ರಾಷ್ಟ್ರೀಯ

ವಿದೇಶಿ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳಿ ಬಂದ ಮೋದಿ

Pinterest LinkedIn Tumblr

modi-vist

ನವದೆಹಲಿ, ನ.20: ಮೂರು ರಾಷ್ಟ್ರಗಳ ಹತ್ತು ದಿನದ ಯಶಸ್ವಿ ವಿದೇಶಿ ಪ್ರವಾಸ ಮುಗಿಸಿಕೊಂಡು ಪ್ರಧಾನಮಂತ್ರಿ ನರೇಂದ್ರಮೋದಿಯವರು ಇಂದು ಸ್ವದೇಶಕ್ಕೆ ಆಗಮಿಸಿದರು. ಇಂದು ಬೆಳಿಗ್ಗೆ ವಿಶೇಷ ವಿಮಾನದ ಮೂಲಕ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿಯವರನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಆತ್ಮೀಯವಾಗಿ ಬರಮಾಡಿಕೊಂಡರು.

ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿಯನ್ನು ಸುಷ್ಮಾ ಅವರೊಂದಿಗೆ ಸಂಪುಟದ ಕೆಲ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಮಾಯನ್ಮಾರ್ ರಾಜಧಾನಿ ಯಾಂಗಾನ್‌ನಲ್ಲಿ ಇಂಧನ ಭರ್ತಿ ಮಾಡಿಕೊಳ್ಳುವ ಸಂಬಂಧ ಕೆಲಕಾಲ ತಂಗಲಾಗಿತ್ತು. ಸುಮಾರು 14 ಗಂಟೆಗಳ ಕಾಲ ಸುದೀರ್ಘ ವಿಮಾನ ಪ್ರಯಾಣ ಮಾಡಿ ಮೋದಿ ಬೆಳಿಗ್ಗೆ 7.15ಕ್ಕೆ ನವದೆಹಲಿಗೆ ಆಗಮಿಸಿದರು.

ಹತ್ತು ದಿನ ವಿದೇಶಿ ಪ್ರವಾಸ ಕೈಗೊಂಡಿದ್ದ ಮೋದಿ, ಈ ಬಾರಿ ಹೊಸ ಭಾಷ್ಯ ಬರೆದಿದ್ದಾರೆ. ಆಶಿಯಾನ್-ಭಾರತ ಶೃಂಗಸಭೆ, ಆಸ್ಟ್ರೇಲಿಯಾದಲ್ಲಿ ನಡೆದ ಜಿ-೨೦ ಸಮ್ಮೇಳನ ಹಾಗೂ ಪಿಜಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಳ್ಳುವುದರ ಮೂಲಕ ಇತಿಹಾಸ ನಿರ್ಮಾಣ ಮಾಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ನಂತರ ಪೆಸಿಫಿಕ್ ರಾಷ್ಟ್ರಗಳಿಗೆ ಭೇಟಿ ನೀಡಿದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು. ಆಸ್ಟ್ರೇಲಿಯಾ ಹಾಗೂ ಪಿಜಿ ಸಂಸತ್ತಿನಲ್ಲಿ ಭಾಷಣ ಮಾಡಿದ ಮೋದಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದರು. ಅಲ್ಲದೆ, ಆಶಿಯಾನ್ ಶೃಂಗಸಭೆ ಹಾಗೂ ಜಿ-೨೦ ಸಮ್ಮೇಳನದಲ್ಲಿ ವಿಶ್ವ ನಾಯಕರ ಜತೆ ಕೆಲವು ಮಹತ್ವದ ಮಾತುಕತೆ ನಡೆಸಿದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ತರಲು ನೆರವು ಕೋರುವುದರ ಮೂಲಕ ಒಂದು ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಮೋದಿಯವರ ಈ ಮೂರೂ ರಾಷ್ಟ್ರಗಳ ಪ್ರವಾಸ ಬಹುತೇಕ ಯಶಸ್ವಿಯಾಗಿದೆ ಎಂದು ರಾಜತಾಂತ್ರಿಕ ಅಧಿಕಾರಿಗಳು ಬಣ್ಣಿಸಿದ್ದಾರೆ.

Write A Comment