ರಾಷ್ಟ್ರೀಯ

ಉಬರ್‌ ನಿಷೇಧ ಪರಿಹಾರವಲ್ಲ: ಗಡ್ಕರಿ

Pinterest LinkedIn Tumblr

nithin

ನವದೆಹಲಿ: ಕ್ಯಾಬ್‌ನಲ್ಲಿ 27 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಘಟನೆ ಸಂಬಂಧ ರಾಷ್ಟ್ರ ರಾಜಧಾನಿಯಲ್ಲಿ ಸಾರಿಗೆ ಸೇವಾ ಕಂಪೆನಿ ‘ಉಬರ್‌’ ಓಡಾಟ ನಿಷೇಧಿಸಿರುವ ದೆಹಲಿ ಸರ್ಕಾರದ ಕ್ರಮವನ್ನು ವಿರೋಧಿಸಿರುವ ಕೇಂದ್ರ ರಸ್ತೆ ಸಾರಿಗೆ  ಸಚಿವ ನಿತಿನ್ ಗಡ್ಕರಿ, ಅಂಥ ಕ್ರಮವು ಸಮಸ್ಯೆಗಳಿಗೆ ಉತ್ತರವಾಗದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ವಿದ್ಯುನ್ಮಾನ ಕಾಂತ್ರಿಯ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ರೈಲ್ವೆ ಅಪಘಾತಗಳಿಗಾಗಿ  ರೈಲುಗಳನ್ನು, ಬಸ್‌ ಅಪಘಾತಗಳಿಗಾಗಿ ಬಸ್‌ಗಳನ್ನು ನಿಷೇಧಿಸುವುದು ಸರಿಯಲ್ಲ. ಹಾಗೆಯೇ ಟ್ಯಾಕ್ಸಿಗಳ ಓಡಾವನ್ನು ನಿಷೇಧಿಸುವುದು ಉಚಿತವಲ್ಲ’ ಎಂದು ಗಡ್ಕರಿ ಅವರು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಉಬರ್‌್ ಕ್ಯಾಬ್‌ ಚಾಲಕ ನಡೆಸಿದ ಅತ್ಯಾಚಾರದ ಪರಿಣಾಮ ದೆಹಲಿಯಲ್ಲಿ ಉಬರ್‌ ಕ್ಯಾಬ್‌ ಸೇವೆಯ ಮೇಲೆ ದೆಹಲಿ ಸರ್ಕಾರ ನಿಷೇಧ ವಿಧಿಸಿದ ಒಂದು ದಿನದ ಬಳಿಕ ಗಡ್ಕರಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಉಬರ್‌ ಸೇವೆ ನಿಷೇಧಿಸಿರುವ ದೆಹಲಿ ಸರ್ಕಾರದ ಕ್ರಮದ ಬಗ್ಗೆ ನಿರ್ದಿಷ್ಟವಾಗಿ ಕೇಳಿದ ಪ್ರಶ್ನೆಗೆ ಸಚಿವ ಅವರು, ‘ಇದೊಂದು ಸಮಕಾಲೀನ ವಿಷಯವಾಗಿರುವುದರಿಂದ ಈ ಸಂಬಂಧ ನಿರ್ಧಾರ ಕೈಗೊಳ್ಳುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಷಯ. ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ರಾಜ್ಯಗಳಿಗೆ ಸಮಾನವಾದ ಹಕ್ಕುಗಳಿವೆ’ ಎಂದೂ ಅವರು ನುಡಿದಿದ್ದಾರೆ.

ಉಬರ್‌ ವಿರುದ್ಧ ಕಾನೂನು ಹೊಣೆಗಾರಿಕೆ ಬಗ್ಗೆ ಚಿಂತನೆ: ಕ್ಯಾಬ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಾರಿಗೆ ಸೇವಾ ಕಂಪೆನಿ ಉಬರ್‌ನ ಕಾನೂನು ಹೊಣೆಗಾರಿಕೆ ಹಾಗೂ ಆರೋಪಿಗೆ ಹೇಗೆ  ನಕಲಿ ಪೊಲೀಸ್‌ ಪರಿಶೀಲನಾ ಪ್ರಮಾಣ ಪತ್ರವನ್ನು ದೊರೆಕಿತು ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ದೆಹಲಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರು ಮಂಗಳವಾರ ತಿಳಿಸಿದ್ದಾರೆ.

‍ಪ್ರಕರಣದ ಸ್ಥಿತಿಗತಿ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಂಸತ್‌ ಭವನದಲ್ಲಿ ವಿವರಣೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿಯಲ್ಲಿ ಉಬರ್‌ ಓಡಾಟ ನಿಷೇಧಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ. ಪೊಲೀಸ್‌ ಪರಿಶೀಲನಾ ಪ್ರಮಾಣ ಪತ್ರ ನಕಲಿ ಎನ್ನಲಾಗಿದೆ. ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತಪ್ಪಿತಸ್ಥರ  ತನಿಖೆ ನಡೆಯಲಿದೆ’ ಎಂದರು.

ಅಲ್ಲದೇ, ‘ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಉಬರ್‌ ಕಂಪೆನಿ ವಿರುದ್ಧ ಏನು ಕ್ರಮಗಳನ್ನು ಕೈಗೊಳ್ಳ ಬಹುದು ಎಂಬುದರ ಬಗ್ಗೆಯೂ ನಾವು ಚಿಂತನೆ ನಡೆಸಿದ್ದೇವೆ’ ಎಂದು ತಿಳಿಸಿದ್ದಾರೆ.

Write A Comment