ಅಂತರಾಷ್ಟ್ರೀಯ

ಕೊರೋನಾ ಸೋಂಕಿಗೆ ಭಾರತೀಯ ಮೂಲದ ಸಮಾಜ ಸೇವಕ ಸಾವು

Pinterest LinkedIn Tumblr


ಅಬುಧಾಬಿ: ಭಾರತೀಯ ಮೂಲದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಸಮಾಜ ಸೇವಕ ಪಿಕೆ ಕರೀಮ್ ಹಾಜಿ ಅಬುಧಾಬಿಯಲ್ಲಿ ಕೊವಿಡ್‍ -19 ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಅಬುಧಾಬಿ ಕೇರಳ ಮುಸ್ಲಿಂ ಸಾಂಸ್ಕೃತಿಕ ಕೇಂದ್ರದ (ಕೆಎಂಸಿಸಿ) ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಇಸ್ಲಾಮಿಕ್ ಕೇಂದ್ರದ ಸುನ್ನಿ ವಿಭಾಗದ ಸಕ್ರಿಯ ಕಾರ್ಯಕರ್ತರಾಗಿದ್ದ 62 ವರ್ಷದ ಉದ್ಯಮಿ ಪಿ.ಕೆ.ಕರೀಮ್ ಹಾಜಿ, ಏಪ್ರಿಲ್ 30 ರಂದು ಕೊವಿಡ್‍-19 ಸೋಂಕಿನಿಂದ ಉಂಟಾದ ತೊಂದರೆಗಳಿಂದ ಸಾವಿಗೀಡಾಗಿದ್ದಾರೆ ಎಂದು ಅವರ ಕುಟುಂಬದ ಹೇಳಿಕೆಗಳನ್ನು ಉಲ್ಲೇಖಿಸಿ ಗಲ್ಫ್ ನ್ಯೂಸ್ ಭಾನುವಾರ ವರದಿ ಮಾಡಿದೆ.

ಕೇರಳದ ತಿರುವತ್ರಾ ಮೂಲದ ಕರೀಮ್‍ ಹಾಜಿ, ಅಬುಧಾಬಿಯ ಬುರ್ಜಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್‍-19 ಸೋಂಕಿನಿಂದ ಕೊನೆಯುಸಿರೆಳೆಯುವುದಕ್ಕೂ ಮುನ್ನ ಅವರು ಸುಮಾರು 10 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಅವರು ಮಧುಮೇಹದಿಂದ ಬಳಲುತ್ತಿದ್ದರು ಎಂದು ಕರೀಮ್‍ ಹಾಜಿ ಪುತ್ರ ಹಾಜಿ ಮೊಹಮ್ಮದ್ ಅಬ್ದುಲ್ ಗಫೂರ್ ದೃಢಪಡಿಸಿದ್ದಾರೆ.

“ಎರಡು ವಾರಗಳ ಹಿಂದೆ ತಮ್ಮ ತಂದೆ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ಅವರ ಗಂಟಲು ದ್ರವ ಪರೀಕ್ಷಿಸಿದ ನಂತರ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ ತಕ್ಷಣ ಅವರನ್ನು ಬುರ್ಜಿಲ್‍ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ತಂದೆಯವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಕೊನೆಯ ಎರಡು ದಿನ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು,” ಎಂದು ಗಫೂರ್ ಹೇಳಿಕೆಯನ್ನು ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

ಏಪ್ರಿಲ್ ಮೊದಲ ವಾರದಲ್ಲಿ ಭಾರತದ ಮತ್ತೊರ್ವ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ನಸೀರ್ ವಟನಪಲ್ಲಿ ಯುಎಇಯಲ್ಲಿ ಕೊವಿಡ್‍-19 ಸೋಂಕಿಗೆ ತುತ್ತಾಗಿದ್ದರು. ಸೋಂಕಿನಿಂದ ಚೇತರಿಸಿಕೊಂಡ ಅವರು ಮತ್ತೆ ಸಾಮಾಜಿಕ ಕೆಲಸಗಳಲ್ಲಿ ನಿರತರಾಗಿದ್ದಾರೆ.

Comments are closed.