ಅಂತರಾಷ್ಟ್ರೀಯ

ಮಾವಿನಹಣ್ಣು ಕದ್ದ ಭಾರತೀಯನಿಗೆ ದುಬೈನಿಂದ ಗಡಿಪಾರು ಶಿಕ್ಷೆ!

Pinterest LinkedIn Tumblr


ದುಬೈ: ದುಬೈ ಎಂದರೆ ಎಷ್ಟೋ ಭಾರತೀಯರ ಪಾಲಿಗೆ ಸ್ವರ್ಗ. ಅರಬ್‌ ದೇಶದ ಈ ನಗರ ಹೊಕ್ಕರೆ ಭವಿಷ್ಯ ಉಜ್ವಲವಾಗುತ್ತದೆ, ಕೈ ತುಂಬಾ ಹಣ ಸಂಪಾದಿಸಬಹುದು ಎಂಬ ನಂಬಿಕೆ ಜನರಲ್ಲಿದೆ. ಈ ಕಾರಣಕ್ಕೆ ಅರಬ್‌ ದೇಶದ ವಿಮಾನವೇರಲು ಭಾರತೀಯರು ಹಾತೊರೆಯುತ್ತಿರುತ್ತಾರೆ. ಹೀಗಿರುವಾಗ ಸಿಕ್ಕ ಅವಕಾಶವನ್ನು ಮಾವಿನ ಹಣ್ಣು ಕದ್ದು ಕಳೆದುಕೊಳ್ಳುವುದೆಂದರೆ ಏನರ್ಥ? ಬಹುಶಃ ಈತನಿಗಿಂತ ನತದೃಷ್ಟ ಬೇರೊಬ್ಬನಿರಲಿಕ್ಕಿಲ್ಲ.

ಕಳೆದ ವರ್ಷ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಭಾರತೀಯ ಮೂಲದ ವಿಮಾನ ನಿಲ್ದಾಣದ ಸಿಬ್ಬಂದಿ ಎರಡು ಮಾವಿನ ಹಣ್ಣುಗಳನ್ನು ಕದ್ದಿದ್ದರು. ಈ ಪ್ರಕರಣ ಸಂಬಂಧ ಇದೀಗ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ನ್ಯಾಯಾಲಯ ಅವರ ಗಡಿಪಾರಿಗೆ ಸೂಚನೆ ನೀಡಿದೆ.

ಅಷ್ಟೇ ಅಲ್ಲದೆ 27 ವರ್ಷದ ಕಾರ್ಮಿಕನಿಗೆ 5,000 ದಿರ್ಹಾಮ್‌ (96554 ರೂ.) ಗಳ ದಂಡವನ್ನೂ ವಿಧಿಸಿದೆ. ಜುಜುಬಿ 100 ರೂ. ಬೆಲೆಯ ಮಾವಿನಹಣ್ಣು ಕದಿಯಲು ಹೋಗಿ ಭಾರತೀಯ ಕಾರ್ಮಿಕನೀಗ ಅಂದಜು 1 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗಿದೆ, ಅಷ್ಟೇ ಅಲ್ಲ ಗಡಿಪಾರಿಗೆ ಒಳಗಾಗಿ ತನ್ನ ಉಜ್ವಲ ಭವಿಷ್ಯವನ್ನೇ ಕಳೆದುಕೊಳ್ಳಬೇಕಾಗಿ ಬಂದಿದೆ.

ವಿಚಾರಣೆ ವೇಳೆ ‘ತಾನು ದುಬೈ ಏರ್‌ಪೋರ್ಟ್‌ ಟರ್ಮಿನಲ್‌ 3ರಲ್ಲಿ ಕೆಲಸ ಮಾಡುತ್ತಿದ್ದೆ. ಕನ್ವೆಯರ್‌ ಬೆಲ್ಟ್‌ಗೆ ಪ್ರಯಾಣಿಕರ ಬ್ಯಾಗ್‌ಗಳನ್ನು ಹಾಕುವುದು ಮತ್ತು ತೆಗೆಯುವ ಕೆಲಸ ನನ್ನದಾಗಿತ್ತು’ ಎಂಬುದಾಗಿ ಹೇಳಿದ್ದಾನೆ. ಆಗಸ್ಟ್‌ 11, 2017ರಂದು ನನಗೆ ಹಸಿವು ಮತ್ತು ನೀರಡಿಕೆಯಾಗಿದ್ದರಿಂದ ಭಾರತಕ್ಕೆ ಹೊರಟಿದ್ದ ಹಣ್ಣಿನ ಬುಟ್ಟಿಯಿಂದ ಎರಡು ಮಾವಿನ ಹಣ್ಣುಗಳನ್ನು ಕದ್ದಿದ್ದಾಗಿ ಆತ ಹೇಳಿದ್ದಾನೆ.

ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ 2018ರ ಏಪ್ರಿಲ್‌ನಲ್ಲಿ ಆತನನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ವಾದ, ವಿವಾದಗಳು ಪೂರ್ಣಗೊಂಡ ನಂತರ ಇದೀಗ ಕಾರ್ಮಿಕ ಗಡಿಪಾರಿಗೆ ಆದೇಶ ನೀಡಲಾಗಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾರ್ಮಿಕನಿಗೆ 15 ದಿನಗಳ ಕಾಲವಕಾಶವಿದೆ.

Comments are closed.