ರಾಷ್ಟ್ರೀಯ

2ಜಿ ತರಂಗಾಂತರ ಪ್ರಕರಣದ ತನಿಖೆಯಿಂದ ದೂರವಿರಲು ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾರಿಗೆ ಸುಪ್ರೀಂ ಸೂಚನೆ

Pinterest LinkedIn Tumblr

Ranjit_Sinha

ನವದೆಹಲಿ (ಪಿಟಿಐ/ಐಎಎನ್ಎಸ್): 2ಜಿ ತರಂಗಾಂತರ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ‘ಎಲ್ಲವೂ ಸರಿಯಿಲ್ಲ’ ಎಂಬುದನ್ನು ಗುರುವಾರ ಗಮನಿಸಿದ ಸುಪ್ರೀಂ ಕೋರ್ಟ್‌, ತನಿಖೆಯಿಂದ ದೂರ ಉಳಿಯುವಂತೆ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಅವರಿಗೆ ಸೂಚಿಸಿದೆ.

ಅಲ್ಲದೇ, ಸಿನ್ಹಾ ಅವರ ವಿರುದ್ಧ ಸರ್ಕಾರೇತರ ಸಂಸ್ಥೆಯೊಂದು ಮಾಡಿರುವ ಆರೋಪದಲ್ಲಿ ‘ಸ್ವಲ್ಪ ಹುರುಳಿದೆ’ ಎಂಬುದನ್ನು ನ್ಯಾಯಾಲಯ ಗಮನಿಸಿತು.

2 ಜಿ  ತರಂಗಾಂತರ ಪ್ರಕರಣದ ಕೆಲ ಆರೋಪಿಗಳನ್ನು ರಕ್ಷಿಸಲು ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಅವರು ಪ್ರಯತ್ನಿಸಿರಬಹುದು ಎಂದು ಆರೋಪಿಸಿ ಸರ್ಕಾರೇತರ ಸಂಸ್ಥೆ ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟ್ರೆಸ್ಟ್‌ ಲಿಟಿಗೇಷನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಅವರಿದ್ದ ಪೀಠ ನಡೆಸಿತು.

ಈ ವೇಳೆ, ‘ಪ್ರಕರಣದಲ್ಲಿ ಎಲ್ಲವೂ ಸರಿಯಿದೆ ಎಂದು ನಮಗೆನಿಸುತ್ತಿಲ್ಲ. ಸರ್ಕಾರೇತರ ಸಂಸ್ಥೆ ಮಾಡಿರುವ ಆರೋಪಗಳಲ್ಲಿ ಹುರುಳಿದೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ’ ಎಂದು ಅಭಿಪ್ರಾಯ ಪಟ್ಟಿತು.

ಅಲ್ಲದೇ, 2ಜಿ  ಪ್ರಕರಣದ ತನಿಖೆಯಿಂದ ದೂರ ಉಳಿಯುವಂತೆ ಸಿನ್ಹಾ ಅವರಿಗೆ ಸೂಚಿಸಿರುವ ನ್ಯಾಯಪೀಠ, ತನಿಖೆ ತಂಡದಲ್ಲಿರುವ ಹಿರಿಯ ಅಧಿಕಾರಿಯನ್ನು ನೇತೃತ್ವ ವಹಿಸಿಕೊಳ್ಳುವಂತೆ ಹೇಳಿತು.

ಡಿಐಜಿ ಶ್ರೇಣಿಯ ಸಿಬಿಐ ಅಧಿಕಾರಿ ಸಂತೋಷ್ ರಸ್ತೋಗಿ ಅವರು ಕಚೇರಿಯಲ್ಲಿರುವ ರಹಸ್ಯ ಬೇಹುಗಾರರಾಗಿದ್ದು, ಸರ್ಕಾರೇತರ ಸಂಸ್ಥೆಗೆ ಅವರು ನೀಡಿರುವ ಕೆಲವು ಟಿಪ್ಪಣಿ ಹಾಗೂ ದಾಖಲೆಗಳು ಆಧಾರ ರಹಿತವಾಗಿವೆ. ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಮುಖ್ಯಸ್ಥ ಸಿನ್ಹಾ ಅವರು ಬುಧವಾರ ನ್ಯಾಯಾಲಯಕ್ಕೆ ತಿಳಿಸಿದ್ದರು.

ತನಿಖಾ ತಂಡದ ನಿಲುವಿಗೆ ಸಂಪೂರ್ಣ ಅಸಂಗತ  ಎನಿಸುವಂತೆ 2ಜಿ ಪ್ರಕರಣದಲ್ಲಿ ಸಿನ್ಹಾ ಅವರು ಹಸ್ತಕ್ಷೇಪ ಮಾಡಿದ್ದರು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆನಂದ್ ಗ್ರೋವರ್ ಅವರು ಗುರುವಾರ ತಿಳಿಸಿದರು.

‘ಸಿನ್ಹಾ ಅವರ ನಿಲುವನ್ನು ಒಪ್ಪಿದಲ್ಲಿ 2ಜಿ ಪ್ರಕರಣದ ತನಿಖೆ ಹಳಿ ತಪ್ಪಲಿದೆ’ ಎಂದೂ ಅವರು ವಿವರಿಸಿದರು.

ಇದೇ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಸಿಬಿಐ ಅಧಿಕಾರಿಗಳು ನ್ಯಾಯಾಲಯದ ಕೊಠಡಿಯಲ್ಲಿದ್ದ ಕಾರಣ ಅವರ ವಿರುದ್ಧವೂ ಸುಪ್ರೀಂ ಚಾಟಿ ಬೀಸಿತು. ಸುಮಾರು ಎಂಟು ಅಧಿಕಾರಿಗಳು ವಿಚಾರಣಾ ಕೊಠಡಿಯಲ್ಲಿದ್ದರು.

Write A Comment