ಗಲ್ಫ್

“ವಿಶ್ವ ತುಳು ಸಮ್ಮೇಳನ ದುಬಾಯಿ-2018” ದುಬಾಯಿಯ ವಿಶೇಷ ಸಭೆಯಲ್ಲಿ ನೂತನ ಲಾಂಛನ ಬಿಡುಗಡೆ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ “ವಿಶ್ವ ತುಳು ಸಮ್ಮೇಳನ ದುಬಾಯಿ” 2018 ನವೆಂಬರ್ 23ನೇ ತಾರೀಕು ಶುಕ್ರವಾರ ಮತ್ತು 24ನೇ ಶನಿವಾರ ದುಬಾಯಿಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ 2018 ಜುಲೈ 27ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ದುಬಾಯಿ ಮಾರ್ಕೊಪೋಲ್ ಹೋಟೆಲ್ ಸಭಾಂಗಣದಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕರು ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಲಹಾ ಸಮಿತಿಯ ಸದಸ್ಯರಾದ ಶ್ರೀ ಶೋಧನ್ ಪ್ರಸಾದ್ ಸರ್ವರನ್ನು ಸ್ವಾಗತಿಸಿದರು. “ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ” ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.

ಮುಖ್ಯ ಸಂಘಟಕರು ಸರ್ವೋತ್ತಮ ಶೆಟ್ಟಿಯವರು ವಿಶ್ವ ತುಳು ಸಮ್ಮೇಳನ ದುಬಾಯಿ 2018 ರ ಪೂರ್ಣ ವಿವರಗಳನ್ನು ಸಂಕ್ಷಿಪ್ತವಾಗಿ ಸಭೆಯಲ್ಲಿ ವಿವರಿಸಿ, ಸಮ್ಮೇಳನದ ಪೂರ್ವ ತಯಾರಿಯಲ್ಲಿ ಸೂಕ್ತ ಮಾರ್ಗದರ್ಶವನ್ನು ನೀಡಿ ಸರ್ವ ಸದಸ್ಯರು ಪೂರ್ಣ ಸಹಕಾರ ನೀಡಿ ಅತ್ಯಂತ ಜವಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಿ, ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡರು. ಸಭೆಯಲ್ಲಿ ಸಲಹ ಸಮಿತಿಯ ಸದ್ಯರುಗಳಾದ ಶ್ರೀಯುತರುಗಳಾದ ಬಿ. ಕೆ. ಗಣೇಶ್ ರೈ, ಶೋಧನ್ ಪ್ರಸಾದ್, ದೇವ್ ಕುಮಾರ್ ಕಾಂಬ್ಲಿ, ಅಜ್ಮಲ್, ಸತೀಶ್ ಪೂಜಾರಿ, ಯೋಗೇಶ್ ಪ್ರಭು, ನೋವೆಲ್ ಡಿ’ ಅಲ್ಮೇಡಾ, ಶ್ರೀಮತಿ ಜ್ಯೋತಿಕಾ ಹರ್ಷ ಶೆಟ್ಟಿ, ಶ್ರೀಮತಿ ಸ್ಮಿತಾ ಪ್ರಸನ್ನ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶ್ರೀ ಸುಧೀರ್ ಕುಮಾರ್ ಶೆಟ್ಟಿಯವರಿಂದ “ವಿಶ್ವ ತುಳು ಸಮ್ಮೇಳನ-ದುಬಾಯಿ ಅಧಿಕೃತ ಲಾಂಛನ ಲೋಕಾರ್ಪಣೆ

“ವಿಶ್ವ ತುಳು ಸಮ್ಮೇಳನ ದುಬಾಯಿ 2018” ಅಧಿಕೃತ ಲಾಂಛನವನ್ನು ಯು.ಎ.ಇ. ಎಕ್ಸ್ಚೇಂಜ್ ಗ್ಲೋಬಲ್ ಅಪರೇಶನ್ಸ್ ಅಧ್ಯಕ್ಷರಾದ ಶ್ರೀ ಸುಧೀರ್ ಕುಮಾರ ಶೆಟ್ಟಿಯವರು ಅನಾವರಣಗೊಳಿಸಿ, ಲೋಕಾರ್ಪಣೆಮಾಡಿದರು. ಶ್ರೀಯುತ ಸುಧೀರ್ ಶೆಟ್ಟಿಯವರು ವಿಶ್ವ ತುಳು ಸಮ್ಮೇಳನದ ಪೂರ್ವ ತಯಾರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಯಶಸ್ಸಿಗೆ ಶುಭವನ್ನು ಹಾರೈಸಿದರು.

“ವಿಶ್ವ ತುಳು ಸಮ್ಮೇಳನ ದುಬಾಯಿ 2018” ಲಾಂಛನ ವನ್ನು ತುಳುನಾಡಿನ ಮತ್ತು ಗಲ್ಫ್ ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಸಂಯೋಜಿಸಿ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಿರುವ ಕ್ರಿಯಾತ್ಮಕ ಕಲಾ ನಿರ್ದೇಶಕರಾದ ಶ್ರೀ ಬಿ. ಕೆ. ಗಣೇಶ್ ರೈಯವರು ಲಾಂಚನದ ಬಗ್ಗೆ ಅತೀ ಸೂಕ್ಷ್ಮವಾಗಿ ಸಭೆಯ ಮುಂದೆ ವಿವರಣೆ ನೀಡಿದರು.

ಸ್ಮರಣ ಸಂಚಿಕೆಗೆ ಹೆಸರು ಸೂಚಿಸುವ ಸ್ಪರ್ಧೆಯಲ್ಲಿ “ವಿಶ್ವ ತುಳು ಐಸಿರಿ” ಆಯ್ಕೆ

ಅರಬ್ ಸಂಯುಕ್ತ ಸಂಸ್ಥಾದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ “ವಿಶ್ವ ತುಳು ಸಮ್ಮೇಳನ ದುಬಾಯಿ – 2018” ಸಮ್ಮೇಳನದ ಸವಿ ನೆನಪಿಗಾಗಿ ಲೋಕಾರ್ಪಣೆ ಗೊಳ್ಳಲಿರುವ ಸ್ಮರಣ ಸಂಚಿಕೆಗೆ ಹೆಸರು ಸೂಚಿಸಿ ಪ್ರಕಟಣೆ ನೀಡಿ ಆಹ್ವಾನಿಸಲಾಗಿದ್ದು ಇಲ್ಲಿಯವರೆಗೆ 166 ಹೆಸರುಗಳು 22 ಮಂದಿ ತುಳು ಅಭಿಮಾನಿಗಳಿಂದ ಹೆಸರುಗಳನ್ನು ಸ್ವೀಕರಿಸಲಾಗಿತ್ತು.

ಹಿರಿಯ ಸಾಹಿತಿಗಳು ತುಳು ಜ್ಞಾನಭಂಡಾರ ಡಾ. ಬಿ. ಎ. ವಿವೇಕ್ ರೈ ಮತ್ತು ಮುಂಬಯಿಯಲ್ಲಿ ನೆಲೆಸಿರುವ ಡಾ. ಸುನಿತಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ಶ್ರೀ ಬಿ. ಕೆ. ಗಣೇಶ್ ರೈ ಸೂಚಿಸಿದ್ದ ಹೆಸರು “ವಿಶ್ವ ತುಳು ಐಸಿರಿ” ಹೆಸರನ್ನು ಆಯ್ಕೆಮಾಡಲಾಯಿತು.

ಶ್ರೀಯುತ ಶೋಧನ್ ಪ್ರಸಾದ್ ರವರು ಸಮ್ಮೇಳನದ ಸಂದರ್ಭದಲ್ಲಿ ವಿವಿಧ ಹಂತದ ಕಾರ್ಯಯೋಜನೆಯನ್ನು ಆಕರ್ಷಕ ವೈವಿಧ್ಯಮಯ ಚಿತ್ರದೊಂದಿಗೆ ಡಿಜಿಟಲ್ ಡಿಸ್ ಪ್ಲೆ ಯೊಂದಿಗೆ ವಿವರಿಸಿದರು

ವಿಶ್ವ ತುಳು ಸಮ್ಮೇಳನ ದುಬಾಯಿ-2018 ಒಂದು ಪಕ್ಷಿನೋಟ…

ಸಾಗರೊತ್ತರ ತುಳುವರು, ಅಖಿಲಭಾರತ ತುಳು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗುವ ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು – ಪದ್ಮ ವಿಭೂಷಣ ಪುರಸ್ಕೃತ ಪರಮ ಪೂಜ್ಯ ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷರಾಗಿ ಅಬುಧಾಬಿ ಎನ್. ಎಂ. ಸಿ. ಸಮೂಹ ಸಂಸ್ಥೆಯ ಸ್ಥಾಪಕರು ಮತ್ತು ಚೇರ್ಮನ್ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಮತ್ತು ಮುಸ್ಲಿಂ ಪ್ರವಚನಕಾರರು, ಅತಿಥಿಗಳಾಗಿ ಕರ್ನಾಟಕದಿಂದ ಗಣ್ಯಾತಿ ಗಣ್ಯರು ಹಾಗೂ ಸಾಗರದಾಚೆಯ ಗಲ್ಫ್, ಅಮೇರಿಕಾ, ಆಸ್ಟ್ರೇಲಿಯಾ, ಯು.ಕೆ. ತುಳು ಸಂಘಟನೆಗಳ ಅಧ್ಯಕ್ಷರುಗಳು ಬರುತ್ತಾರೆ.

ಹೊರನಾಡ ತುಳು ಸಂಘಟನೆಗಳಾದ ಮುಂಬೈ, ದೆಹಲಿ, ಬರೋಡ, ನಾಸಿಕ್, ಸಾಂಗ್ಲಿ, ಪುಣೈ, ಚೆನೈ, ಹುಬ್ಬಳ್ಳಿ, ದಾರವಾಡ, ಬೆಳಗಾಂ ಇತ್ಯಾದಿ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.ವಿಶ್ವ ತುಳು ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆ ಲೋಕಾರ್ಪಣೆ ಗೊಳ್ಳಲಿದೆ.

ತುಳು ಜಾನಪದ ನೃತ್ಯ ಸ್ಪರ್ಧೆ ಮತ್ತು ತುಳು ಜನಪದ ಗಾಯನ ಸ್ಪರ್ಧೆ ನಡೆಯಲಿದ್ದು ಗಲ್ಫ್ ರಾಷ್ಟ್ರಗಳಾದ ಮಸ್ಕತ್, ಬಹರೈನ್, ಕತ್ತಾರ್, ಕುವೈತ್, ಸೌದಿ ಅರೇಬಿಯಾ, ಒಮಾನ್ ಮತ್ತು ಯು.ಎ.ಇ.ಯ ಹಲವು ಜಾನಪದ ನೃತ್ಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ.

ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸ ಮಂಜರಿ, ತುಳು ಸಾಹಿತ್ಯ ಗೋಷ್ಠಿ – ತುಳು ಕೋಡೆ – ಇನಿ – ಎಲ್ಲೆ. ದೈವಾರಾಧನೆ ಮತ್ತು ಭೂತಾರಾಧನೆ, ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಥಿ, ತುಳು ರಂಗ ಭೂಮಿ ಮತ್ತು ಚಲನ ಚಿತ್ರ ಗೋಷ್ಠಿ ಮತ್ತು ಅನಿವಾಸಿ ಗೋಷ್ಠಿಗಳಲ್ಲಿ ತುಳುನಾಡಿನಿಂದ ಹಲವಾರು ಸಾಹಿತಿಗಳು ವಿದ್ವಾಂಸರು ಕಲಾವಿದರು ಭಾಗವಹಿಸಲಿದ್ದಾರೆ.

ವಿಶ್ವ ತುಳು ಸಮ್ಮೇಳನ ದುಬಾಯಿ 2018 ರ ಕಾರ್ಯಾಕಾರಿ ತಂಡವನ್ನು ರಚನೆ

ವಿವಿಧ ಸಂಘ ಸಂಸ್ಥೆಗಳ ಮುಖಸ್ಥರನ್ನು ಆಯ್ಕೆ ಮಾಡಿ ವಿಶ್ವ ತುಳು ಸಮ್ಮೇಳನ ದುಬಾಯಿ 2018 ರ ಕಾರ್ಯಾಕಾರಿ ತಂಡವನ್ನು ರಚಿಸಿ ಜವಬ್ಧಾರಿಯನ್ನು ವಹಿಸಿ ಕೊಡಲಾಯಿತು.

ಸಭೆಯಲ್ಲಿ ಶ್ರೀ ಪ್ರಕಾಶ್ ರಾವ್ ಪಯ್ಯಾರ್, ಶ್ರೀ ಹರೀಶ್ ಶೇರಿಗಾರ್, ಶ್ರೀಮತಿ ಜ್ಯೋತಿಕಾ ಹರ್ಷ ಶೆಟ್ಟಿ, ಶ್ರೀಮತಿ ರೇಶ್ಮಾ ದೀವೆಶ್ ಆಳ್ವ, ಶ್ರೀಮತಿ ಲತಾ ಹೆಗ್ಡೆಯವರು ಸಲಹೆ ಸೂಚನೆಗಳನ್ನು ನೀಡಿದರು.

ವಿಶ್ವ ತುಳು ಸಮ್ಮೇಳನ ದುಬಾಯಿ ವಿಶೇಷ ಸಭೆಗೆ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯ ಪ್ರವೃತ್ತರಾಗಿರುವ ಕರ್ನಾಟಕ ಪರ ಸಂಘಟನೆಗಳಾದ ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಯು.ಎ.ಇ. ತುಳು ಕೂಟ, ನಮ ತುಳುವೆರ್, ಯು.ಎ.ಇ. ಬಂಟ್ಸ್, ಬಿಲ್ಲವಾಸ್ ದುಬಾಯಿ, ಬ್ಯಾರೀಸ್ ಕಲ್ಚರಲ್ ಫೋರಂ, ಬ್ಯಾರೀಸ್ ವೆಲ್ಫೆರ್ ಫೋರಂ, ಅಬುಧಾಬಿ, ಜೈನ್ ಮಿಲನ್, ಗಮ್ಮತ್ ಕಲಾವಿದರು, ಯಕ್ಷಮಿತ್ರರು, ಧ್ವನಿ ಪ್ರತಿಷ್ಠಾನ, ಕೆಮ್ಮಣ್ಣು, ಪದ್ಮಶಾಲಿ ಸಮುದಾಯ, ದಾರನ್ನೂರ್ ಯು.ಎ.ಇ. ಓಶಿಯನ್ ಕಿಡ್ಸ್, ವಿಶ್ವಕರ್ಮ ಸೇವಾ ಸಮಿತಿ, ತುಳು ಪಾತೆರುಗ ತುಳು ಒರಿಪಾಗ ಸಂಘಟನೆಗಳ ಮುಖ್ಯಸ್ಥರುಗಳು ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯ ಅಂತಿಮ ಘಟ್ಟದಲ್ಲಿ ಶ್ರೀ ಸತೀಶ್ ಪೂಜಾರಿಯವರು ಸರ್ವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.

ದುಬಾಯಿ ಮಾರ್ಕೋಪೋಲೊ ಹೋಟೆಲ್ ಮಾಲಿಕರಾದ ಶ್ರೀ ಕರುಣಾಕರ ಶೆಟ್ಟಿಯವರು ಸರ್ವರಿಗೂ ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.

ಬಿ. ಕೆ. ಗಣೇಶ್ ರೈ – ಯು.ಎ.ಇ.
ಛಾಯಚಿತ್ರ: ಅಶೋಕ್ ಬೆಳ್ಮಣ್

Comments are closed.