ರಾಷ್ಟ್ರೀಯ

ಆಗ್ರಾ ಹಿಂದೂ ಧರ್ಮಕ್ಕೆ ‘ಮರುಮತಾಂತರ’ಕ್ಕೆ ರೇಷನ್‌ ಕಾರ್ಡ್‌ ಆಮಿಷ ಕಾರಣ?

Pinterest LinkedIn Tumblr

Conversions_Agra

ಆಗ್ರಾ: ಆಗ್ರಾದ ಮಧುನಗರ ಕೊಳಗೇರಿಯಲ್ಲಿ ಮೊನ್ನೆಯಷ್ಟೇ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡ 200 ಮುಸ್ಲಿಮರಲ್ಲಿ ಹಲವರು ತಾವೀಗಲೂ ಮುಸ್ಲಿಮರೇ ಆಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ತಮಗೆ ರೇಷನ್‌ ಕಾರ್ಡ್‌ ಹಾಗೂ ಮನೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದ ಬಳಿಕವೇ ತಾವು ಆರೆಸ್ಸೆಸ್‌ ಮತ್ತು ಬಜರಂಗದಳ ಆಯೋಜಿಸಿದ್ದ ‘ಘರ್‌ ವಾಪಸಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗಿ ಇನ್ನು ಕೆಲವರು ಹೇಳಿದ್ದಾರೆ.

ಆದಾಗ್ಯೂ, ಮರು ಮತಾಂತರಕ್ಕೆ ಯಾವುದೇ ಆಮಿಷಗಳನ್ನು ಒಡ್ಡಿಲ್ಲ ಎಂದು ಕೇಸರಿ ಸಂಘಟನೆಗಳು ಈ ಹೇಳಿಕೆಗಳನ್ನು ತಳ್ಳಿಹಾಕಿವೆ.

”ಕೇಸರಿ ಶಾಲುಗಳನ್ನು ಧರಿಸಿದ 40 ಮಂದಿ ನಿಮ್ಮ ಮುಂದೆ ನಿಂತು ಹೀಗೆ ಮಾಡಿ ಎಂದರೆ ಅವರು ಬಯಸಿದ್ದನ್ನು ನಾವು ಮಾಡಲೇಬೇಕಲ್ಲವೆ?” ಎಂದು ಕೊಳೆಗೇರಿ ನಿವಾಸಿ ಫರ್ಹಾನ್‌ ಹೇಳಿದರು. ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡವರ ಪೈಕಿ ಫರ್ಹಾನ್‌ ಕೂಡ ಒಬ್ಬರು. ಘರ್‌ ವಾಪಸಿ ಕಾರ್ಯಕ್ರಮದಲ್ಲಿ ಇವರೆಲ್ಲ ಶುದ್ಧೀಕರಣ ಹೋಮ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಲ್ಲದೆ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿದ್ದರು.

ಹಿಂದೂ ಪೂರ್ವಜರನ್ನು ಹೊಂದಿದ್ದ ಮುಸ್ಲಿಮರನ್ನು ‘ಘರ್‌ ವಾಪಸಿ’ ಹೆಸರಿನಲ್ಲಿ ಮರು ಮತಾಂತರಿಸಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧೀನ ಸಂಘಟನೆಯಾಗಿರುವ ಧರ್ಮ ಜಾಗರಣ್‌ ಸಮನ್ವಯ ವಿಭಾಗ ಈ ಕಾರ್ಯಕ್ರಮ ಆಯೋಜಿಸಿತ್ತು.

ಮರು ಮತಾಂತರ ಕಾರ್ಯಕ್ರಮ ನಡೆದಿರುವುದು ನಿಜ ಎಂದು ಬಜರಂಗ ದಳ ಕಾರ್ಯಕರ್ತ ಅಜ್ಜು ಚೌಹಾಣ್‌ ಹೇಳಿದ್ದಾರೆ. ಯಾರಾದರೂ ಕೆಲವರು ಅದನ್ನು ನಿರಾಕರಿಸುತ್ತಿದ್ದರೆ, ಅವರು ಕೇವಲ ಭಯದಿಂದ ಹಾಗೆ ಮಾಡುತ್ತಿದ್ದಾರೆ ಅಷ್ಟೆ ಎಂದು ಚೌಹಾಣ್‌ ತಿಳಿಸಿದರು.

”ಅವರೆಲ್ಲರಿಗೂ ಹಿಂದೂ ಪೂರ್ವಜರಿದ್ದರು. ಹೀಗಾಗಿ ಅವರು ‘ಮರಳಿ ಮನೆಗೆ’ ಬಂದಿದ್ದಾರೆ ಅಷ್ಟೆ. ಅವರಿಗೆ ರೇಷನ್‌ ಕಾರ್ಡ್‌ ಅಥವಾ ಮನೆಗಳನ್ನು ಒದಗಿಸುವ ಆಮಿಷ ಒಡ್ಡಿಲ್ಲ. ಅವರು ಸ್ವಚ್ಛ ಬದುಕನ್ನು ಬಾಳಲು ಬಯಸಿದ್ದಾರೆ” ಎಂದು ಚೌಹಾಣ್‌ ಹೇಳಿದರು.

ಈ ಕುರಿತು ತಮಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಪಂಕಜ್‌ ಕುಮಾರ್‌ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಶಲಭ್‌ ಮಾಥುರ್‌ ತಿಳಿಸಿದ್ದಾರೆ.

ಮರು ಮತಾಂತರ ಕಾರ್ಯಕ್ರಮಕ್ಕೆ ಮುಸ್ಲಿಮರ ನೇತೃತ್ವ ವಹಿಸಿದ್ದ ಇಸ್ಮಾಯಿಲ್‌, ತಾವು ಮಂಗಳವಾರವೂ ನಮಾಜ್‌ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮರು ಮತಾಂತರ ನಡೆದ ಮರುದಿನ ಯಾವ ಹಿಂದೂ ಸಂಘಟನೆಗಳೂ ತಮ್ಮತ್ತ ಸುಳಿಯಲಿಲ್ಲ. ನಮ್ಮ ಮೇಲೆ ಒತ್ತಡ ಹೇರುವವರು ಯಾರೂ ಇರಲಿಲ್ಲ. ಹೀಗಾಗಿ ನಮ್ಮಿಷ್ಟದಂತೆ ನಾವು ಬದುಕುತ್ತಿದ್ದೇವೆ. ಧರ್ಮ ಅಥವಾ ಮತಾಂತರದ ನೆಪದಿಂದ ಜೀವನವನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ” ಎಂದು ಇಸ್ಮಾಯಿಲ್‌ ತಿಳಿಸಿದರು.

”ಮೊದಲು ನಮ್ಮ ಮನೆಗಳನ್ನು ಖಾಲಿ ಮಾಡುವಂತೆ ಅವರು ಬೆದರಿಕೆ ಹಾಕಿದರು. ಈ ಭೂಮಿ ಹಿಂದೂ ಮಾಲೀಕರಿಗೆ ಸೇರಿದ್ದು. ನೀವು ಒಂದು ವೇಳೆ ಮತಾಂತರಗೊಂಡರೆ ನಿಮಗೆ ಒಳ್ಳೆಯ ಮನೆ, ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತೇವೆ ಎಂದು ಕೇಸರಿ ಕಾರ್ಯಕರ್ತರು ಭರವಸೆ ನೀಡಿದರು. ಹೀಗಾಗಿ ನಾವು ಮರುಮತಾಂತರಗೊಂಡೆವು” ಎಂದು ಇಸ್ಮಾಯಿಲ್‌ ತಿಳಿಸಿದರು.

Write A Comment