ಅಂತರಾಷ್ಟ್ರೀಯ

ಗಡಿಯಲ್ಲಿ ಮುಂದುವರಿದ ಗುಂಡಿನ ಚಕಮಕಿ: ಪಾಕ್ ಶೆಲ್ ದಾಳಿಗೆ ಇಬ್ಬರು ಮಹಿಳೆಯರು ಬಲಿ

Pinterest LinkedIn Tumblr

_000227B

ಜಮ್ಮು, ಅ.8: ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನದ ಪಡೆಗಳಿಂದ ನಡೆಯುತ್ತಿರುವ ಶೆಲ್ ಮತ್ತು ಗುಂಡಿನ ದಾಳಿಯಿಂದ ಬುಧವಾರ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಮೃತರಾಗಿದ್ದು, ಇತರ 15 ಮಂದಿ ಗಾಯಗೊಂಡಿದ್ದಾರೆ.

ಕಳೆದ ಒಂದು ವಾರದಿಂದ ಕದನವಿರಾಮ ಉಲ್ಲಂಘನೆ ಮಾಡಿ ಶೆಲ್ ಮತ್ತು ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಪಡೆಗಳ ಗುಂಡಿಗೆ ಬಲಿಯಾದವರ ಸಂಖ್ಯೆ ಬುಧವಾರ ಎಂಟಕ್ಕೇರಿದೆ. ಈವರೆಗೆ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭಾರತ-ಪಾಕ್ ನಡುವಣ 192 ಕಿ.ಮೀ. ಉದ್ದದ ಗಡಿಯಲ್ಲಿ 50 ಗಡಿ ಹೊರ ಠಾಣೆಗಳು ಮತ್ತು 35 ಜನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ರೇಂಜರ್ಸ್‌ ಯೋಧರು ದಾಳಿ ನಡೆಸುತ್ತಿದ್ದಾರೆ. ಪಾಕ್ ಸೈನಿಕರ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳ 16 ಸಾವಿರಕ್ಕೂ ಹೆಚ್ಚು ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆ.

ಸಾಂಬಾ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿರುವ ಛಿಲ್ಲಾರಿ ಗ್ರಾಮವನ್ನು ಗುರಿಯಾಗಿಸಿ ಕೊಂಡು ಪಾಕ್ ಪಡೆಗಳು ಬುಧವಾರ ಬೆಳಗ್ಗೆ 7:30ರ ಹೊತ್ತಿಗೆ ಶೆಲ್ ದಾಳಿ ನಡೆಸಿದವು. ಈ ಸಂದರ್ಭದಲ್ಲಿ ಮೋರ್ಟಾರ್ ಶೆಲ್‌ವೊಂದು ಸ್ಫೋಟಗೊಂಡು ಶಕುಂತಲಾದೇವಿ ಮತ್ತು ಆಕೆಯ ಸೊಸೆ ಪೂಲಿದೇವಿ ಎಂಬವರು ಸ್ಥಳದಲ್ಲೇ ಮೃತರಾದರು. ಈ ಮಹಿಳೆಯರಿಬ್ಬರ ಗಂಡಂದಿರು ಹಾಗೂ ಪೂಲಿದೇವಿಯ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಸಾಂಬಾ ಜಿಲ್ಲೆಯ ಎಸ್‌ಎಸ್‌ಪಿ ಅನಿಲ್ ಮಂಗೋತ್ರ ತಿಳಿಸಿದ್ದಾರೆ.

ಶೆಲ್ ದಾಳಿಯ ಹಿನ್ನೆಲೆಯಲ್ಲಿ ಗ್ರಾಮದ 1,700 ಮಂದಿ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.
ಪಾಕ್ ರೇಂಜರ್ಸ್‌ ಯೋಧರ ಶೆಲ್ ದಾಳಿಗೆ ಗಡಿ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿರುವ ಹಿನ್ನೆಲೆಯಲ್ಲಿ ಮೆಂಧಾರ್ ಮತ್ತು ಪೂಂಛ್ ಸೆಕ್ಟರ್‌ಗಳ ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ ರಾತ್ರಿಯಿಂದೀಚೆಗೆ ಗುಂಡಿನ ದಾಳಿ ಸ್ಥಗಿತಗೊಂಡಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಪಾಕ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ 15 ಜನರ ಪೈಕಿ ಮೂವರು ಬಿಎಸ್‌ಎಫ್ ಯೋಧರಾಗಿದ್ದಾರೆ. ಎಲ್ಲ ಗಾಯಾಳುಗಳನ್ನು ಜಮ್ಮುವಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅನಿಲ್ ಮಂಗೋತ್ರ ಹೇಳಿದ್ದಾರೆ.ಗಡಿ ಪ್ರದೇಶದಲ್ಲಿರುವ ಜೋರ್ಡಾ ಜನ ವಸತಿ ಪ್ರದೇಶದ ಮೇಲೆ ಬುಧವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ ಶೆಲ್ ದಾಳಿ ನಡೆದಿದೆ. ಆರ್.ಎಸ್.ಪುರದಲ್ಲಿರುವ ರಾತ್ರಿ ರಕ್ಷಣಾ ಶಿಬಿರದಿಂದ ಮರಳುತ್ತಿದ್ದ ಆರು ಜನರು ಶೆಲ್ ಸ್ಫೋಟಗೊಂಡಾಗ ಗಾಯಗೊಂಡರು. ಗಾಯಾಳುಗಳನ್ನು ಜಮ್ಮುವಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Write A Comment