ಗಲ್ಫ್

ಅನಿವಾಸಿಗಳು ತಮ್ಮ ಸುಭದ್ರ ಭವಿಷ್ಯ ಕ್ಕೆ ಹೆಚ್ಚು ಒತ್ತು ಕೊಡಬೇಕು : ಸಯ್ಯದ್ ಸಿರಾಜ್ ಅಹ್ಮದ್

Pinterest LinkedIn Tumblr

ಅಬು ಧಾಬಿ : ತಮ್ಮ ಜೀವನದ ಅತೀ ಹೆಚ್ಚು ಭಾಗವನ್ನು ವಿದೇಶದಲ್ಲಿ ಕಳೆಯುವ ಅನಿವಾಸಿಗಳು ತಮ್ಮ ಭವಿಷ್ಯದ ಸುಭದ್ರತೆಗೆ ಭದ್ರ ಅಡಿಪಾಯ ಹಾಕಿಕೊಳ್ಳಬೇಕು. ಅನಿವಾಸಿಗಳು ಭಾರತೀಯ ಅರೋಗ್ಯ ವಿಮೆ ಮತ್ತು ತೆರಿಗೆಯ ಬಗ್ಗೆ ಸಮಗ್ರ ಪರಿಜ್ಞಾನ ಹೊಂದಬೇಕು ಎಂದು ಅಬು ಧಾಬಿ ಕಮರ್ಷಿಯಲ್ ಬ್ಯಾಂಕ್ ನ ನಿವೃತ್ತ ವಿಪಿ ಸಯ್ಯದ್ ಸಿರಾಜ್ ಅಹ್ಮದ್ ರವರು ಕರೆ ನೀಡಿದರು.

ಅವರು ಇತ್ತೀಚೆಗೆ ಅಬುಧಾಬಿ ಸೋಶಿಯಲ್ ಸೆಂಟರ್ ನಲ್ಲಿ ಅಬುಧಾಬಿ ಸಹೆಬಾನ್ ಚಾಪ್ಟರ್ ಆಯೋಜಿಸಿದ್ದ ಇಫ್ತಾರ್ ಸಂಗಮ ಕಾರ್ಯಕ್ರಮದ ಮುಖ್ಯ ಪ್ರಾಸ್ತಾವಿಕ ಭಾಷಣಗಾರರಾಗಿ ಮಾತನಾಡುತಿದ್ದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದಲಾಗುತ್ತಿರುವ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಭವಿಷ್ಯತ್ತಿನ ಬಗ್ಗೆ ನಿಖರವಾದ ಯೋಜನೆ ರೂಪು ರೇಷೆಗಳನ್ನು ಹೊಂದಬೇಕು. ನಮ್ಮ ವಿದ್ಯಾರ್ಥಿಗಳು ಕಲಿಯುವಾಗ ಉದ್ಯೋಗಾವಕಾಶ ವಿಪುಲವಾಗಿರುವ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಸಹೆಬಾನ್ ಸಮುದಾಯ ಆರ್ಥಿಕವಾಗಿ ಸದ್ರಡವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಹೆಬಾನ್ ನ ಹತ್ತು ಹಲವು ಯೋಜನೆಗಳ ಭಾಗವಾಗಿ ತಮ್ಮ ನಾಡಿಗೆ ಮರಳಿ ಹೋಗುತ್ತಿರುವ ಅನಿವಾಸಿಗಳಿಗೆ ಮಾರ್ಗದರ್ಶಿಯಾಗಿ ಮಂಗಳೂರು ಮತ್ತು ಉಡುಪಿಯಲ್ಲಿ ಹೆಲ್ಪ್ ಡೆಸ್ಕ್ , ಕೆರಿಯರ್ ಗೈಡೆನ್ಸ್ ಸೆಲ್ ಗಳನ್ನೂ ಆರಂಭಿಸಿ ಸೂಕ್ತ ಸಲಹೆ ಸಹಕಾರ ನೀಡುವಲ್ಲಿ ಸಹೆಬಾನ್ ಯಶಸ್ವಿಯಾಗುತ್ತಿದೆ, ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈ ಹಿಂದೆ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ನಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಸಿರಾಜ್ ಅಹ್ಮದ್ ರವರು ಪ್ರಸ್ತುತ ತಾಯ್ನಾಡಿನಲ್ಲಿ ನೆಲೆಸಿದ್ದು. ಅಬು ಧಾಬಿ ಸಹೆಬಾನ್ ಸಮಿತಿಯ ವಿಶೇಷ ಆಹ್ವಾನದ ಮೇರೆಗೆ ಇಫ್ತಾರ್ ಸಂಗಮಕ್ಕೆ ಆಗಮಿಸಿದ್ದರು.

ವಿದೇಶದಲ್ಲಿ ನೆಲೆಸಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಮೂಲದ ಉರ್ದು ಮಾತೃ ಭಾಷಿಗರು ತಮ್ಮ ಸಾಮುದಾಯಿಕ ಬೇರುಗಳನ್ನು ಕಾಪಿಟ್ಟುಕೊಂಡು ಹುಟ್ಟು ಹಾಕಿದ ಸಂಘಟನೆ ಯಾಗಿರುವ ಸಹೆಬಾನ್ ಅಬು ಧಾಬಿ ಕಳೆದ ಮೂವತ್ತು ವರ್ಷಗಳಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ.

ಪಾರಂಪರಿಕ ಖಿರಾಅತ್ ಪಠಣ ದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅರಬ್ ಸಂಯುಕ್ತ ಸಂಸ್ಥಾನದ ಹಲವಾರು ಕಡೆಗಳಿಂದ ಎಂಟು ನೂರಕ್ಕೂ ಮಿಕ್ಕ ಸಂಖ್ಯೆಯಯಲ್ಲಿ ಜನರು ಭಾಗವಹಿಸಿ ಇಫ್ತಾರ್ ಸಂಗಮವನ್ನು ಯಶಸ್ವಿ ಗೊಳಿಸಿದರು.

ಬ್ಯಾರೀಸ್ ಮತ್ತು ಸಹೆಬಾನ್ ಸಮುದಾಯದ ಅನಿವಾಸಿ ಕನ್ನಡಿಗರ ಸಮ್ಮಿಲನಕ್ಕೂ ಈ ಇಫ್ತಾರ್ ಸಂಗಮ ವೇದಿಕೆಯಾಯಿತು. ಟೀಮ್ ಸಹೆಬಾನ್ ತಂಡದ ಸದಸ್ಯರು ಈ ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ ಕಾರಣೀಭೂತರಾದರು.

Comments are closed.