ಗಲ್ಫ್

ಹದಿನೈದರ ಸಂಭ್ರಮದಲ್ಲಿ ದ್ವೀಪದ ಬಿಲ್ಲವರ ಸಂಘಟನೆಯಾದ “ಬಹರೈನ್ ಬಿಲ್ಲವಾಸ್”; ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

Pinterest LinkedIn Tumblr

ಬಹರೈನ್; ಇಲ್ಲಿ ನೆಲೆಸಿರುವ ಅನಿವಾಸಿ ಬಿಲ್ಲವರ ಸಂಘಟನೆಯಾದ ‘ಬಹರೇನ್ ಬಿಲ್ಲವಾಸ್ ” ಈಗ ಹದಿನೈದರ ಸಂಭ್ರಮ . ಬಿಲ್ಲವ ಸಮುದಾಯದ ಕಷ್ಟ ನಷ್ಟಗಳಿಗೆ ಸ್ಪಂದಿಸಲೆಂದೇ ಒಂದೂವರೆ ದಶಕಗಳ ಹಿಂದೆ ಹುಟ್ಟಿಕೊಂಡ ಈ ಸಂಘಟನೆಯು ಈಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಹದಿನೈದು ಸಂವತ್ಸರಗಳನ್ನು ಪೂರೈಸಿದ್ದು ಹದಿನೈದರ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಇದಾಗಲೇ ರೂಪು,ರೇಷೆಗಳನ್ನು ಹಾಕಿಕೊಂಡಿದೆ . ಇದೇ ಅಕ್ಟೋಬರ್ ತಿಂಗಳ 26ರ ಶುಕ್ರವಾರ ಸಂಜೆ 5 ಘಂಟೆಗೆ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಇಲ್ಲಿನ ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಹೊರಾಂಗಣ ಕ್ರೀಡಾಂಗಣದಲ್ಲಿ ಈ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿದೆ . ನಾಡಿನ ಜನಪ್ರಿಯ ಕಲಾವಿದರುಗಳು , ಬಿಲ್ಲವ ಸಮುದಾಯದ ಗಣ್ಯರುಗಳು,ರಾಜಕೀಯ ಮುತ್ಸದ್ದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯ ಸಭಾ ಸದಸ್ಯರಾದ ಶ್ರೀ ಬಿ . ಕೆ . ಹರಿಪ್ರಸಾದ್ ,ಕಾರ್ಕಳದ ಶಾಸಕರಾದ ಶ್ರೀ ಸುನಿಲ್ ಕುಮಾರ್ ,ಮಂಗಳೂರು ವಿಶ್ವವಿದ್ಯಾನಿಲಯದ ‘ಬ್ರಹ್ಮಶ್ರೀ ನಾರಾಯಣಗುರು ಅಧ್ಯಾಯನ ಪೀಠ ” ದ ನಿರ್ದೇಶಕರಾದ ಶ್ರೀ ಮುದ್ದು ಮೂಡುಬೆಳ್ಳೆ ಪಾಲ್ಗೊಳ್ಳಲಿರುವರು . ತುಳು ,ಕನ್ನಡ ಹಾಗು ತಮಿಳು ಚಲನಚಿತ್ರಗಳ ಮೂಲಕ ಜನಪ್ರಿಯರಾಗಿರುವ ಖ್ಯಾತ ನಟಿ ಶ್ರೇಯ ಅಂಚನ್ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಪಾಲ್ಗೊಂಡು ತಮ್ಮ ನ್ರತ್ಯ ಪ್ರದರ್ಶನದಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ .

ನಾಡಿನ ಖ್ಯಾತ ಜಾದೂಗಾರ ,ಶಾಡೋ ಪ್ಲೇ , ಹಾಗು ಮಾತನಾಡುವ ಗೊಂಬೆ ಖ್ಯಾತಿಯ ,ಇಂಡಿಯನ್ ಗಾಟ್ ಟ್ಯಾಲೆಂಟ್ ನ ಅಂತಿಮ ಹಂತಕ್ಕೆ ತಲುಪುವ ಮೂಲಕ ಎಲ್ಲರ ಮನೆಮಾತಾಗಿದ್ದ ಪ್ರಹ್ಲಾದ ಆಚಾರ್ಯರವರು ತಮ್ಮ ವೈವಿಧ್ಯಮಯ ಕಲಾಪ್ರದರ್ಶನದಿಂದ ಕಲಾಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿಸಲಿದ್ದಾರೆ . ದ್ವೀಪದ ಬಿಲ್ಲವ ಸಮುದಾಯದ ಪ್ರತಿಭಾವಂತ ಕಲಾವಿದರುಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ರಂಗದ ಮೇಲೆ ಮೂಡಿ ಬರಲಿದೆ . ನಾಡಿನ ಹೆಸರಾಂತ ನಿರೂಪಕ ಶ್ರೀ ನಿತೀಶ್ ಪೂಜಾರಿ ತಮ್ಮ ಮಾತಿನ ಲೇಪನದಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿದ್ದಾರೆ . “ಬಹರೈನ್ ಬಿಲ್ಲವಾಸ್ ‘ ನ 15 ವರುಷಗಳ ಚಟುವಟಿಕೆಗಳ ಸಮಗ್ರ ಚಿತ್ರಣ ನೀಡುವ ವರ್ಣರಂಜಿತ ವಾರ್ಷಿಕ ಸ್ಮರಣಿಕೆ ” ತುಡರ್ ” ಇದೆ ಸಂಧರ್ಭದಲ್ಲಿ ಬಿಡುಗಡೆಯಾಗಲಿದೆ .

ಈ ಸಂಭ್ರಮಾಚರಣೆಯ ಬಗೆಗಿನ ಸುದ್ಧಿಗೋಷ್ಠಿಯೊಂದನ್ನು ಇತ್ತೀಚೆಗೆ ಇಂಡಿಯನ್ ಕ್ಲಬ್ಬಿನಲ್ಲಿ ಆಯೋಜಿಸಲಾಗಿದ್ದು ನಾಡಿನ ಪ್ರಸಿದ್ಧ ತೆಂಕು ತಿಟ್ಟು ಯಕ್ಷಗಾನ ಭಾಗವತರಾದಂತಹ ಶ್ರೀ ರವಿಚಂದ್ರ ಕಂಡಿಕಟ್ಟೆ ಯವರು ಕಾರ್ಯಕ್ರಮದ ಸಂಕ್ಷಿಪ್ತ ಚಿತ್ರಣವಿರುವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು . ” ಬಹರೈನ್ ಬಿಲ್ಲವಾಸ್ ” ನ ಪರವಾಗಿ ಅಧ್ಯಕ್ಷರಾದ ಶ್ರೀ ಅಜಿತ್ ಬಂಗೇರ ರವರು ಭಾಗವತರನ್ನು ಸ್ಮರಣಿಕೆಯನ್ನು ಕೊಟ್ಟು ಸಮ್ಮಾನಿಸಿದರು . ತದನಂತರ ಸುದ್ಧಿಗೋಷ್ಠಿಯಲ್ಲಿ ನೆರೆದವರನ್ನು ಉದ್ದೇಶಿಸಿ ಮಾತನಾಡಿದ “ಬಹರೈನ್ ಬಿಲ್ಲವಾಸ್ ” ನ ಅಧ್ಯಕ್ಷರಾದ ಶ್ರೀ ಅಜಿತ್ ಬಂಗೇರ ರವರು ಸಂಭ್ರಮಾಚರಣಾ ಕಾರ್ಯಕ್ರಮದ ವಿವರಗಳನ್ನು ನೀಡಿದರು .. ಈ ಸಾಂಸ್ಕ್ರತಿಕ ಕಾರ್ಯಕ್ರಮವು ದ್ವೀಪದ ಬಿಲ್ಲವ ಸಮುದಾಯಡಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗುವುದು ಮಾತ್ರವಲ್ಲದೆ ನಾಡಿನ ಖ್ಯಾತ ಕಲಾವಿದರು ಎಲ್ಲರನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು ಅಲ್ಲದೆ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡ ,ತುಳು ಸಮುದಾಯದವರಿಗೆ ಮುಕ್ತ ಪ್ರವೇಶವಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ವರದಿ- ಕಮಲಾಕ್ಷ ಅಮೀನ್

Comments are closed.