ಗಲ್ಫ್

ಅಬುಧಾಬಿಯಲ್ಲಿ ಮೊದಲ ಹಿಂದು ದೇಗುಲಕ್ಕೆ ಶಿಲಾನ್ಯಾಸ; ಸಹಸ್ರಾರು ಭಕ್ತಾಧಿಗಳು ಭಾಗಿ

Pinterest LinkedIn Tumblr

ದುಬೈ : ಯುಎಇ ರಾಜಧಾನಿ ಅಬುಧಾಬಿಯ ಮೊತ್ತ ಮೊದಲ ಹಿಂದು ದೇವಸ್ಥಾನಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಹಿಂದೂ ಬಾಂಧವರು ಭಾಗಿಯಾಗಿ ಅವರ್ಣನೀಯ ಸಂಭ್ರಮೋಲ್ಲಾಸದಲ್ಲಿ ಮಿಂದೆದ್ದರು.

ಈ ದೇವಸ್ಥಾನವನ್ನು ನಿರ್ಮಿಸುತ್ತಿರುವ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್‌) ಇದರ ಆಧ್ಯಾತ್ಮಿಕ ಗುರುಗಳಾದ ಮಹಾಂತ ಸ್ವಾಮಿ ಮಹಾರಾಜ್‌ ಅವರು ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಮಾರು ನಾಲ್ಕು ತಾಸುಗಳ ಕಾಲ ವಿಧ್ಯುಕ್ತವಾಗಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪೂಜಿತ ಇಟ್ಟಿಗೆಗಳನ್ನು ಮುಖ್ಯ ಪೂಜಾ ಸ್ಥಳದಲ್ಲಿ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ಯುಎಇಯ ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.

ಯುಎಇ ಯಲ್ಲಿನ ಭಾರತೀಯ ರಾಯಭಾರಿ ನವದೀಪ್‌ ಸೂರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭಕ್ಕಾಗಿ ಕಳುಹಿಸಿದ ಸಂದೇಶವನ್ನು ಓದಿ ಹೇಳಿದರು. ಮೋದಿ ತಮ್ಮ ಸಂದೇಶದಲ್ಲಿ ಯುಎಇ ಯಲ್ಲಿ ಮೊದಲ ಹಿಂದು ದೇವಾಲಯ ಸ್ಥಾಪನೆ ವಿಷಯದಲ್ಲಿ ಗಲ್ಫ್ ರಾಷ್ಟ್ರ ತೋರಿರುವ ಆಸಕ್ತಿಯನ್ನು ಪ್ರಶಂಸಿಸಿದ್ದಾರೆ.

ಈಶ್ವರಚರಣ ಸ್ವಾಮಿಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಈ ವಿಧಿವಿಧಾನಗಳ ಬಳಿಕ, ಪುರೋಹಿತರು ಮತ್ತು ಬಿಎಪಿಎಸ್ ಹಿಂದೂ ಮಂದಿರ ಸಮಿತಿಯ ಮುಖ್ಯಸ್ಥ ಹಾಗೂ ಸಮುದಾಯ ನಾಯಕ ಬಿ.ಆರ್. ಶೆಟ್ಟಿ ಅಡಿಗಲ್ಲು ಹಾಕಿದರು. ಭಾರತದಿಂದ ಬಂದ ಸುಮಾರು 50 ಪುರೋಹಿತರು ಕಾರ್ಯಕ್ರಮ ನಡೆಸಿಕೊಟ್ಟರು.

ದೇವಸ್ಥಾನವನ್ನು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ದೇವಸ್ಥಾನಕ್ಕೆ ಬೇಕಾಗುವ ಎಲ್ಲ ಕಲ್ಲುಗಳು ಮತ್ತು ಶಿಲೆಗಳನ್ನು ರಾಜಸ್ಥಾನದಿಂದ ತರಲಾಗುತ್ತಿದೆ. ಕಲ್ಲುಗಳನ್ನು ಭಾರತ ಶಿಲ್ಪಿಗಳು ಕೈಯಿಂದ ಕೆತ್ತಲಿದ್ದಾರೆ. ಬಳಿಕ ಅವುಗಳನ್ನು ಅಬುಧಾಬಿಗೆ ಸಾಗಿಸಲಾಗುತ್ತದೆ.

ದೇವಸ್ಥಾನ ಪೂರ್ಣಗೊಂಡಾಗ ಮಧ್ಯಪ್ರಾಚ್ಯದ ಮೊದಲ ಸಾಂಪ್ರದಾಯಿಕ ಹಿಂದೂ ಶಿಲಾ ದೇವಾಲಯವಾಗಲಿದೆ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲೇ ಇಲ್ಲಿನ 13.5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಬೇಕಿರುವ ದೇವಸ್ಥಾನದ ಯೋಜನೆಗೆ ಅಬುಧಾಬಿ ಸರ್ಕಾರ ಅನುಮೋದನೆ ನೀಡಿತ್ತು. ನಾಗರಿಕ ಸಂಸ್ಥೆ ಹಾಗೂ ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಹಿಂದೂ ಧರ್ಮದ ಬಿಎಪಿಎಸ್‌ ಸ್ವಾಮಿನಾರಾಯಣ್‌ ಸಂಸ್ಥಾ ಈ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದೆ.

Comments are closed.