ಗಲ್ಫ್

ಭಾರತೀಯರು ಸೇರಿದಂತೆ ಇತರ ದೇಶಗಳ ಜನರನ್ನು ವಾಪಾಸು ಕರೆಸಿಕೊಳ್ಳಲು ವಿಮಾನ ವ್ಯವಸ್ಥೆ ಮಾಡಿ; ಯುಎಇ ಮನವಿ

Pinterest LinkedIn Tumblr

ದುಬೈ: ಮಾರಕ ಕೊರೋನಾ ವೈರಸ್ ಆರ್ಭಟದ ಹಿನ್ನೆಲೆಯಲ್ಲಿ ಯುಎಇಯಲ್ಲಿರುವ ಭಾರತೀಯರು ಮತ್ತು ಇತರ ದೇಶಗಳ ನಾಗರಿಕರನ್ನು ವಿಮಾನಗಳ ಮೂಲಕ ವಾಪಸ್ ಕರೆಸಿಕೊಳ್ಳುವಂತೆ ಯುಎಇ ಮನವಿ ಮಾಡಿದೆ.

ಭಾರತೀಯರು ಸೇರಿದಂತೆ ಯುಎಇಯಲ್ಲಿರುವ ಎಲ್ಲ ದೇಶಗಳ ನಾಗರಿಕರನ್ನು ವಿಮಾನ ಕಳುಹಿಸುವ ಮೂಲಕ ಆದಷ್ಟು ಬೇಗ ವಾಪಾಸು ಕರೆಸಿಕೊಳ್ಳುವಂತೆ ಯುಎಇ ಸರಕಾರ ಮನವಿ ಮಾಡಿಕೊಂಡಿದೆ.

ಯುಎಇ ಮತ್ತು ಕುವೈತ್ ರಾಷ್ಟ್ರವನ್ನು ಲಕ್ಷಾಂತರ ಜನ ವಿದೇಶಿಗರು ಕೆಲಸಕ್ಕಾಗಿ ಆಶ್ರಯಿಸಿದ್ದಾರೆ. ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಎರಡೂ ರಾಷ್ಟ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೊರೋನಾ ಬೆದರಿಕೆ ಹಿನ್ನೆಲೆಯಲ್ಲಿ ಆಯಾ ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಯುಎಇ ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಯುಎಇ, “ಸ್ವದೇಶಕ್ಕೆ ಮರಳಲು ಬಯಸುವ ಖಾಸಗಿ ವಲಯದ ವಲಸಿಗರನ್ನು ಆಯಾ ರಾಷ್ಟ್ರಗಳು ಶೀಘ್ರದಲ್ಲೇ ಹಿಂದಕ್ಕೆ ಕರೆಸಿಕೊಳ್ಳಬೇಕು. ಈ ನಿಯಮಕ್ಕೆ ಸಹಕರಿಸಲು ನಿರಾಕರಿಸುವ ರಾಷ್ಟ್ರಗಳೊಂದಿಗಿನ ಕಾರ್ಮಿಕ ಸಂಬಂಧವನ್ನು ಪರಿಶೀಲಿಸಲಾಗುವುದು ಮತ್ತು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಭವಿಷ್ಯದ ನೇಮಕಾತಿಗಳಿಗೆ ನಿರ್ಬಂಧ ವಿಧಿಸಲಾಗುವುದು” ಎಂದು ಎಚ್ಚರಿಕೆ ನೀಡಿದೆ.

ಯುಎಇಯಲ್ಲಿ ಕೆಲಸ ಮಾಡುತ್ತಿರುವ ಹಾಗು ಕೆಲಸ ಹುಡುಕಿಕೊಂಡು ಬಂದಿರುವವರು ಭಾರತಕ್ಕೆ ವಾಪಾಸಾಗದೆ ಸಂಕಷ್ಟದಲ್ಲಿದ್ದು, ಅಂಥವರನ್ನು ಕೋವಿಡ್ -19 ಪರೀಕ್ಷೆಗೊಳಪಡಿಸಲಾವುದು. ಒಂದು ವೇಳೆ ಅವರಲ್ಲಿ ಕೋವಿಡ್ -19 ನೆಗೆಟಿವ್ ಬಂದರೆ ಅಂಥವರನ್ನು ವಿಮಾನದ ಮೂಲಕ ಭಾರತಕ್ಕೆ ಕಳುಹಿಸಲಾಗುವುದು. ಪಾಸಿಟಿವ್ ಬಂದರೆ ಯುಎಇಯಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ಡಾ. ಅಹ್ಮದ್ ಅಬ್ದುಲ್ ರಹಮಾನ್ ಅಲ್ ಬನ್ನಾ ಸ್ಪಷ್ಟಪಡಿಸಿದ್ದಾರೆ.

ಯುಎಇಯಲ್ಲಿ ಮಾರಕ ಕೊರೋನಾ ವೈರಸ್ ತನ್ನ ಆರ್ಭಟ ಹೆಚ್ಚಿಸುತ್ತಲೇ ಇದ್ದು, ವಿಶ್ವದ ನಾನಾ ಭಾಗಗಳಿಂದ ಕೆಲಸಕ್ಕೆ, ಕೆಲಸ ಹುಡುಕಿಕೊಂಡು ಹಾಗು ದೇಶ ಸುತ್ತಲೂ ಬಂದ ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದು, ಇವರೆಲ್ಲರನ್ನು ಮಾರಕ ಕೊರೋನಾದಿಂದ ರಕ್ಷಿಸಲು ಯುಎಇ ಸರಕಾರ ಹರಸಾಹಸ ಪಡುತ್ತಿದೆ. ದಿನದಿಂದ ದಿನಕ್ಕೆ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿರುವುದರಿಂದ ವಿದೇಶಿಗರನ್ನು ಅವರ ತವರಿಗೆ ಕರೆಸಿಕೊಳ್ಳಲು ಭಾರತ ಸೇರಿದಂತೆ ಇತರ ದೇಶಗಳಿಗೆ ಯುಎಇ ಮನವಿ ಮಾಡಿಕೊಂಡಿದೆ.

ಯುಎಇಯಿಂದ ಭಾರತಕ್ಕೆ ಕಳುಹಿಸುವ ‘ಕೋವಿಡ್ -19 ನೆಗೆಟಿವ್’ ವ್ಯಕ್ತಿಗಳ ಪಾಸ್‌ಪೋರ್ಟ್‌ನಲ್ಲಿ ಸ್ಟಿಕ್ಕರ್ ಹಾಕಲಾಗುವುದು ಎಂದು ದುಬೈಯ General Directorate of Residency and Foreign Affairs ಈಗಾಗಲೇ ಹೇಳಿದೆ. ಈ ಸ್ಟಿಕ್ಕರಿನಲ್ಲಿ “Have a safe flight… we’ll meet again…” ಎಂದು ಬರೆಯಲಾಗುವುದು.

ಗಲ್ಫ್ ಟುಡೆ ವರದಿಯ ಪ್ರಕಾರ, 15 ಭಾರತೀಯ ಕಾರ್ಮಿಕರು ಯುಎಇಯ ಅಜ್ಮಾನಿನಲ್ಲಿ ಕೆಲಸವಿಲ್ಲದೆ ಸಿಕ್ಕಿಹಾಕಿಕೊಂಡಿದ್ದು, ಅವರಿಗೆ ದುಬೈನ ಭಾರತೀಯ ದೂತಾವಾಸವು ಸಾಹಯಹಸ್ತ ನೀಡಿದೆ.

ದುಬೈಯ ಅಲ್ ಕೂಜ್ ನಲ್ಲಿ ಸಂಕಷ್ಟದಲ್ಲಿದ್ದ 200 ಕಾರ್ಮಿಕರಿಗೆ ಆಹಾರವನ್ನು ನೀಡಿರುವ ಭಾರತೀಯ ದೂತಾವಾಸವು, ಕಷ್ಟದಲ್ಲಿರುವ ಭಾರತೀಯರಿಗೆ ಸದಾ ಸಹಾಯ ಸಹಕಾರವನ್ನು ನೀಡುತ್ತಿರುವುದಾಗಿ ಹೇಳಿದೆ.

Comments are closed.