ಗಲ್ಫ್

ಮಸ್ಕತ್’ನಲ್ಲಿ ಡಿಸೆಂಬರ್ 8 ರಂದು ‘ಮಾರ್ಚ್ 22’ ಸಿನೆಮಾ ಬಿಡುಗಡೆ

Pinterest LinkedIn Tumblr
 ಒಮಾನ್: ಕನ್ನಡ ಚಿತ್ರರಂಗದಲ್ಲಿ ಭಾರೀ ಸುದ್ದಿ ಮಾಡಿರುವ ಜೊತೆಗೆ ಕರ್ನಾಟಕ ಹಾಗು ಯುಎಇಯಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ‘ಮಾರ್ಚ್ 22’ ಸಿನೆಮಾ ಇದೇ ಡಿಸೆಂಬರ್ 8 ರಂದು ಒಮಾನಿನ ಮಸ್ಕತ್’ನಲ್ಲಿ ಬಿಡುಗಡೆಗೊಳ್ಳಲಿದೆ.

ಒಮಾನಿನ ಮಸ್ಕತ್’ನ ಸಿಬಿಡಿ ರುವಿಯ ಸ್ಟಾರ್ ಸಿನೆಮಾಸ್’ನಲ್ಲಿ ಡಿಸೆಂಬರ್ 8 ರಿಂದ ಮಧ್ಯಾಹ್ನ 3 ಗಂಟೆಗೆ ಪ್ರದರ್ಶನ ಕಾಣಲಿದೆ.

ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ಗಾಯಕ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಈ ಸಿನೆಮಾ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಾರ್ಚ್ 22’ ಸಿನೆಮಾ ಕರ್ನಾಟಕದಾದ್ಯಂತ ಬಿಡುಗಡೆ ಕಂಡಿದ್ದು, ಸಿನೆಮಾ ಬಗ್ಗೆ ನಿರೀಕ್ಷೆಗೂ ಮೀರಿದ ಮೆಚ್ಚುಗೆ, ಪ್ರತಿಕ್ರಿಯೆ, ಅಭಿಪ್ರಾಯಗಳು ವ್ಯಕ್ತವಾಗಿವೆ.

ಸ್ಟಾರ್ ಸಿನೆಮಾಸ್’ನಲ್ಲಿ ಚಿತ್ರದ ಮುಂಗಡ ಟಿಕೆಟ್(Advance booking ) ವಿತರಿಸಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅವಿನಾಶ್ +96897467737 ಅಥವಾ ಅರುಣ್ +96897324795 ಅವರನ್ನು ಸಂಪರ್ಕಿಸಬಹುದು.

ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಅಕ್ಟೊಬರ್ 6 ರಂದು ಬಿಡುಗಡೆ ಕಂಡ ಈ ಸಿನೆಮಾಗೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಭರ್ಜರಿ ಪ್ರದರ್ಶನ ಕಂಡಿತ್ತು.

ಮಾಧ್ಯಮಗನ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಿನೆಮಾ ನೀರಿಗೆ ಸಂಬಂಧಿಸಿ ಹಿಂದೂ-ಮುಸ್ಲಿಮರ ಭಾವೈಕ್ಯತೆ, ಸಾಮರಸ್ಯ, ಸಮಾಜಮುಖಿ ಚಿಂತನೆ ಬಗ್ಗೆ ಮೂಡಿಸುವ ಜಾಗೃತಿಯನ್ನು ಸಿನಿಪ್ರಿಯರು ಕೊಂಡಾಡಿದ್ದಾರೆ.

ಚಿತ್ರದಲ್ಲಿ ಅನಂತ್ ನಾಗ್, ಗೀತಾ ಜೊತೆಗೆ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್, ಆರ್ಯವರ್ಧನ್ ಮತ್ತು ಕಿರಣ್ ರಾಜ್, ಮೇಘಶ್ರೀ, ದೀಪ್ತಿ ಶೆಟ್ಟಿ, ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ತಮ್ಮ ನಟನೆಗಳಿಗೆ ಜೀವ ತುಂಬಿದ್ದಾರೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಮಣಿಕಾಂತ್ ಕದ್ರಿ ಹಾಗೂ ರವಿಶೇಖರ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್ ರಾಜಮಗ, ಅಕ್ಷತಾ ರಾವ್ ಅವರು ಹಾಡಿದ್ದು, ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ.

Comments are closed.