ಗಲ್ಫ್

ಕುವೈಟ್‌ನಲ್ಲಿ ಕೋರೊನಾ ಆತಂಕ; ಸರ್ಕಾರಿ, ಖಾಸಗಿ ಸಂಸ್ಥೆಗಳು, ಕಛೇರಿಗಳು, ಶಾಲಾ-ಕಾಲೇಜು, ವಿಮಾನಗಳು, ಬಸ್ಸು ಸಂಚಾರ ಬಂದ್‌!

Pinterest LinkedIn Tumblr

ವಿಶ್ವದಾದ್ಯಂತ ಕೋರೊನಾ ವೈರಸ್‌ ಹರಡುತ್ತಿರುವ ಹಿನ್ನಲೆಯಲ್ಲಿ ಕುವೈಟ್‌ನಲ್ಲಿ ಮಾರ್ಚ್ 12 ರಿಂದ ಇನ್ನು 2 ವಾರಗಳ ಕಾಲ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಕಛೇರಿಗಳು, ಶಾಲಾ-ಕಾಲೇಜುಗಳು ಕಾರ್ಯ ನಿರ್ವಹಿಸುವುದಿಲ್ಲ. ಹಾಗೆಯೇ ಮಾರ್ಚ್ 29 ರ ಭಾನುವಾರದಂದು ಕಾರ್ಯಗಳು ಪುನರಾರಂಭಗೊಳ್ಳಲಿ‌ದೆ ಎಂದು ನಂಬಲಾಗಿದೆ.

ಗಲ್ಫ್ ರಾಷ್ಟ್ರದ ಸಚಿವರ ಕೌನ್ಸಿಲ್ ಈ ತೀಮಾರ್ನವನ್ನು ಕೈಗೊಂಡಿದೆ. ಹಾಗೆಯೇ ಕೌನ್ಸಿಲ್‌ ಮಾರ್ಚ್ 13 ರಿಂದ ಬಹಳಷ್ಟು ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದು ಮುಂದಿನ ಆದೇಶ ಬರುವವರೆಗೂ ವಿಮಾನ ಸಂಚಾರವಿರುವುದಿಲ್ಲ.

ದೇಶದ ನಾಗರೀಕರಿಗೆ ಮತ್ತು ಅವರ ಹತ್ತಿರದ ಸಂಬಂಧಿಗಳಿಗೆ ಮಾತ್ರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿಲ್ಲ. ಫೆಬ್ರವರಿ 27 ಮತ್ತು ಅದರ ನಂತರ ಕುವೈಟ್ ಗೆ ವಾಪಸಾಗಿರುವ ಅನಿವಾಸಿಗಳಿಗೆ ಕಡ್ಡಾಯವಾಗಿ ಹದಿನೈದು ದಿನ ಮನೆಯಲ್ಲಿ ಇರಬೇಕೆಂಬ ನಿರ್ಬಂಧ ವಿದಿಸಲಾಗಿದೆ ಮತ್ತು ಆರೋಗ್ಯ ಪ್ರಮಾಣ ಪತ್ರವನ್ನು ಒಪ್ಪಿಸಬೇಕೆಂದು ತಿಳಿಸಲಾಗಿದೆ.

ಜನರಿಗೆ ಹೊಟೇಲ್‌ಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದ್ದು, ಸದ್ಯಕ್ಕೆ ಆಹಾರ ತಿನಿಸುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮತ್ತು ಪಾರ್ಸೆಲ್ ಕೊಂಡು ಹೋಗುವ ವ್ಯವಸ್ಥೆ ಚಾಲ್ತಿಯಲ್ಲಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಬಸ್ ಗಳನ್ನು ಕೂಡ ಬಂದ್ ಮಾಡಲಾಗಿದ್ದು ಅಲ್ಲಲ್ಲಿ ಕೆಲವು ಟ್ಯಾಕ್ಸಿಗಳು ಮಾತ್ರ ಓಡಾಡುತ್ತಿವೆ. ಸಿನಿಮಾ ಮಂದಿರಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ಸ್ಥಳಗಳಾದ ರೆಸ್ಟೋರೆಂಟ್, ಹೋಟೆಲ್, ಮಾಲ್, ಉದ್ಯಾನವನ, ಸಮುದ್ರ ತೀರಗಳಲ್ಲೂ ಜನ ಗುಂಪುಗೂಡುವುದನ್ನು ನಿಷೇದಿಸಲಾಗಿದೆ.

ಸರಕಾರಿ ಮಾಲ್ ಗಳು ಹಾಗೂ ಕೆಲವು ಖಾಸಗಿ ಮಾಲ್ ಗಳು ಮಾತ್ರ ತೆರೆದಿದ್ದು ಅಲ್ಲಿಯೂ ಕೂಡಾ ಜನದಟ್ಟಣೆ ಬಹಳ ಕಡಿಮೆಯಾಗಿದೆ.ಈ ನಿರ್ಬಂಧವನ್ನು ಪಾಲಿಸದ ಅನಿವಾಸಿಗಳಿಗೆ ಅವರವರ ದೇಶಕ್ಕೆ ವಾಪಸು ಕಳಿಸಲಾಗುವುದು ಎಂಬ ಪ್ರಕಟಣೆಯನ್ನು ಹೊರಡಿಸಲಾಗಿದೆ. ಕೋರೊನಾ ಸೋಂಕಿತರು 100ರ ಗಡಿ ದಾಟಿದ್ದು, ಇನ್ನಷ್ಟು ಜನರು ಸೋಂಕಿಗೆ ಒಳಗಾಗಬಾರದೆಂದು ಆರೋಗ್ಯ ಇಲಾಖೆ ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿದೆ ಮತ್ತು ನಿರ್ಬಂಧಗಳನ್ನು ವಿಧಿಸಿದೆ.

ಭಾರತದಿಂದ ಬರುವ ಪ್ರಯಾಣಿಕರಿಗೆ ಪ್ರತಿಬಂಧನೆ ಇದ್ದುದರಿಂದ ಮತ್ತು ವಿಮಾನ ಸಂಚಾರವಿಲ್ಲದಿರುವುದರಿಂದ, ಇಲ್ಲಿಂದ ಅನಿವಾರ್ಯ ಮತ್ತು ತುರ್ತು ಕಾರಣಗಳಿಗಾಗಿ ಸ್ವದೇಶಕ್ಕೆ ಮರಳುವವರಿಗೆ ಬಹಳಷ್ಟು ತೊಂದರೆಯಾಗಿದೆ. ರಜೆ ಮುಂತಾದ ಕಾರಣದಿಂದ ಸ್ವದೇಶಕ್ಕೆ ಹೋದವರು ಮರಳಿ ಬರಲಾಗದೆ ಪರಿತಪಿಸುವಂತಾಗಿದೆ. ಕನ್ನಡಿಗರು ಸೇರಿದಂತೆ ಹಲವಾರು ಲಕ್ಷ ಸಂಖ್ಯೆಯಲ್ಲಿರುವ ಭಾರತೀಯರು ಸಂಕಷ್ಟಕ್ಕೊಳಗಾಗಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಿದ್ದ ಕುಟುಂಬದವರು ಬಹಳಷ್ಟು ತೊಂದರೆಯಲ್ಲಿದ್ದಾರೆ.

ಸೋಂಕು ಅತಿ ಹೆಚ್ಚು ಬಂದ ದೇಶಗಳಾದ ಚೈನಾ, ಇರಾನ್, ಇಟೆಲಿ, ಇಜಿಪ್ಟ್, ಲೆಬನಾನ್ ಮತ್ತಿತ್ತರ ದೇಶದ ಜನರಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ ಮಾಡಿದ್ದಾರೆ. ಮನೆಯಲ್ಲೆ ಕೂತು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಕೋರೊನಾ ಎಂಬ ಭೂತ ತೊಲಗಿ, ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ಬರಲಿ ಎಂಬುದೆ ಸರ್ವಶಕ್ತನಾದ ದೇವರಲ್ಲಿ ಎಲ್ಲರ ಪ್ರಾರ್ಥನೆ, ಬೇಡಿಕೆ ಹಾಗೂ ಹಾರೈಕೆ.

ವರದಿ: ಸುರೇಶ್ ರಾವ್ ನೇರಂಬಳ್ಳಿ, ಕುವೈಟ್

Comments are closed.