ರಾಷ್ಟ್ರೀಯ

ನಾನು ರೇಗಿದ್ದು, ಜಗಳವಾಡಿದ್ದು ಸರಿಯಲ್ಲ: ಸಂದರ್ಶನದಲ್ಲಿ ತಪ್ಪೊಪ್ಪಿಕೊಂಡ ರಾಜ್‌ದೀಪ್ ಸರ್‌ದೇಸಾಯಿ

Pinterest LinkedIn Tumblr

-ಅಜಿತ್ ಹುನುಮಕ್ಕನವರ್

ಮೋದಿಯವರೊಬ್ಬ ಅತ್ಯುತ್ತಮ ನಾಯಕ, ಒಳ್ಳೆಯ ಸಂಘಟಕ
sirdesai

ಬೆಂಗಳೂರು: ಹೌದು… ನಾನು ರೇಗಿಬಿಟ್ಟೆ…ನನ್ನ ತಪ್ಪು ಇತ್ತು ಅನ್ನೋದನ್ನ ಒಪ್ಪಿಕೊಳುತ್ತೇನೆ..ಯಾರೊಂದಿಗಾದರೂ ಆ ರೀತಿ ಜಗಳವಾಡೋದು ಸರಿಯಲ್ಲ.

ಹೀಗೊಂದು ತಪ್ಪೋಪ್ಪಿಗೆಯನ್ನು ಮುಂದಿಟ್ಟವರು ಟಿವಿ ಚಾನೆಲ್ ವೀಕ್ಷಕರ ವಲಯದಲ್ಲಿ ಜಗಳಗಂಟ ಎಂದೇ ಕರೆಸಿಕೊಳ್ಳುವ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ. ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಸಂದರ್ಭದಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಎದುರು ಸೇರಿದ್ದ ಭಾರತೀಯ ಮೂಲದ ಜನರ ಜತೆಗಿನ ತಮ್ಮ ಕಿತ್ತಾಟಕ್ಕೆ ಸಂಬಂಧಿಸಿದಂತೆ ರಾಜ್‌ದೀಪ್ ಮೊದಲ ಬಾರಿಗೆ ಹೀಗೆ ಅಂದಿನ ಮಟ್ಟಿಗೆ ತಮ್ಮ ವರ್ತನೆ ತಪ್ಪು ಎಂದು ಹೇಳಿಕೊಂಡಿದ್ದಾರೆ.

ತಮ್ಮ ಹೊತ್ತಗೆ ‘2014, ದಿ ಎಲೆಕ್ಷನ್ ದಟ್ ಚೇಂಜ್ಡ್ ಇಂಡಿಯಾ’ ಬಿಡುಗಡೆಗಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ನೀಡಿದ ಸಂದರ್ಶನ ಇಲ್ಲಿದೆ.

ನಿಮ್ಮ ಪುಸ್ತಕದ ಶೀರ್ಷಿಕೆ ಹೇಳುವಂತೆ 2014 ಲೋಕಸಭಾ ಚುನಾವಣೆ ನಿಜಕ್ಕೂ ನಿಮಗೆ ದೇಶವನ್ನು ಬದಲಿಸಿ ಬಿಟ್ಟಿತು ಅಂತ ಅನ್ನಿಸುತ್ತಾ?

ಈ ಸಲದ ಚುನಾವಣೆ, ಚುನಾವಣೆಯ ಪದ್ಧತಿಯನ್ನು ಬದಲಿಸಿದೆ. ಹಿಂದೆ ಯಾವತ್ತೂ ಈ ರೀತಿ ಸ್ಪರ್ಧೆ ಏರ್ಪಟ್ಟಿರಲಿಲ್ಲ. ಹಾಗೆಂದು ಈ ಚುನಾವಣೆಯಿಂದ ದೇಶವೇ ಬದಲಾಗಿ ಬಿಟ್ಟಿತು ಅಂತ ಹೇಳುವುದು ಸ್ವಲ್ಪ ಅತಿಯಾದೀತು. 2014ರ ಲೋಕಸಭಾ ಚುನಾವಣೆ ಒಂದು ರೀತಿಯಲ್ಲಿ ಐತಿಹಾಸಿಕ ಘಟನೆ. 1977ರ ನಂತರ ನಡೆದ ಅತ್ಯಂತ ದೊಡ್ಡ ಎಲೆಕ್ಷನ್ ಇದು. ಇದರ ಮುಖಪುಟದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಚಿತ್ರಗಳಿವೆ. ಇಷ್ಟು ತದ್ವಿರುದ್ಧ ವ್ಯಕ್ತಿಗಳು ಒಂದೇ ಚುನಾವಣೆಯಲ್ಲಿ ಹಿಂದೆಂದೂ ಇರಲಿಲ್ಲ. ಅದಕ್ಕೇ 2014ರ ಎಲೆಕ್ಷನ್ ನನ್ನ ಪಾಲಿಗೆ ಒಂದು ಗ್ರೇಟ್ ಸ್ಟೋರಿ.

ಒಬ್ಬ ಆರೆಸೆಸ್ಸ್ ಪ್ರಚಾರಕ ದೇಶದ ಪ್ರಧಾನಿಯಾದ ಕಥೆ ನಿಮ್ಮ ಪುಸ್ತಕದಲ್ಲಿದೆ. ಒಂದು ಘಟನೆ ವಿವರಿಸಿದ್ದೀರಿ. ನ್ಯೂಸ್ ಚಾನೆಲನ ಸ್ಟುಡಿಯೋ ಚರ್ಚೆಗೆ ಬಿಜೆಪಿಯ ಪ್ರತಿನಿಧಿ ಕೈಕೊಟ್ಟಾಗ ನೀವು ಮೋದಿಯವರಿಗೆ ಫೋನ್ ಮಾಡಿದಿರಿ. ಅವರು ತಕ್ಷಣ ಟ್ಯಾಕ್ಸಿ ಹತ್ತಿಕೊಂಡು ಬಂದುಬಿಟ್ಟರು. ಅದೇ ಮೋದಿ ಮುಂದೊಂದು ದಿನ ನಿಮ್ಮನ್ನು ತಮ್ಮ ಪ್ರಚಾರದ ಬಸ್‌ನ ಮೆಟ್ಟಿಲ ಮೇಲೆ ಕೂರಿಸಿ ಸಂದರ್ಶನ ಕೊಟ್ಟರು ಅಂತ ಬರೆದುಕೊಂಡಿದ್ದೀರಿ. ಈ ಬದಲಾವಣೆಯನ್ನು ನೀವು ಹೇಗೆ ನೋಡುತ್ತೀರಿ?

ಕಾಲ ಬದಲಾದಂತೆ ನಾಯಕರು ಬದಲಾಗುತ್ತಾರೆ. 1990ರಲ್ಲಿ ನಾನು ಮೊಟ್ಟಮೊದಲ ಬಾರಿಗೆ ಮೋದಿಯವರನ್ನು ನೋಡಿದಾಗ ಅವರು ಗುಜರಾತ್ ಬಿಜೆಪಿಯ ಕಾರ್ಯದರ್ಶಿ, ರಥ ಯಾತ್ರೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆಗ ಅವರಿಗೆ ತಮ್ಮನ್ನ ತಾವು ಬಿಂಬಿಸಿಕೊಳ್ಳಲು ಮಾಧ್ಯಮಗಳ ಅವಶ್ಯಕತೆ ಇತ್ತು. ಈಗ ಅವರು ಪ್ರಧಾನಿ. ಮಾಧ್ಯಮಗಳ ಅವಶ್ಯಕತೆ ಇಲ್ಲ. ಈಗ ಮಾಧ್ಯಮ ಅವರ ಹಿಂದೆ ಓಡುತ್ತಿದೆ. ನೀವೂ ಪ್ರಧಾನಿಯಾದರೆ-ನೀವೇ ಮಹಾರಾಜ.

ಮೂರನೇ ವ್ಯಕ್ತಿಯಾಗಿ ಹೊರಗಡೆ ನಿಂತು ನೋಡುವಾಗ ನಿಮಗೇನನ್ನಿಸುತ್ತೆ? ಈ ದೇಶದ ಜನಸಮಾನ್ಯ ಮೋದಿ ಪ್ರಭಾವಳಿಗೊಳಗಾದಂತೆ ಮಾಧ್ಯಮ ಕೂಡ ಪ್ರಭಾವಕ್ಕೊಳಗಾಗಿ ಬಿಟ್ಟಿತಾ?

ಈ ಮಾತು ಸ್ವಲ್ಪ ಮಟ್ಟಿಗೆ ಸತ್ಯ. ಮೋದಿ ಬೆಂಗಳೂರಿಗೆ ಬಂದು ಭಾಷಣ ಮಾಡಿದರೆ ನೀವು ನಿಮ್ಮ ‘ಸುವರ್ಣ ನ್ಯೂಸ್‌’ ಚಾನೆಲ್‌ನಲ್ಲೂ ಪೂರ್ತಿ ಭಾಷಣ ಪ್ರಸಾರ ಮಾಡುತ್ತೀರಿ. ಮೋದಿಯವರಲ್ಲಿ ಆ ತಾಕತ್ತಿದೆ ಎಂಬುದೂ ಸತ್ಯ. ಅವರೊಬ್ಬ ಅತ್ಯುತ್ತಮ ಭಾಷಣಕಾರ. ಆದರೆ ನನಗಿರುವ ಭಯ ಬೇರೆಯದೇ ರೀತಿಯದ್ದು. ನಾವು ಭಾಷಣದ ಬಗ್ಗೆ ಹೆಚ್ಚು ಗಮನ ಕೊಟ್ಟು ಕೆಲಸದ ವಿಷಯದಲ್ಲಿ ಮೈ ಮರೆಯಬಾರದು. ಅವರು ಮಾತನಾಡಿದಷ್ಟೇ ಉತ್ಸಾಹದಿಂದ ಕೆಲಸ ಮಾಡಲಿ ಅನ್ನೋದು ನಿರೀಕ್ಷೆ. ಆದರೆ, ಕೇವಲ ಮಾಧ್ಯಮಗಳಿಂದಾಗಿ ಮೋದಿ ಪರ ಅಲೆ ಎದ್ದಿದೆ ಎಂದು ಹೇಳುವುದು ಕೂಡ ತಪ್ಪಾಗುತ್ತದೆ. ಅವರಲ್ಲಿ ಒಂದು ಸಾಮರ್ಥ್ಯವಿದೆ. ಅದಕ್ಕಾಗಿಯೇ ಜನ ಅವರನ್ನು ಬಯಸುತ್ತಿದ್ದಾರೆ, ಮತ ನೀಡುತ್ತಿದ್ದಾರೆ. ಮೋದಿಯವರಿಗೆ ಒಂದು ಒಳ್ಳೆಯ ವರ್ಚಸ್ಸಿದೆ ಅನ್ನೋದು ನಿಜ.

ಆರು ತಿಂಗಳು ಮೋದಿಯವರನ್ನು ಅಧಿಕಾರದಲ್ಲಿ ನೋಡಿದ ನಂತರ, ಆ ಮನುಷ್ಯ ಕೊಟ್ಟ ಮಾತನ್ನು ನೆರವೇರಿಸುತ್ತಾರೆ ಅಂತ ನಿಮಗೆ ಅನ್ನಿಸುತ್ತಿದೆಯಾ?

ನಾನು ಸದ್ಯದ ಪರಿಸ್ಥಿತಿಯಲ್ಲಿ ಇಷ್ಟು ಮಾತ್ರ ಹೇಳಬಲ್ಲೆ. ಮೋದಿಯವರಲ್ಲಿ ಒಂದು ಶಕ್ತಿ ಇದೆ. ಏನನ್ನಾದರೂ ಸಾಧಿಸಬೇಕೆನ್ನುವ ಒಂದು ಶಕ್ತಿ ಇದೆ. ಆದರೆ ವ್ಯವಸ್ಥೆಯನ್ನು ಎಷ್ಟರಮಟ್ಟಿಗೆ ಬದಲಾಯಿಸಬಲ್ಲರು ಎಂಬುದು ಈ ತನಕ ಪ್ರಶ್ನೆಯೇ. ಯಾಕೆಂದರೆ, ಅವರ ಶಕ್ತಿ ಇರುವುದು ಅವರೊಳಗೆ ಮತ್ತು ಅವರ ಕಚೇರಿಯೊಳಗೆ. ಅವರು ಉಳಿದವರಿಗೆ ಅಷ್ಟೊಂದು ಅಧಿಕಾರ ನೀಡುವುದಿಲ್ಲ. ನಾನು ಇತ್ತೀಚೆಗೆ ಒಂದು ಫೋಟೋ ನೋಡಿದೆ. ಕರ್ನಾಟಕದ ಸಂಸದರನ್ನು ಅವರು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸುವಂತೆ ಕೂರಿಸಿದ್ದರು. ಈ ರೀತಿಯ ಅಧಿಕಾರ ಚಲಾವಣೆ ಒಮ್ಮೊಮ್ಮೆ ಒಳ್ಳೆಯ ಫಲಿತಾಂಶ ನೀಡಬಹುದು. ಕೆಲವೊಮ್ಮೆ ನೀಡುವುದಿಲ್ಲ. ಮೋದಿ ಎಲ್ಲಿ ಒಬ್ಬ ಸರ್ವಾಧಿಕಾರಿಯಾಗಿ ಬಿಡುತ್ತಾರೋ ಎಂಬ ಭಯ ಇದ್ದೇ ಇದೆ. ಆದರೆ ಅವರಲ್ಲಿ ಕೆಲಸದ ಕ್ಷಮತೆ ಇದೆ. ಹೊಸದೇನನ್ನೋ ಮಾಡುವ ಉತ್ಸಾಹ ಇದೆ.

ಮೋದಿಯವರ ವಿರುದ್ಧ ಇರುವ ಪತ್ರಕರ್ತರಲ್ಲಿ ನಿಮ್ಮನ್ನ ಗುರುತಿಸಲಾಗುತ್ತದೆ. ನಿಮಗೂ ಅವರಿಗೂ ಆಗಿಬರಲೇ ಇಲ್ಲ. ಹಾಗಾಗಿದ್ದು ಏಕೆ?

ಅದು ತಪ್ಪು ಕಲ್ಪನೆ. 2002ಕ್ಕಿಂತ ಮುಂಚೆ ನನ್ನ ಮತ್ತು ಮೋದಿಯವರ ಸಂಬಂಧ ತುಂಬಾ ಚೆನ್ನಾಗಿತ್ತು. ಅವರು ಅತಿ ಹೆಚ್ಚಿನ ಸಂದರ್ಶನಗಳನ್ನು ಕೊಟ್ಟಿದ್ದು ನನಗೆ. ನನಗೆ ಗುಜರಾತಿ ಗೊತ್ತು. ಈಗಲೂ ಫೋನ್‌ನಲ್ಲಿ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. 2002ರ ಗುಜರಾತ್ ದಂಗೆಗಳ ನಂತರ ಮಾಧ್ಯಮ ತಮ್ಮ ವಿರುದ್ಧ ಇದೆಯೆನ್ನುವ ಭಾವನೆ ಅವರಲ್ಲಿ ಬಲವಾಗಿ ಬಿಟ್ಟಿತು. ಆ ಸಂದರ್ಭದಲ್ಲೇ ನಾನು ಖುದ್ದಾಗಿ ವರದಿ ಮಾಡಿದ್ದರಿಂದ ಆ ಪಟ್ಟಿಯಲ್ಲಿ ನನ್ನ ಹೆಸರೂ ಸೇರಿಕೊಂಡಿತು. ನಾವು ಮೋದಿ ವಿರುದ್ಧ ಇರಲಿಲ್ಲ. ಸತ್ಯಾಂಶ ತೋರಿಸ್ತಿದ್ವಿ ಅಷ್ಟೇ. ಮುಖ್ಯಮಂತ್ರಿಯಾಗಿದ್ದವರು ಆತ. ಆ ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಮೋದಿಯವರ ಮೇಲೆ ಪ್ರಶ್ನೆಗಳೆದ್ದವು. ಆದರೆ ಅದು ಅವರಿಗೆ ಇಷ್ಟ ಆಗೋದಿಲ್ಲ. ಇದು ಮಾಧ್ಯಮ ವೃತ್ತಿಯಲ್ಲಿ ಸಮಾನ್ಯ. ಕೆಲ ರಾಜಕಾರಣಿಗಳು ಸ್ನೇಹಿತರಾಗುತ್ತಾರೆ. ಇನ್ನು ಕೆಲವರು ಶತ್ರುಗಳಾಗುತ್ತಾರೆ. ನಾನು ಮೋದಿಯವರ ಸ್ನೇಹಿತನೂ ಅಲ್ಲ, ಶತ್ರುವೂ ಅಲ್ಲ. ನಾನೊಬ್ಬ ಪತ್ರಕರ್ತ ಮಾತ್ರ.

ಪ್ರಾಮಾಣಿಕವಾಗಿ ಹೇಳಿ, 2002ರ ಗುಜರಾತ್ ದಂಗೆಯ ವಿಷಯದಲ್ಲಿ ಮೋದಿ ಕ್ಷಮೆಕೇಳುವುದರಿಂದ ತುಂಬ ಬದಲಾವಣೆಗಳು ಆಗಿಬಿಡುತ್ತವಾ?

ಕ್ಷಮೆ ಕೇಳಬೇಕೆನ್ನುವುದು ಯಾವತ್ತಿಗೂ ನಮ್ಮ ಬೇಡಿಕೆ ಅಲ್ಲ. ಆ ಸಂದರ್ಭದಲ್ಲಿ ನಿಜಕ್ಕೂ ನಡೆದದ್ದೇನು? ಅದರಲ್ಲಿ ಅವರ ಪಾತ್ರ ಏನು? ಸಾವಿರಾರು ಜನ ಸತ್ತಿದ್ದೇಕೆ? ಅನ್ನೋದನ್ನ ಮೋದಿ ಸಮಾಜಕ್ಕೆ ಹೇಳಲಿ ಅನ್ನೋದಷ್ಟೇ ಕೋರಿಕೆ. ಆ ಸಂದರ್ಭದಲ್ಲಿ ಗುಜರಾತ್ ಉಸ್ತುವಾರಿ ಮೋದಿ ಕೈಯಲ್ಲಿತ್ತಾ? ಪ್ರವೀಣ್ ತೋಗಾಡಿಯಾ ಕೈಯಲ್ಲಿತ್ತಾ? ಯಾರಿಂದಾಗಿ ಇದೆಲ್ಲಾ ಆಯಿತು ಅನ್ನೋದು ಗೊತ್ತಾಗಬೇಕು. ನೊಂದವರಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಮತ್ತು ಆ ಕೆಲಸದಲ್ಲಿ ಮೋದಿ ಕೈಜೋಡಿಸಬೇಕು.

ಇನ್ನಾವ ನರಮೇಧದಲ್ಲೂ, ಇನ್ನಾವ ನಾಯಕನನ್ನೂ ಮೋದಿಯವರಂತೆ ನಿಲ್ಲಿಸಿಕೊಂಡು ಪ್ರಶ್ನೆ ಕೇಳಲಾಗಿಲ್ಲ ಅನ್ನೋದು ಹಲವರ ಆರೋಪ….

ಇದು ತಕ್ಕ ಮಟ್ಟಿಗೆ ಸತ್ಯ.. ಯಾಕೆಂದರೆ ಇದು ಟಿವಿಯ ಯುಗ.. ಮಾಧ್ಯಮಗಳು ಹೆಚ್ಚಾಗಿವೆ. ಆದ್ದರಿಂದ ಪ್ರಶ್ನೆಗಳು ಹೆಚ್ಚಾಗುತ್ತವೆ. ಇಡೀ ಗುಜರಾತ್ ನರಮೇಧ ಟಿವಿ ಪರದೆಯ ಮೇಲೆ ತೆರೆದುಕೊಂಡಿತ್ತು. 1984ರಲ್ಲಿ ರಾಜೀವ್ ಗಾಂಧಿ ಅವರನ್ನೂ ಈ ಪ್ರಶ್ನೆ ಕೇಳಲಾಗಿತ್ತು. 1992ರಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವನ್ನೂ ಇಂಥ ಪ್ರಶ್ನೆ ಕೇಳಲಾಗಿತ್ತು. ಆದರೆ ಆಗ ಟಿವಿ ಇಷ್ಟೋಂದು ಶಕ್ತಿಯುತ ಮಾಧ್ಯಮವಾಗಿರಲಿಲ್ಲ. ಈಗ ಚಾನಲ್‌ಗಳ ಸ್ಪರ್ಧೆಯಿಂದಾಗಿ ಮೋದಿ ಹೆಚ್ಚೆಚ್ಚು ಪ್ರಶ್ನೆಗಳನ್ನು ಎದುರಿಸುವಂತಾಯಿತು.

ಮೋದಿಯವರು ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಾಗ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಎದುರಿಗೆ ನಡೆದ ಘಟನೆ. ಇಂಟರ್‌ನೆಟ್‌ನಲ್ಲಿ ಆ ವಿಡಿಯೋ ನೋಡಿದಾಗ ನನಗೂ ಅನ್ನಿಸಿತು, ನೀವು ಏಕಾಏಕಿ ರೇಗಿಬಿಟ್ಟಿರಿ ಅಂತ. ನಿಜಕ್ಕೂ ಆಗಿದ್ದೇನು?

ಹೌದು, ನಾನು ರೇಗಿಬಿಟ್ಟೆ. ನನ್ನ ತಪ್ಪು ಇತ್ತು ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಯಾರೊಂದಿಗಾದರೂ ಆ ರೀತಿ ಜಗಳವಾಡೋದು ಸರಿಯಲ್ಲ. ಆದರೆ ನಾನು ಅಲ್ಲಿದ್ದ ಜನರನ್ನೂ ಕೇಳುತ್ತೇನೆ. ನಾನು ಕೆಲಸ ಮಾಡುತ್ತಿದ್ದಾಗ ನನ್ನ ವಿರುದ್ಧ ಘೋಷಣೆಗಳನ್ನು ಕೂಗುವುದರಿಂದ ಏನು ಲಾಭ? ಅವರ್ಯಾರನ್ನೂ ನಾನು ಅಲ್ಲಿಗೆ ಕರೆದಿರಲಿಲ್ಲ. ಅವರು ತಾವಾಗಿಯೇ ಬಂದರು. ನಂತರ ಘೋಷಣೆ-ಧಿಕ್ಕಾರ ಕೂಗುತ್ತಾರೆ. 2002ರಲ್ಲಿಯೇ ಸಿಕ್ಕು ಹಾಕಿಕೊಳ್ಳುವುದು ನನಗೂ ಇಷ್ಟವಿಲ್ಲ. ನಾವು 2014ರಲ್ಲಿದ್ದೇವೆ. ನನ್ನ ಪುಸ್ತಕ ಕೂಡ ವರ್ತಮಾನದ ಕುರಿತಾಗಿರುವುದು. ಮ್ಯಾಡಿಸನ್ ಸ್ಕ್ವೇರ್ ಎದುರಿಗೆ ನಾನು ತಪ್ಪಾಗಿ ನಡೆದುಕೊಂಡೆ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಹಾಗೆಂದು ಅಲ್ಲಿ ಸೇರಿದ್ದ ಜನ ಸರಿಯಾಗಿ ನಡೆದುಕೊಂಡರು ಅಂತ ಅರ್ಥ ಅಲ್ಲ.

ನೀವು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಎದುರಿಗೆ ಜನರನ್ನ ಒಂದು ಪ್ರಶ್ನೆ ಕೇಳಿದಿರಿ. ಮಾಧ್ಯಮ ಮೋದಿಯವರನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರ್ವಕ ವರದಿ ಮಾಡಿತು ಅಂತ ನಿಮಗೆ ಅನ್ನಿಸುತ್ತಾ ಅಂತ. ಅದೇ ಪ್ರಶ್ನೆಯನ್ನು ನಾನು ಈಗ ನಿಮಗೆ ಕೇಳುತ್ತೇನೆ.

2002ರಿಂದ 2007ರ ಮಧ್ಯದಲ್ಲಿ ಖಂಡಿತವಾಗಿಯೂ ಮಾಧ್ಯಮ ಮೋದಿಯವರ ವಿರುದ್ಧ ಗುಜರಾತ್ ದಂಗೆಗೆ ಸಂಬಂಧಪಟ್ಟಂತೆ ಅನೇಕ ಪ್ರಶ್ನೆಗಳನ್ನು ಕೇಳಿತ್ತು. ಆದರೆ ಅನಂತರದ ಪರಿಸ್ಥಿತಿ ಉಲ್ಟಾ ಆಯಿತು. ಈಗ ಅದೇ ಮಾಧ್ಯಮ ಮೋದಿಯವರನ್ನ ವಿಷ್ಟುವಿನ ಅವತಾರ ಅಂದುಕೊಂಡು ನಡೆಯುತ್ತಿದೆ.

ಹಾಗಾದರೆ ಮೋದಿ ಬದಲಾದರಾ ಅಥವಾ ಮಾಧ್ಯಮ ಬದಲಾಯಿತಾ?

ಇದೊಂದು ಒಳ್ಳೆಯ ಪ್ರಶ್ನೆ. ನನಗೆ ಅನ್ನಿಸೋದು, ಪರಿಸ್ಥಿತಿಗಳು ಬದಲಾದವು ಅಂತ. 2002ರಲ್ಲಿ ಗೌರವ ಯಾತ್ರೆ ಮಾಡುತ್ತಿದ್ದ ಸಂದರ್ಭದಲ್ಲಿನ ಮೋದಿ ಭಾಷಣಗಳಿಗೂ ಈಗ ಮ್ಯಾಡಿಸನ್ ಸ್ಕ್ವೇರ್‌ನಲ್ಲಿನ ಭಾಷಣಕ್ಕೂ ಅಜಗಜಾಂತರ ಇದೆ. ಆಗ ಅವರು ಹಿಂದೂ ಹೃದಯ ಸಾಮ್ರಾಟ ಅನ್ನಿಸಿಕೊಂಡಿದ್ದರು. ಈಗ ವಿಕಾಸ ಪುರುಷ ಅಂತ ಕರೆಸಿಕೊಳ್ಳುತ್ತಿದ್ದಾರೆ. ಆ ಲೆಕ್ಕಾಚಾರದಲ್ಲಿ ಮೋದಿ ಬದಲಾದರು. ಪರಿಸ್ಥಿತಿಗಳು ಬದಲಾದವು. ಜಗತ್ತು ಬದಲಾಯಿತು. ಅದಕ್ಕೆ ತಕ್ಕಂತೆ ಮಾಧ್ಯಮ ಕೂಡ ಬದಲಾಯಿತು. ಆಗ ಗುಜರಾತ್ ನರಮೇಧಕ್ಕೆ ಉತ್ತರ ಬೇಕು ಅಂತ ನಿರೀಕ್ಷಿಸುತ್ತಿದ್ದ ಮಾಧ್ಯಮಗಳು ಈಗ ಮೋದಿಯವರನ್ನು ಹೊಸ ಬೆಳಕಿನಲ್ಲಿ ನೋಡುತ್ತಿದೆ.

ನಿಮ್ಮ ಪುಸ್ತಕದ ಬಗ್ಗೆ ಹೇಳಿ. ಇಡೀ ಪುಸ್ತಕ ಓದಿ ಮುಗಿಸಿದ ನಂತರ ಯಾವ ಮೋದಿ ನಮಗೆ ಪರಿಚಯವಾಗ್ತಾರೆ? ನಾಯಕ ನರೇಂದ್ರ ಮೋದಿ, ಟಾಸ್ಕ್ ಮಾಸ್ಟರ್ ನರೇಂದ್ರ ಮೋದಿ ಅಥವಾ ಒಬ್ಬ ಇವೆಂಟ್ ಮ್ಯಾನೇಜರ್ ನರೇಂದ್ರ ಮೋದಿ?

ನರೇಂದ್ರ ಮೋದಿ ಅವರದ್ದು ಸಂಕೀರ್ಣ ವ್ಯಕ್ತಿತ್ವ. ಅವರೊಬ್ಬ ಒಳ್ಳೆಯ ಕಾರ್ಯಕ್ರಮ ಆಯೋಜಕ. ಅತ್ಯುತ್ತಮ ನಾಯಕ. ಚುನಾವಣಾ ಪ್ರಚಾರದ ವಿಷಯದಲ್ಲಿ ಅವರಷ್ಟು ಯಶಸ್ವಿಯಾದ ಇನ್ನೊಬ್ಬ ಲೀಡರ್ ಇಲ್ಲ. ಅವೆಲ್ಲವುದರ ನಡುವೆ ಒಮ್ಮೊಮ್ಮೆ ಸರ್ವಾಧಿಕಾರಿಯಾಗಿ ಬಿಡುತ್ತಾರೆ. ಅವರು ಹೀಗೆ ಅಂತ ಹೇಳೋದು ಕಷ್ಟ. ಅದಕ್ಕೇ ನಾನು ಹೇಳೋದು, ಕೇವಲ ಪರ, ವಿರುದ್ಧ ಮಾತ್ರ ಇರಬಾರದು. ಮೋದಿಯವರು ವಿರುದ್ಧ ಪಾಳೆಯದ ಜನ ಅವರನ್ನ ಕೇವಲ ಸರ್ವಾಧಿಕಾರಿ ಅಂದು ಕೊಳ್ಳುತ್ತಾರೆ. ಪರವಾಗಿರುವವರು ಅವರು ಒಬ್ಬ ಅವತಾರ ಅಂದುಕೊಳ್ಳುತ್ತಾರೆ. ಸತ್ಯ ಇವೆರಡರ ಮಧ್ಯದಲ್ಲಿದೆ. ಈ ಪುಸ್ತಕದಲ್ಲಿ ಅವೆರಡೂ ಇವೆ. ಮೋದಿಯವರ ಸಂಕೀರ್ಣ ವ್ಯಕ್ತಿತ್ವವನ್ನು ಜನರಿಗೆ ತೋರಿಸುವ ಪ್ರಯತ್ನ ಇದು. ಇವರು ಒಂದು ಅದ್ಭುತ ಚುನಾವಣಾ ಪ್ರಚಾರ ನಡೆಸಿದರು. ಅದನ್ನ ಮೆಚ್ಚಿಕೊಳ್ಳಲೇ ಬೇಕು. ಅವರ ವ್ಯಕ್ತಿತ್ವದ ಇನ್ನೊಂದು ಮುಖ ಕೂಡ ಜನರೆದುರಿಗೆ ಬರಬೇಕು.

ಜನರ ಪ್ರತಿಕ್ರಿಯೆ ಹೇಗಿದೆ.?

ತಮಾಷೆ ಅಂದರೆ ಪುಸ್ತಕ ಓದಿದ ನಂತರ ಕಾಂಗ್ರೆಸ್‌ನವರೇ ಹೆಚ್ಚು ಬೇಜಾರು ಮಾಡಿಕೊಂಡಿದ್ದಾರೆ. ಅವರ ಚುನಾವಣಾ ಪ್ರಚಾರದ ಮೇಲೆ ತುಂಬಾ ಪ್ರಶ್ನೆಗಳನ್ನೆತ್ತಿದ್ದೇನೆ. ಇದರಲ್ಲಿ ಅದಕ್ಕಿಂತ ಹೆಚ್ಚು ಪ್ರಶ್ನೆಗಳು ರಾಹುಲ್ ಗಾಂಧಿಗೆ ಇವೆ. ಅದಕ್ಕೇ ಕಾಂಗ್ರೆಸ್ ನವರು ಬೇಜಾರು ಮಾಡಿಕೊಂಡಿದ್ದಾರೆ. ಮೋದಿ ಬೆಂಬಲಿಗರು ಖುಷಿಯಾಗಿದ್ದಾರೆ. ಈ ಪುಸ್ತಕ 2014 ಬಗ್ಗೆ 2002ರ ಬಗ್ಗೆ ಅಲ್ಲ.

Write A Comment