ಅಂತರಾಷ್ಟ್ರೀಯ

ಹುಲಿಯಿದ್ದ ಮೃಗಾಲಯದ ಆವರಣದೊಳಗೆ ಬಿದ್ದ ಯುವಕ…!

Pinterest LinkedIn Tumblr


ಅದು ಸೌದಿ ಅರೇಬಿಯಾದ ರಿಯಾದ್‌ನ ಮೃಗಾಲಯ. ದಿನಾ ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಈ ಯುವಕನೂ ಪ್ರಾಣಿಗಳನ್ನು ನೋಡಲೆಂದೇ ಇಲ್ಲಿಗೆ ಬಂದಿದ್ದ. ಹೀಗೆ ಮೃಗಾಲಯದ ಒಂದಷ್ಟು ಕಡೆ ಸುತ್ತಾಡಿ ಕೊನೆಗೆ ಈತ ಬಂದು ನಿಂತಿದ್ದು ಹುಲಿ ಇದ್ದ ಆವರಣದ ಬಳಿ. ಆದರೆ, ಇಲ್ಲಿ ದುರಂತವೊಂದು ನಡೆದೇ ಬಿಟ್ಟಿತ್ತು. ಅದೇನಾಯ್ತೋ ಹುಲಿಯಿದ್ದ ಆವರಣದ ಬಳಿ ನಿಂತಿದ್ದ ಯುವಕ ಆಯತಪ್ಪಿ ವ್ಯಾಘ್ರ ಇದ್ದ ಗುಂಡಿಯೊಳಗೆ ಬಿದ್ದಿದ್ದ… ಇತ್ತ, ಮನುಷ್ಯ ಬಿದ್ದ ತಕ್ಷಣ ಹುಲಿಯೂ ದಾಳಿ ಮಾಡಿಯೇ ಬಿಟ್ಟಿತ್ತು…! ತಪ್ಪಿಸಿಕೊಳ್ಳಲು ಅಲ್ಲಿ ಅವಕಾಶವೇ ಇರಲಿಲ್ಲ.

ಈ ಯುವಕನನ್ನು 24 ವರ್ಷದ ಮಹಮ್ಮದ್ ಅಬ್ದುಲ್ ಮೊಹಿಸಿನ್ ಎಂದು ಗುರುತಿಸಲಾಗಿದೆ. ಮಹಮ್ಮದ್ ಮೊಹಿಸಿನ್ ತಾನಿದ್ದ ಆವರಣದೊಳಗೆ ಬಿದ್ದ ತಕ್ಷಣ ಹುಲಿ ಬೇಟೆಗೆ ಸಿದ್ಧವಾಗಿ ನಿಂತಿತ್ತು. ಜೊತೆಗೆ, ಯುವಕನ ಮೇಲೆರಗಿದ ಹೆಬ್ಬುಲಿ ಆತನ ಕುತ್ತಿಗೆಗೆ ಕಚ್ಚಿ ಗಾಯಗೊಳಿಸಿತ್ತು. ಕ್ಷಣಾರ್ಧದಲ್ಲಿ ಅಲ್ಲೊಂದು ಭಯಾನಕ ವಾತಾವರಣ ನಿರ್ಮಾಣವಾಗಿಯೇ ಬಿಟ್ಟಿತ್ತು. ಜೀವ ಉಳಿಸಿಕೊಳ್ಳಲು ಮಹಮ್ಮದ್ ಹುಲಿಯೊಂದಿಗೆ ಅಕ್ಷರಶಃ ಹೋರಾಟಕ್ಕಿಳಿದಿದ್ದ. ಈ ಭಯಾನಕ ವಿಡಿಯೋವನ್ನು ಅಲ್ಲೇ ಇದ್ದವರು ಸೆರೆ ಹಿಡಿದಿದ್ದು, ಅದು ಈಗ ವೈರಲ್ ಆಗುತ್ತಿದೆ.

ಇತ್ತ, ಮಹಮ್ಮದ್ ಹುಲಿಯಿದ್ದ ಆವರಣದೊಳಗೆ ಬಿದ್ದ ಸುದ್ದಿ ತಕ್ಷಣ ಅಧಿಕಾರಿಗಳ ಕಿವಿಗೂ ಮುಟ್ಟಿತ್ತು. ಓಡಿ ಬಂದ ರಕ್ಷಣಾ ಸಿಬ್ಬಂದಿ ಗನ್ ಮಾದರಿಯ ಸಾಧನದಲ್ಲಿ ಅರವಳಿಕೆಯ ಚುಚ್ಚುಮದ್ದನ್ನು ಬಿಟ್ಟು ಹುಲಿಯ ಪ್ರಜ್ಞೆ ತಪ್ಪಿಸಿ ಯುವಕನ ಪ್ರಾಣ ಉಳಿಸಿದ್ದಾರೆ. ಬಳಿಕ ಮೊಹಿಸಿನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈತನ ಕತ್ತಿನ ಭಾಗಕ್ಕೆ ಭಾರೀ ಗಾಯಗಳಾಗಿದ್ದು, ಮಹಮ್ಮದ್ ಚೇತರಿಸಿಕೊಳ್ಳುತ್ತಿದ್ದಾನೆ.

ಇನ್ನೊಂದೆಡೆ, ಮಹಮ್ಮದ್ ಆಕಸ್ಮಿಕವಾಗಿ ಬಿದ್ದಿಲ್ಲ. ಆತನೇ ಹುಲಿಯ ಆವರಣದೊಳಗೆ ಹಗ್ಗದ ಸಹಾಯದಿಂದ ಇಳಿದಿದ್ದ ಎಂಬ ಮಾತುಗಳೂ ಕೇಳಿ ಬಂದಿದೆ. ಆದರೆ, ಇದನ್ನು ಮಹಮ್ಮದ್ ಅಲ್ಲಗಳೆದಿದ್ದಾನೆ. ತಾನು ತಲೆತಿರುಗಿ ಆಕಸ್ಮಿಕವಾಗಿಯೇ ಹುಲಿ ಇದ್ದ ಗುಂಡಿಯೊಳಗೆ ಬಿದ್ದಿದ್ದಾಗಿ ಈತ ಹೇಳಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Comments are closed.