ಭುವನೇಶ್ವರ್, ನ.30: ಮಹಿಳೆಗೆ ಸಂತಾಹರಣ ಶಸ್ತ್ರ ಚಿಕಿತ್ಸೆ ನಡೆಸುವ ವೇಳೆ ವೈದ್ಯರು ಸೈಕಲ್‌ಗೆ ಗಾಳಿ ತುಂಬುವ ಪಂಪ್ ಬಳಕೆ ಮಾಡಿರುವ ವಿಲಕ್ಷಣ ಘಟನೆ ಒರಿಸ್ಸಾದಲ್ಲಿ ನಡೆದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸರ್ಕಾರ ತನಿಖೆಗೆ ಆದೇಶ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಒರಿಸ್ಸಾದ ಆಂಗುಲ್ ಎಂಬಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಏರ್ಪಡಿಸಲಾಗಿತ್ತು. ಸರ್ಕಾರಿ ಒಡೆತನದ ಬರ್ನಪಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ಉಚಿತ ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರತಿವರ್ಷ ನಡೆಸಲಾಗುತ್ತಿತ್ತು. ಅದರಂತೆ ಶನಿವಾರವೂ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಆಗಮಿಸಿದ್ದರು. ಈ ವೇಳೆ ವೈದ್ಯರು ಸೈಕಲ್‌ಗೆ ಗಾಳಿ ಹೊಡೆಯುವ ಪಂಪ್‌ಗಳನ್ನು ಬಳಕೆ ಮಾಡಿರುವುದು ಮಾಧ್ಯಮಗಳಲ್ಲಿ ಬಿತ್ತರವಾಗಿದೆ.
ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತನಿಖೆಗೆ ಆದೇಶಿಸಿದ್ದಾರೆ. ಇತ್ತೀಚೆಗಷ್ಟೇ ಛತ್ತೀಸ್‌ಗಢದಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಉಂಟಾದ ಅವಘಡದಿಂದ 13 ಮಹಿಳೆಯರು ಸಾವನ್ನಪ್ಪಿದ್ದರು. ಶಸ್ತ್ರ ಚಿಕಿತ್ಸೆಗೆ ಸೈಕಲ್ ಪಂಪ್ ಬಳಸಿರುವುದನ್ನು ಸಮರ್ಥಿಸಿಕೊಂಡಿರುವ ವೈದ್ಯ ಮಹೇಶ್‌ಚಂದ್ರ ರೌತ್ ಅಸ್ಸೋಂನಲ್ಲಿ ಶಸ್ತ್ರ ಚಿಕಿತ್ಸೆ ವೇಳೆ ಸೈಕಲ್ ಪಂಪ್‌ಗಳನ್ನು ಬಳಕೆ ಮಾಡುವುದು ಸಾಮಾನ್ಯ ಎಂದಿದ್ದಾರೆ. ಆಸ್ಪತ್ರೆಗಳಲ್ಲಿ ಬೆಲೆಬಾಳುವ ವೈದ್ಯಕೀಯ ಉಪಕರಣಗಳು ಇಲ್ಲದ ಕಾರಣ ಪರ್ಯಾಯವಾಗಿ ಇಂತಹ ಉಪಕರಣಗಳನ್ನು ಬಳಕೆ ಮಾಡುತ್ತೇವೆ ಇದು ಪ್ರಮಾದಕರವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಷ್ಟಕ್ಕೂ ನಾನು ಇದುವರೆಗೂ 60 ಸಾವಿರ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಿದ್ದೇನೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ನನಗೆ ಅತಿ ಹೆಚ್ಚು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯನೆಂದು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ ಎಂದು ತಮ್ಮನ್ನು ತಾವೇ ಪ್ರಶಂಸಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆ ಕಾರ್ಯದರ್ಶಿ ಆರತಿ ಅವೂಜಾ, ಈಗಾಗಲೇ ನಾವು ಜಿಲ್ಲಾಧಿಕಾರಿ ಸಚಿನ್ ರಾಮಚಂದ್ರ ಜಾಧವ್ ಅವರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇವೆ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.