ಕೊಲ್ಲಂ (ಕೇರಳ), ಜ.1: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಲಾರಿಗೆ ಗುದ್ದಿದ ಪರಿಣಾಮ ಆರು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೇರಳದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಕೊಲ್ಲಂ ಜಿಲ್ಲೆಯ ಟಿಕೆಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೆ ವರ್ಷದ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ರಾತ್ರಿ ಹೊಸ ವರ್ಷಾಚರಣೆ ನಡೆಸಲು ಈ ವಿದ್ಯಾರ್ಥಿಗಳು ಕೊಲ್ಲಂನ ವರ್ಕಲಾ ಸಮುದ್ರಕ್ಕೆ ತೆರಳಿದ್ದರು. ಸಂಭ್ರಮ ಮುಗಿದ ಬಳಿಕ ಮನೆಗೆ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ರಸ್ತೆ ಬದಿ ನಿಂತಿದ್ದ ಲಾರಿಗೆ ಭಾರೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆ ಎಷ್ಟಿದೆ ಎಂದರೆ ಕಾರಿನ ಮುಂದಿನ ಅರ್ಧಭಾಗ ಲಾರಿಯ ಒಳಗಡೆ ಜಖಂಗೊಂಡಿದೆ. ಆರೂ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಹುತೇಕ ಮೃತದೇಹಗಳು ನಜ್ಜುಗುಜ್ಜಾಗಿದ್ದು, ಗುರುತು ಪತ್ತೆಹಚ್ಚುವುದೇ ಕಷ್ಟಕರವಾಗಿದೆ. ಕಾರು ಅತಿ ವೇಗದಿಂದ ಬರುತ್ತಿತ್ತು. ರಸ್ತೆ ಬದಿ ನಿಲ್ಲಿಸಿದ್ದ ನನ್ನ ಲಾರಿಗೆ ಹಿಂಬದಿ ಬಂದು ಗುದ್ದಿದ ಪರಿಣಾಮ ಎಲ್ಲರೂ ಕೊನೆಯುಸಿರೆಳೆದಿದ್ದಾರೆ. ಅವರ ದೇಹಗಳ ಹೊರತೆಗೆಯುವುದೇ ಸಮಸ್ಯೆಯಾಯಿತೆಂದು ಲಾರಿ ಚಾಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಮದ್ಯಪಾನ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ಮೂಲಗಳು ತಿಳಿಸಿವೆ.