲೆ ಪರಿಣಾಮ ಬೀರಲು ಕಾಂಗ್ರೆಸ್ ಸಹ ಯುವ ನಾಯಕತ್ವವನ್ನೇ ಹೊಂದಬೇಕು. ಅದಕ್ಕಿರುವ ಉತ್ತಮ ಆಯ್ಕೆಯೆಂದರೆ ರಾಹುಲ್. ರಾಹುಲ್ ಅವರಿಗೆ ತಮ್ಮದೇ ಆದ ಯುವ ತಂಡವನ್ನು ಕಟ್ಟಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಪಕ್ಷದ ಕಾರ‌್ಯಕರ್ತರು ಮತ್ತು ಮತದಾರರಲ್ಲಿ ವಿಶ್ವಾಸ ಮೂಡಿಸಲು ಸಾಕಷ್ಟು ಕಾಲಾವಕಾಶವನ್ನೂ ನೀಡಬೇಕು. ಇದಕ್ಕೆ ರಾಹುಲ್‌ಗೆ ಈಗಲೇ ಪಟ್ಟಕಟ್ಟುವುದು ಅಗತ್ಯ ಎಂಬ ವಾದ ಉನ್ನತ ನಾಯಕರಲ್ಲಿದೆ.

ಪ್ರಿಯಾಂಕಾಗಿಲ್ಲ ಅವಕಾಶ
ಪ್ರತಿ ಚುನಾವಣೆ ಸೋತಾಗಲೂ ಪಕ್ಷದ ಕೆಲವು ವಲಯದಲ್ಲಿ ರಾಹುಲ್ ವಿರೋಧಿ ಕೂಗು ಕೇಳಿಬರುವುದು ವಾಡಿಕೆಯಾಗಿದೆ. ರಾಹುಲ್‌ರನ್ನು ಬದಿಗೆ ಸರಿಸಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಡಿಯಚ್ಚಿನಂತಿರುವ ಪ್ರಿಯಾಂಕಾ ವಾದ್ರಾಗೆ ಪಟ್ಟಕಟ್ಟಬೇಕು ಎಂಬ ಆಗ್ರಹ ಕೇಳಿ ಬಂದಿದ್ದೂ ಇದೆ. ಆದರೆ, ಪಕ್ಷದ ಉನ್ನತ ನಾಯಕರು ಯೋಚಿಸುವುದೇ ಬೇರೆ. ಪ್ರಿಯಾಂಕಾರನ್ನು ಕರೆತರುವ ಬಗ್ಗೆ ಅಲೋಚನೆಯೇ ನಡೆದಿಲ್ಲ. ಸಾಕಷ್ಟು ಸಮಯ ನೀಡಿದರೆ ರಾಹುಲ್ ಅವರೇ ತಮ್ಮೆಲ್ಲಾ ಲೋಪಗಳನ್ನೂ ಸರಿಪಡಿಸಿಕೊಂಡು ಉತ್ತಮ ನಾಯಕರಾಗಿ ಬೆಳೆಯುತ್ತಾರೆ ಎಂಬುದು ಗಾಂಧಿ ಕುಟುಂಬ ಸೇರಿದಂತೆ ಹಿರಿಯರೆಲ್ಲರ ನಂಬಿಕೆ. ಹೀಗಾಗಿ ಪ್ರಿಯಾಂಕಾ ನಾಯಕತ್ವ ವಹಿಸಿಕೊಳ್ಳುವುದು ದೂರದ ಮಾತೇ ಸರಿ.

ಪೂರ್ವ ತಯಾರಿ
ರಾಹುಲ್ ಪಟ್ಟಾಭಿಷೇಕಕ್ಕೆ ಕಾಂಗ್ರೆಸ್ ಪೂರ್ವ ತಯಾರಿಯನ್ನೂ ನಡೆಸುತ್ತಿದೆ. ಮೋದಿ ಸರಕಾರ ಈಗಾಗಲೇ ಹಲವು ತಪ್ಪು ಹೆಜ್ಜೆಗಳನ್ನು ಇರಿಸಿದ್ದು, ಅದನ್ನು ಜನರಿಗೆ ತಲುಪಿಸಲು ಯೋಜನೆ ರೂಪುಗೊಳ್ಳುತ್ತಿದೆ. ಬಜೆಟ್ ಅಧಿವೇಶನದ ಸಮಯದಲ್ಲೇ ಅಂದರೆ ಮಾರ್ಚ್‌ನಲ್ಲಿ ಹೊಸದಿಲ್ಲಿಯಲ್ಲಿ ಬೃಹತ್ ರ‌್ಯಾಲಿಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಜನ ಸಮಾವೇಶದಲ್ಲಿ ಭೂಸ್ವಾಧೀನ ಕಾಯಿದೆ, ಕಲ್ಲಿದ್ದಲು ಘಟಕ ಹಂಚಿಕೆ ಕುರಿತಂತೆ ಕೇಂದ್ರ ಸರಕಾರ ಕೈಗೊಂಡ ಜನವಿರೋಧಿ ನೀತಿಗಳ ಬಗ್ಗೆ ಧ್ವನಿಯೆತ್ತಲು ನಿರ್ಧರಿಸಲಾಗಿದೆ. ಹಿಂದಿನ ಯುಪಿಎ ಸರಕಾರ ಜಾರಿಗೊಳಿಸಿದ್ದ ಜನಪರ, ರೈತಪರ ಯೋಜನೆಗಳನ್ನು ಮೋದಿ ಸರಕಾರ ಮೂಲೆಗುಂಪು ಮಾಡಿರುವುದರ ವಿರುದ್ಧ ಸ್ವತಃ ರಾಹುಲ್ ಧ್ವನಿಯೆತ್ತಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Write A Comment