ರಾಷ್ಟ್ರೀಯ

ಬಂಧಿತ ಬಾಬಾ ರಾಮ್‌ಪಾಲ್‌ಗೆ ನಕ್ಸಲೀಯರ ಜತೆ ಸಂಪರ್ಕ ಬೆಳಕಿಗೆ

Pinterest LinkedIn Tumblr

Ramopallll

ನವದೆಹಲಿ, ನ.20: ಎರಡು ವಾರಗಳ ಹೈ ಡ್ರಾಮಾದ ಬಳಿಕ ಕಳೆದ ರಾತ್ರಿ ಪೊಲೀಸರು ಬಂಧಿಸಲ್ಪಟ್ಟಿದ್ದ ಸ್ವಯಂಘೊಷಿತ ದೇವಮಾನವ ಬಾಬಾ ರಾಮ್‌ಪಾಲ್‌ಗೆ ನಕ್ಸಲೀಯರ ಸಂಪರ್ಕವಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಕೊಲೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಬಾಬಾ ರಾಮ್‌ಪಾಲ್‌ಗೆ ಇದೀಗ ನಕ್ಸಲೀಯರ ಜತೆ ನಂಟು ಹೊಂದಿರುವುದು ಇನ್ನಷ್ಟು ಕಾನೂನಿನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕಳೆದ ಆಗಸ್ಟ್‌ನಲ್ಲಿ ಪೊಲೀಸರು ಬಂಧಿಸಿದ್ದ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಮಹಾವೀರ್ ಸಕ್ಲಾನಿಗೆ, ರಾಮ್‌ಪಾಲ್ ತನ್ನ ಆಶ್ರಮದಲ್ಲಿ ಉಳಿಯಲು ಆಶ್ರಯ ಕೊಟ್ಟಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಮೂಲತಃ ಬಿಹಾರದ ಪೂರ್ವಚಂಪಾರಣ್ಯ ಜಿಲ್ಲೆ ನಿವಾಸಿಯಾದ ಮಹಾವೀರ್ ಸಕ್ಲಾನಿ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ನಕ್ಸಲೀಯ ನಾಯಕ. ಈತನು ಈಶಾನ್ಯ ರಾಜ್ಯಗಳಲ್ಲಿ ನಕ್ಸಲೀಯ ಸಂಘಟನೆಗಳನ್ನು ಬಲಪಡಿಸುವ ಕಮಾಂಡರ್ ಆಗಿ ನೇಮಕಗೊಂಡಿದ್ದ. ನೇಪಾಳ ಮತ್ತು ಬಿಹಾರ ಗಡಿಯಲ್ಲಿ ತಲೆಮರೆಸಿಕೊಂಡಿದ್ದ ಸಕ್ಲಾನಿ ಅನೇಕ ಪೊಲೀಸರು ಮತ್ತು ಸಾರ್ವಜನಿಕರನ್ನು ಹತ್ಯೆಗೈದ ಆರೋಪಕ್ಕೆ ಗುರಿಯಾಗಿದ್ದ.

ಕೆಲ ವರ್ಷಗಳಿಂದ ನೇಪಾಳದಲ್ಲಿ ತಲೆಮರೆಸಿಕೊಂಡ ಬಳಿಕ ಈತ ಬಿಹಾರಕ್ಕೆ ಆಗಮಿಸಿದ್ದ. ಪೊಲೀಸರು ತನ್ನನ್ನು ಬಂಧಿಸಬಹುದೆಂಬ ಭೀತಿಯಿಂದಾಗಿ ರಾಮ್‌ಪಾಲ್ ನಡೆಸುತ್ತಿದ್ದ ಬರ್ವಾಲಾ ಆಶ್ರಮದಲ್ಲಿ ನೆಲೆಯೂರಿದ್ದ. ಪೊಲೀಸರಿಗೆ ಸುಳಿವು ನೀಡಿದ್ದೇ ಈತ: ಈತನ ಚಲನ-ವಲನಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಕಳೆದ ಆಗಸ್ಟ್‌ನಲ್ಲಿ ಸಕ್ಲಾನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪಂಜಾಬ್-ಹರಿಯಾಣ ಹೈಕೋರ್ಟ್ ರಾಮ್‌ಪಾಲ್‌ನನ್ನು ಶುಕ್ರವಾರದೊಳಗೆ ಬಂಧಿಸಬೇಕೆಂದು ತಾಕೀತು ಮಾಡಿತ್ತು. ಆಗ ಪೊಲೀಸರಿಗೆ ಆಶ್ರಮವನ್ನು ಒಳಹೊಕ್ಕುವುದು ಹೇಗೆ ಎಂಬ ಚಿಂತೆ ಎದುರಾಗಿತ್ತು. ತಕ್ಷಣವೇ ಹೊಳೆದದ್ದು ಸಕ್ಲಾನಿ ಹೆಸರು. ಕೂಡಲೇ ಆತನಿಗೆ ಪೊಲೀಸ್ ಟ್ರೀಟ್‌ಮೆಂಟ್ ನೀಡಿದ ಕೂಡಲೇ ಇಡೀ ಆಶ್ರಮದ ಚಿತ್ರಣವನ್ನು ಪೊಲೀಸರಿಗೆ ನೀಡಿದ. ಇದರಿಂದ ಕಾರ್ಯಪ್ರವೃತ್ತರಾದ ಪೊಲೀಸರು ಆಶ್ರಮದೊಳಗೆ ನುಗ್ಗಲು ಅನುಕೂಲವಾಯಿತು. ಅಲ್ಲದೆ, ದೇವಮಾನವನ್ನು ಬಂಧಿಸುವುದಕ್ಕೂ ಸಹಾಯವಾಯಿತು.

Write A Comment