ಗಲ್ಫ್

ಯುಎಇಯಿಂದ ಕರ್ನಾಟಕಕ್ಕೆ ವಾಪಾಸಾಗಲು ಕನ್ನಡಿಗರಿಗೆ ಸಿಗದ ಭಾಗ್ಯ; ಮೊದಲ ವೇಳಾಪಟ್ಟಿಯಲ್ಲಿ ನಿರಾಸೆ: ಅನಿವಾಸಿ ಕನ್ನಡಿಗರಿಂದ ಆಕ್ರೋಶ

Pinterest LinkedIn Tumblr

ದುಬೈ: ಕೊರೋನ ಸಂಕಷ್ಟದಿಂದ ವಿದೇಶಗಳಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ವಾಪಸ್ ಕರೆತರುವ ವಿಮಾನ ಪ್ರಯಾಣದ ವೇಳಾಪಟ್ಟಿ, ಪ್ರಯಾಣಿಸಲಿರುವ ಸ್ಥಳಗಳ ಮೊದಲ ಪಟ್ಟಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯುಎಇಯಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ಪ್ರಯಾಣ ನಿಗದಿಯಾಗಿಲ್ಲ. ಯುಎಇಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನಿವಾಸಿ ಕನ್ನಡಿಗರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

 

 

ಭಾರತಕ್ಕೆ ವಾಪಸಾಗಲು ಇಚ್ಚಿಸಿರುವ ಅನಿವಾಸಿ ಕನ್ನಡಿಗರ ಮಾಹಿತಿಯನ್ನು ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರ ಸಂಘಟನೆಗಳು ಕಲೆಹಾಕಿದ್ದು, ವಿಸಿಟ್ ವೀಸಾ, ಗರ್ಭಿಣಿ ಮಹಿಳೆಯರು, ತುರ್ತು ಚಿಕಿತ್ಸೆಗೆ ಹೋಗಲು ಕಾಯುತ್ತಿರುವವರ ಸಂಪೂರ್ಣ ವಿವರಗಳನ್ನು ಹೊಂದಿದೆ. ಈ ಕುರಿತು ರಾಜ್ಯ ಸರ್ಕಾರದ ಮಂತ್ರಿಗಳೊಂದಿಗೆ ಅನಿವಾಸಿ ಕನ್ನಡಿಗರ ಸಂಘಟನೆಗಳು ನಿರಂತರ ಮಾಹಿತಿ ವಿನಿಮಯ ಮಾಡಿತ್ತು. ಈಗಾಗಲೇ 100ಕ್ಕಿಂತಲೂ ಹೆಚ್ಚು ಗರ್ಭಿಣಿಯರು ಹೆಸರು ದಾಖಲಿಸಿದ್ದು, ಯುಎಈಯಿಂದ ಕನಿಷ್ಠ ಒಂದು ವಿಮಾನವನ್ನು ಕರ್ನಾಟಕಕ್ಕೆ ಮೊದಲ ಪಟ್ಟಿಯಲ್ಲಿ ಕಳುಹಿಸಲೇಬೇಕಾದ ತುರ್ತು ಅವಶ್ಯಕತೆ ಇದೆ ಎಂದು ಸಂಘಟನೆಗಳು ತಿಳಿಸಿದೆ.

ಆದರೆ ರಾಜ್ಯ ಸರ್ಕಾರ ಈ ಕುರಿತು ತಲೆಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ, ಕೇಂದ್ರಕ್ಕೆ ಕೇರಳ ಸರ್ಕಾರ ಒತ್ತಡ ಹೇರಿದ್ದರೆ, ಕರ್ನಾಟಕ ಸರಕಾರ ಪ್ರಯತ್ನವನ್ನೇ ಮಾಡಿಲ್ಲ. ಹಾಗಾಗಿ ಬೇರೆ ರಾಜ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಈಗಲಾದರೂ ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಇಲಾಖೆಯ ಜೊತೆ ಕೂಡಲೇ ಮಾತನಾಡಿ ರಾಜ್ಯದ ಅನಿವಾಸಿ ಭಾರತೀಯರಿಗೆ ಆದ್ಯತೆ ನೀಡುವಂತೆ ಮತ್ತು ಮೊದಲ ವೇಳಾಪಟ್ಟಿಯಲ್ಲಿ ಇವರು ಭಾರತಕ್ಕೆ ಹಿಂದಿರುಗುವಂತೆ ಅನುವು ಮಾಡಿಕೊಡಲು ಪ್ರಯತ್ನಿಸಬೇಕು. ಸರಕಾರದ ನಿರ್ಲಕ್ಷ್ಯ ಧೋರಣೆಗೆ ಯುಎಇ ಅನಿವಾಸಿ ಕನ್ನಡಿಗರೆಲ್ಲರೂ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಯುಎಇ ಎನ್ ಆರ್ ಐ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಖ್ಯಾತ ಉದ್ಯಮಿ, ಶಾರ್ಜಾ ಕನ್ನಡಿಗ ಸಂಘದ ಪೋಷಕ ಹರೀಶ್ ಶೇರಿಗಾರ್, ಅನಿವಾಸಿ ಕನ್ನಡಿಗರು ದುಬೈ ಅಧ್ಯಕ್ಷ ಮುಹಮ್ಮದ್ ನವೀದ್, ಅನಿವಾಸಿ ಕನ್ನಡಿಗರು ದುಬೈ ಉಪಾಧ್ಯಕ್ಷ ಸುನಿಲ್ ಅಂಬಲವಳಿಲ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಹಿದಾಯತ್ ಅಡ್ಡೂರು, ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಲಿಂಗದಹಳ್ಳಿ, ಕರ್ನಾಟಕ ಮೀಡಿಯಾ ಫಾರಂ ಅಧ್ಯಕ್ಷ ಇಮ್ರಾನ್ ಖಾನ್, ದುಬೈಯಲ್ಲಿರುವ ಮಂಗಳೂರು ಮೂಲದ ಉದ್ಯಮಿ ರೊನಾಲ್ಡ್ ಮಾರ್ಟಿಸ್, ದುಬೈ ಕರ್ನಾಟಕ ಸಂಘದ ದಯಾ ಕಿರೋಡಿಯನ್, ಉದ್ಯಮಿ ನೋಯೆಲ್ ಅಲ್ಮೇಡಾ, ಉದ್ಯಮಿ ಮತ್ತು ತುಳು ಸಂಘದ ಯಶವಂತ್ ಕರ್ಕೇರಾ, ಭಟ್ಕಳ್ ಕಮ್ಯುನಿಟಿ ಅಧ್ಯಕ್ಷ ಅಶ್ಫಾಕ್ ಸದಾ, ಭಟ್ಕಳ್ ಕಮ್ಯುನಿಟಿಯ ಯೂಸುಫ್ ಬ್ರಹ್ಮಾವರ, ಅಫ್ಝಲ್ ಎಸ್.ಎಂ., ಕನ್ನಡ ಪಾಠಶಾಲೆಯ ಶಶಿಧರ್ ನಾಗರಾಜಪ್ಪ, ಉದ್ಯಮಿ ಅಲ್ತಾಫ್ ಹುಸೈನ್, ಉದ್ಯಮಿ ಅಶ್ರಫ್ ಕೆ.ಎಂ., ಉದ್ಯಮಿ ಜಾನ್ಸನ್ ಮಾರ್ಟಿಸ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಿರಾಜ್ ಪರ್ಲಡ್ಕ, ಅನ್ಸಾರ್ ಬಾರ್ಕೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಭಾರತ ಸರಕಾರ ಮೇ 7ರಿಂದ ವಿಮಾನಯಾನ ಆರಂಭಿಸಲಿದೆ. ಯುಎಇಯಿಂದ ಭಾರತಕ್ಕೆ ಹಿಂದಿರುಗಲು ಕನಿಷ್ಠ 1,90,000 ಅನಿವಾಸಿ ಭಾರತೀಯರು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ.

Comments are closed.