ರಾಷ್ಟ್ರೀಯ

ಶಸ್ತ್ರಚಿಕಿತ್ಸೆ ವೇಳೆ 8 ಸಾವು: ಸಿಎಂ ರಾಜಿನಾಮೆಗೆ ಕಾಂಗ್ರೆಸ್ ಆಗ್ರಹ: ನಾಲ್ವರು ವೈದ್ಯರ ಅಮಾನತು

Pinterest LinkedIn Tumblr

Syringe

ರಾಯ್‌ಪುರ: ಬಿಲಾಸ್‌ಪುರದಲ್ಲಿ ಚತ್ತೀಸ್‌ಗಢ ಸರ್ಕಾರ ಆಯೋಜಿಸಿದ್ದ ಕುಟುಂಬ ನಿಯಂತ್ರಣ ಶಸ್ತ್ರ ಚಿಕಿತ್ಸೆ ವೇಳೆ 8 ಮಹಿಳೆಯರು ಮೃತಪಟ್ಟಿದ್ದು, ಘಟನೆಯ ನೈತಿಕ ಹೊಣೆ ಹೊತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹಾಗೂ ಆರೋಗ್ಯ ಸಚಿವ ಅಮರ್ ಅಗರ್‌ವಾಲ್ ಅವರು ರಾಜಿನಾಮೆ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.

‘ರಾಜ್ಯ ಸರ್ಕಾರ ಹಿಂದಿನ ತಪ್ಪುಗಳಿಂದ ಯಾವುದೇ ಪಾಠ ಕಲಿತಿಲ್ಲ. ರಮಣ್ ಸಿಂಗ್ ಸರ್ಕಾರ ಪದೇ ಪದೆ ಇಂತಹ ತಪ್ಪುಗಳನ್ನು ಮಾಡುತ್ತಿದೆ. ಆದರು ಅಮರ್ ಅಗರವಾಲ್ ಅವರನ್ನು ಸಂಪುಟದಿಂದ ವಜಾಗೊಳಿಸುತ್ತಿಲ್ಲ’ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭುಪೇಶ್ ಭಘಲ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ರಮಣ್ ಸಿಂಗ್ ಹಾಗೂ ಅಗರ್‌ವಾಲ್ ಅವರು ಘಟನೆಯ ನೈತಿಕ ಹೊಣೆ ಹೊತ್ತು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಭಘಲ್ ಆಗ್ರಹಿಸಿದ್ದಾರೆ.

ಶಸ್ತ್ರ ಚಿಕಿತ್ಸೆಗೂ ಮುನ್ನ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ, ಅಗಲ್ ಅವರು ತಮ್ಮ ಖಾತೆಯನ್ನು ನಿರ್ವಹಿಸಲು ಅಸಮರ್ಥರು ಎಂದಾದರೇ ಅವರಿಗೆ ಏಕೆ ಆರೋಗ್ಯ ಖಾತೆಯನ್ನು ವಹಿಸಬೇಕು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಭಘಲ್, ರಮಣ್ ಸಿಂಗ್ ಅವರಿಗೆ ಜನಸಾಮಾನ್ಯ ಆರೋಗ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದರು.

ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಮುಖ್ಯ ವೈದ್ಯಾಧಿಕಾರಿ ಹಾಗೂ ಹಿರಿಯ ವೈದ್ಯಾಧಿಕಾರಿ ಸೇರಿದಂತೆ ಐವರು ಆರೋಗ್ಯ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಅಲ್ಲದೆ ಶಸ್ತ್ರ ಚಿಕಿತ್ಸಾ ಕ್ಯಾಂಪ್‌ನ ನೇತೃತ್ವ ವಹಿಸಿದ್ದ ಹಿರಿಯ ಅಧಿಕಾರಿ ಆರ್.ಕೆ ಗುಪ್ತ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಿಎಂ ರಮಣ್ ಸಿಂಗ್ ಸೂಚಿಸಿದ್ದಾರೆ.

Write A Comment